ಕರ್ನಾಟಕ ಬಂದ್ ಗೆ ಮಿಶ್ರ ಪ್ರತಿಕ್ರಿಯೆ: ಹಲವೆಡೆ ಕನ್ನಡ ಪರ ಹೋರಾಟಗಾರರು ಪೊಲೀಸ್ ವಶಕ್ಕೆ

Update: 2020-12-05 04:58 GMT

ಬೆಂಗಳೂರು, ಡಿ.5-ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಇಂದು ಕನ್ನಡ ಪರ ಸಂಘಟನೆಗಳು ನೀಡಿರುವ ಬಂದ್ ಕರೆಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವೆಡೆ ಪ್ರತಿಭಟನೆ, ರಸ್ತೆ ನಡೆಸಿದ ಕನ್ನಡಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿರುವುದು ವರದಿಯಾಗಿದೆ.

ಬೆಂಗಳೂರಿನ ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸಿದ ಹಲವು ಕನ್ನಡ ಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.

ನಗರದ ಟೌನ್​ಹಾಲ್​  ಮುಂಭಾಗ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಈ ಸಂದರ್ಭದಲ್ಲಿ ಪ್ರತಿಭಟನೆಗೆ ಅನುಮತಿ ನೀಡಿಲ್ಲ ಎಂಬ ಕಾರಣಕ್ಕೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಚಾಮರಾಜಪೇಟೆ ಸಿಎಆರ್ ಮೈದಾನಕ್ಕೆ ಕರೆದೊಯ್ದುರು‌.

ಕರ್ನಾಟಕ-ತಮಿಳುನಾಡು ಬಸ್ ಸಂಚಾರಕ್ಕೆ ಸ್ಥಗಿತ

ಬೆಂಗಳೂರಿನಿಂದ ತಮಿಳುನಾಡಿಗೆ ಹೋಗುವಂತಹ ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ಮಾಡಿ, ರಾಜ್ಯ ಸರಕಾರ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಮಿಳುನಾಡು- ಕರ್ನಾಟಕ ನಡುವೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಆನೇಕಲ್ ತಾಲೂಕು ಅಧ್ಯಕ್ಷ ಗಜೇಂದ್ರ, ಗಡಿಪ್ರದೇಶದ ಕನ್ನಡಿಗರು ಉದ್ಯೋಗ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಬರೆಹರಿಸುವುದನ್ನು ಬಿಟ್ಟು, ರಾಜಕೀಯ ಲಾಭಕ್ಕಾಗಿ ಮರಾಠ ಅಭಿವೃದ್ದಿ ನಿಗಮವನ್ನು ರಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳದಲ್ಲಿ ಶಾಸಕ ಯತ್ನಾಳ್​ರ ಅಣಕು ಶವಯಾತ್ರೆ

ಬಂದ್​ಗೆ ಬೆಂಬಲವಾಗಿ ಕೊಪ್ಪಳ ನಗರದಲ್ಲಿ ಪ್ರತಿಭಟನೆ ನಡೆಸಿದ ಕನ್ನಡ ಪರ ಸಂಘಟನೆಗಳು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಪರ ಹೋರಾಟಗಾರರನ್ನು 'ರೋಲ್​ಕಾಲ್​ ಹೋರಾಟಗಾರರು' ಎಂದು ಯತ್ನಾಳ್​ ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಅವರ ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಯತ್ನಾಳ್​ರ ಅಣಕು ಶವಯಾತ್ರೆ ಕೂಡಾ ನಡೆಸಿದರು.

ಕರಾವಳಿಯಲ್ಲಿ ನೀರಸ ಪ್ರತಿಕ್ರಿಯೆ

ಕರಾವಳಿಯಲ್ಲಿ ಬಂದ್ ಗೆ ಯಾವುದೇ ಪೂರಕ ಸ್ಪಂದನ ಕಂಡುಬಂದಿಲ್ಲ. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಎಂದಿನಂತೆ ಬಸ್ ಸಂಚಾರ ಆರಂಭವಾಗಿದೆ. ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಎಂದಿನಂತಿದೆ. ಜಿಲ್ಲೆಯಲ್ಲಿ ಯಾವುದೇ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿಲ್ಲ.

 ವಿಜಯಪುರದಲ್ಲಿ ಮಿಶ್ರ ಪ್ರತಿಕ್ರಿಯೆ

 ಕರ್ನಾಟಕ ಬಂದ್ ಗೆ ಗುಮ್ಮಟ ನಗರಿ ವಿಜಯಪುರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲಾದ್ಯಂತ ಎಂದಿನಂತೆ ಜನಜೀವನ ಆರಂಭವಾಗಿದ್ದು, ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಹಾಗೂ ಅಂಗಡಿ ಮುಂಗಟ್ಟು, ಆಟೋ ರಿಕ್ಷಾಗಳ ಓಡಾಟ ಎಂದಿನಂತೆ ಇವೆ.

ಯಾವುದೇ ಅಹಿತಕರ ಘಟನೆಗಳು ರಾಜ್ಯಾದ್ಯಂತ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News