ಡಿಸೆಂಬರ್ 15ರೊಳಗೆ ಎಲ್ಲ ಶಾಲೆಗಳನ್ನು ತೆರೆಯಲೇಬೇಕು

Update: 2020-12-05 06:40 GMT

ಡಿಸೆಂಬರ್ 15ರೊಳಗೆ ಬಾಲವಾಡಿಯಿಂದ 12ರವರೆಗಿನ ಎಲ್ಲಾ ತರಗತಿಗಳನ್ನು ಎಲ್ಲಾ ಶಾಲೆಗಳಲ್ಲಿ ತೆರೆಯಲೇ ಬೇಕು. ಇನ್ನು ಕಾಯುವುದಾಗದು.

ಶಾಲೆ ಮುಚ್ಚಿರುವುದೇ ತಪ್ಪು. ಇನ್ನು ತೆರೆಯದಿದ್ದರೆ ಅದು ಘನ ಘೋರ ಅಪರಾಧವಾಗುತ್ತದೆ, 3-20 ವರ್ಷದ ಎಲ್ಲರ ಮೇಲೂ ಶಾಶ್ವತವಾದ ಹಾನಿಯುಂಟು ಮಾಡಲಿದೆ. ಇವರಿಗೆ ಕೊರೋನ ಏನೂ ಮಾಡುವುದಿಲ್ಲ, ಮಾಡಿರುವುದಕ್ಕೆ ಯಾರ ಬಳಿಯಾದರೂ ಸಾಕ್ಷ್ಯಾಧಾರಗಳಿದ್ದರೆ ತೋರಿಸಿ. ಶಾಲೆ ಮುಚ್ಚಿರುವ ಈ ಮಹಾ ತಪ್ಪು ಹಾನಿ ಮಾಡಿದೆ, ಅದು ಶಾಶ್ವತವಾಗಿರಲಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ, ಸಿ.ಡಿ.ಸಿ., ಯುನಿಸೆಫ್ ಮತ್ತಿತರ ಅನೇಕ ಸಂಸ್ಥೆಗಳು ಈಗಾಗಲೇ ಬರೆದಿವೆ. ದಿನಕ್ಕೆ 2 ಗಂಟೆಗೂ ಹೆಚ್ಚು ಕಾಲ ಫೋನ್, ಟಿವಿ ಪರದೆ ನೋಡುತ್ತಿದ್ದರೆ 3-5 ವರ್ಷದ ಮಕ್ಕಳ ಭಾಷೆ, ಬರವಣಿಗೆ, ಗ್ರಹಿಕೆಗಳು ಕುಗ್ಗುತ್ತವೆ ಎಂದೂ, 5-7 ಗಂಟೆ ಬಳಸಿದರೆ ಮಿದುಳಿನ ಬೆಳವಣಿಗೆಯೇ ಕುಂಠಿತಗೊಂದು ಮಿದುಳು ತೆಳ್ಳಗಾಗಿ ಶಾಶ್ವತ ಹಾನಿಯಾಗುತ್ತದೆಂದೂ ಅಧ್ಯಯನಗಳು ತೋರಿಸಿವೆ. ಕೊರೋನ ನೆಪದಲ್ಲಿ ಶಾಲೆಗಳನ್ನು ಮುಚ್ಚಿದ್ದರಿಂದ ಮಕ್ಕಳ ಕಲಿಕೆಯು ನಿಂತದ್ದಷ್ಟೇ ಅಲ್ಲ, ಮಕ್ಕಳ ಸಾಗಣೆ, ದುಡಿತ, ಲೈಂಗಿಕ ದೌರ್ಜನ್ಯ, ಇತರ ದೌರ್ಜನ್ಯಗಳು, ಬಾಲ್ಯ ವಿವಾಹ, ಕುಪೋಷಣೆ ಎಲ್ಲವೂ ಬಹಳಷ್ಟು ಹೆಚ್ಚುತ್ತಿವೆ ಎಂಬ ವರದಿಗಳು ಎಲ್ಲೆಡೆಯಿಂದಲೂ ಪ್ರತಿನಿತ್ಯವೂ ಬರುತ್ತಿವೆ.

ಕರ್ನಾಟಕ ಸರಕಾರವೇ ಹೇಳಿರುವಂತೆ ರಾಜ್ಯದಲ್ಲಿ ಕೊರೋನ ಸಾವಿನ ಪ್ರಮಾಣ 0.07% ಅಂದರೆ ಹತ್ತು ಸಾವಿರಕ್ಕೆ ಒಬ್ಬರು. ಸೋಂಕಿತರಲ್ಲಿ 99% ಹೆಚ್ಚಿನವರು ಯಾವುದೇ ಚಿಕಿತ್ಸೆಯಿಲ್ಲದೆ ಮನೆಯಲ್ಲೇ ಇದ್ದು ಗುಣಮುಖರಾಗುತ್ತಾರೆ, ಸಾವಿರಕ್ಕೆ 4 ಮಂದಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗಬೇಕಾಗುತ್ತದೆ, ಅವರಲ್ಲಿ 70% ಆಧುನಿಕ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಾರೆ.

