ಬಜರಂಗದಳ ಕಾರ್ಯಕರ್ತನ ಮೇಲಿನ ಹಲ್ಲೆ ಪ್ರಕರಣ : ಹಳೆ ಶಿವಮೊಗ್ಗ ಭಾಗದಲ್ಲಿ ಬಂದೋಬಸ್ತ್

Update: 2020-12-04 04:09 GMT

ಶಿವಮೊಗ್ಗ : ಬಜರಂಗದಳ ಕಾರ್ಯಕರ್ತನ ಮೇಲಿನ ಹಲ್ಲೆ, ಬಳಿಕ ನಡೆದ ಗಲಭೆ ಹಿನ್ನೆಲೆಯಲ್ಲಿ ಹಳೆ ಶಿವಮೊಗ್ಗ ಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ನೈಟ್ ಬೀಟ್ ವ್ಯವಸ್ಥೆಯನ್ನು ಚುರುಕುಗೊಳಿಸಲಾಗಿದೆ.

ಹಳೆ ಶಿವಮೊಗ್ಗ ಭಾಗ ಪ್ರವೇಶಿಸುವ ಎಲ್ಲಾ ಕಡೆಗಳಲ್ಲೂ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಕರ್ಫ್ಯೂ ಜಾರಿಯಾಗಿರುವುದರಿಂದ ಈ ಭಾಗದಲ್ಲಿ ವಿನಾಕಾರಣ ಮನೆಯಿಂದ ಯಾರೂ ಹೊರ ಬರುವಂತಿಲ್ಲ. ಇನ್ನು, ಹಳೆ ಶಿವಮೊಗ್ಗ ಭಾಗಕ್ಕೆ ಯಾರಿಗೂ ಪ್ರವೇಶ ನೀಡುತ್ತಿಲ್ಲ. ನಗರದ ವಿವಿಧೆಡೆ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದು, ನಾಖಾಬಂಧಿ ಹಾಕಲಾಗಿದೆ.

ಗಾಂಧಿ ಬಜಾರ್ ಸೇರಿದಂತೆ ಹಳೆ ಶಿವಮೊಗ್ಗ ಭಾಗದಲ್ಲಿ ನೈಟ್ ಬೀಟ್ ಬಿಗಿಗೊಳಿಸಲಾಗಿದೆ. ಗಣಪತಿ ಹಬ್ಬದ ಸಂದರ್ಭ ಕೈಗೊಳ್ಳಲಾಗುತ್ತಿದ್ದ ಮಾದರಿಯಲ್ಲೇ, ನೈಟ್ ಬೀಟ್ ಚೀತಾ ವ್ಯವಸ್ಥೆ ಮಾಡಲಾಗಿದೆ. ಯಾವುದೆ ಅಹಿತಕರ ಘಟನೆ ಸಂಭವಿಸಿದರೂ, ಪೊಲೀಸರು ತಕ್ಷಣಕ್ಕೆ ಸ್ಪಂದಿಸಿ, ಪರಿಸ್ಥಿತಿಯನ್ನು ಕಂಟ್ರೋಲ್‍ಗೆ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಬ್ಬರು ಎಸ್ ಪಿ ಗಳ ಆಗಮನ

ಗಲಭೆ ನಿಯಂತ್ರಣ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಹೆಚ್ಚುವರಿಯಾಗಿ ಇಬ್ಬರು ಎಸ್‍ಪಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ. ಹೊರ ಜಿಲ್ಲೆಯಿಂದ ಬಂದಿರುವ ಇಬ್ಬರು ಎಸ್‍ಪಿಗಳು ಹಳೆ ಶಿವಮೊಗ್ಗದಲ್ಲಿ ರಾತ್ರಿ ಗಸ್ತು ನಿರತರಾಗಿದ್ದರು.

ಹೊರ ಜಿಲ್ಲೆಯಿಂದ ಹೆಚ್ಚುವರಿ ಸಿಬ್ಬಂದಿ

ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳು ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಹೆಚ್ಚುವರಿ ಸಿಬ್ಬಂದಿಗಳನ್ನು ಪ್ರಮುಖ ರಸ್ತೆಗಳು, ಸರ್ಕಲ್‍ಗಳು ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News