ಮಕ್ಕಳಲ್ಲಿ ರೋಗಲಕ್ಷಣಗಳಿರುವುದೇ ಅಪರೂಪ, ಸಮಸ್ಯೆಗಳಾಗುವುದು ಇನ್ನೂ ಅಪರೂಪ, ಸಾವುಂಟಾಗುವ ಸಾಧ್ಯತೆಗಳು ತೀರಾ ಕಡಿಮೆ. ಅಂದರೆ 10 ವರ್ಷಕ್ಕಿಂತ ಕೆಳಗಿನ ಮಕ್ಕಳು ಕೊರೋನದಿಂದ ಅತಿ ಹೆಚ್ಚು ಸುರಕ್ಷಿತರು, ಅವರನ್ನು ಮನೆಯೊಳಗೆ ಕೂಡಿ ಹಾಕುವುದಕ್ಕೆ ಯಾವ ಕಾರಣವೂ ಇಲ್ಲ.

ರಾಜ್ಯದಲ್ಲಿ ಮೃತ ಪಟ್ಟವರಲ್ಲಿ ಮಕ್ಕಳ (0-20 ವಯಸ್ಸು) ಪ್ರಮಾಣ 0.7%. ಮೃತರಲ್ಲಿ 10 ವರ್ಷಕ್ಕಿಂತ ಕೆಳಗಿನವರು 0.2%, 10-20ರವರು 0.5%. ಇವರೂ ಕೂಡ ಮೊದಲೇ ಅತಿ ಗಂಭೀರ ಸಮಸ್ಯೆಗಳನ್ನು ಹೊಂದಿದ್ದವರಾಗಿದ್ದರು. ಅಂದರೆ ಸಾಮಾನ್ಯ ಮಕ್ಕಳಿಗೆ ಕೊರೋನದಿಂದ ಅಪಾಯ ನಗಣ್ಯ, ಶಾಲೆ ಮುಚ್ಚುವ ಅಗತ್ಯವಂತೂ ಇಲ್ಲವೇ ಇಲ್ಲ.

ಕೊರೋನ ನಿಭಾಯಿಸುವುದರ ಮೂಲ ಉದ್ದೇಶದ ಬಗ್ಗೆಯೇ ವಿಷಯ ಸ್ಪಷ್ಟತೆ ಇಲ್ಲದಿರುವುದು ಈ ಎಲ್ಲ ಅವಾಂತರಗಳಿಗೆ ಕಾರಣ. ಕೊರೋನ ಸೋಂಕು ಉಂಟಾಗುವುದನ್ನು ತಡೆಯಲು ಸಾಧ್ಯವೇ ಇಲ್ಲ ಎಂದ ಮೇಲೆ ಅಂಥ ಉದ್ದೇಶದಿಂದ ಶಾಲೆ ಮುಚ್ಚುವುದು ಅಪರಾಧ. ಕೊರೋನ ನಿಭಾಯಿಸುವ ಉದ್ದೇಶ ತೀವ್ರ ಸಮಸ್ಯೆಗಳನ್ನು ಮತ್ತು ಸಾವುಗಳನ್ನು ತಡೆಯುವುದು, ಅದಕ್ಕೆ ಶಾಲೆ ಮುಚ್ಚಿ ಯಾವ ಪ್ರಯೋಜನವೂ ಇಲ್ಲ.

ಲಸಿಕೆಗಳು ಬರುವುದಕ್ಕೆ ಇನ್ನೂ ಕೆಲವು ತಿಂಗಳು ಬೇಕು, ಬಂದರೂ ಅವು ಮಕ್ಕಳಿಗೆ ದೊರೆಯವು, ಇಲ್ಲಾಗಲೀ, ಇತರ ದೇಶಗಳಲ್ಲಾಗಲೀ ಮಕ್ಕಳಿಗೆ ಲಸಿಕೆ ನೀಡುವ ಪ್ರಸ್ತಾವವೇ ಇಲ್ಲ. ಮಕ್ಕಳಿಗೆ ಕೊರೋನ ಬಾಧಿಸುವುದಿಲ್ಲ ಎಂದ ಮೇಲೆ ಅವುಗಳ ಅಗತ್ಯವೂ ಇಲ್ಲ.

ಆದ್ದರಿಂದ ಕೊರೋನಕ್ಕಾಗಿ ಶಾಲೆಗಳನ್ನು ಮುಚ್ಚಲು ಕಾರಣಗಳು ಸೊನ್ನೆ (ಯಾರಲ್ಲಾದರೂ ಸಾಕ್ಷ್ಯಾಧಾರಿತ ಕಾರಣಗಳಿದ್ದರೆ ಕೊಡಿ). ಶಾಲೆಗಳಿಲ್ಲದಿರುವುದರಿಂದ ಮಕ್ಕಳ ಮೇಲಾಗಿರುವ ಹಾನಿಯು ಬಹಳಷ್ಟು, ಮತ್ತು ಶಾಶ್ವತ. ಒಟ್ಟಿನಲ್ಲಿ ಕೊರೋನ ಮಕ್ಕಳಿಗೆ ಯಾವ ಅಪಾಯವನ್ನೂ ಉಂಟು ಮಾಡುವುದಿಲ್ಲ, ಶಾಲೆಯಿಲ್ಲದಿರುವುದು ಬಹಳಷ್ಟು ಹಾನಿ ಮಾಡುತ್ತದೆ.

ಡಿಸೆಂಬರ್ 15ರೊಳಗೆ ಶಾಲೆ ತೆರೆಯಲೇ ಬೇಕು.


ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅವರ ಡಿ.5ರ ಫೇಸ್ ಬುಕ್ ಪೋಸ್ಟ್ ನಿಂದ

Similar News