'ಅಂಬೇಡ್ಕರ್ ಓದು ಸರಣಿ'ಯ ಮೂಲಕ ಸಂವಿಧಾನ ಶಿಲ್ಪಿಯ ಬರಹ ಭಾಷಣಗಳ ಪ್ರಚಾರ

Update: 2020-12-06 10:45 GMT

ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಚಿಂತನೆಗಳು, ಬರಹ ಭಾಷಣಗಳ ಪ್ರಚಾರ ಮತ್ತು ಎಲ್ಲರಿಗೂ ಸುಲಭವಾಗಿ ತಲುಪುವ ಉದ್ದೇಶದಿಂದ ಕೆಲ ತಿಂಗಳ ಹಿಂದೆ ಯೂಟ್ಯೂಬ್ ನಲ್ಲಿ ಆರಂಭಿಸಿರುವ 'ಅಂಬೇಡ್ಕರ್ ಓದು ಸರಣಿ' ಕಾರ್ಯಕ್ರಮವು ನೂರರ ಗಡಿ ಸಮೀಪಿಸಿದ್ದು, ಡಿ.6 ರಂದು ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಹಿರಿಯ ಸಾಹಿತಿ ದೇವನೂರ ಮಹದೇವ ಅವರು ನೂರರ ಕಂತನ್ನು ಓದಲಿದ್ದಾರೆ.

ಲೇಖಕ ಅರುಣ್ ಜೋಳದಕೂಡ್ಲಿಗಿ ಅವರು ಡಾ.ಅಂಬೇಡ್ಕರ್ ಅವರ ಚಿಂತನೆಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ ಸೆಪ್ಟಂಬರ್ 7ರಂದು ಯೂಟ್ಯೂಬ್ ನಲ್ಲಿ 'ಅಂಬೇಡ್ಕರ್ ಓದು ಸರಣಿ' ಆರಂಭಿಸಿದರು. ಬಳಿಕ ಇದುವರೆಗೂ ಒಟ್ಟು 89 ಓದು ಸರಣಿ ಪೂರ್ಣಗೊಂಡಿದ್ದು, ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಡಿ.6 ರಂದು ಒಂದೇ ದಿನ 11 ಸರಣಿ ಓದು ಕಾರ್ಯಕ್ರಮದ ಮೂಲಕ ನೂರರ ಗಡಿ ತಲುಪಲಿದೆ.

ಸೆಪ್ಟಂಬರ್ 7ರಂದು ಮೊದಲ ಓದು ಸರಣಿ ಕಾರ್ಯಕ್ರಮವನ್ನು ಲೇಖಕಿ ಡಾ. ಹೆಚ್.ಎಸ್.ಅನುಪಮಾ ಅವರು ಅಂಬೇಡ್ಕರ್ ಬರಹಗಳ ಮೂರು ಭಾಗಗಳನ್ನು ಓದುವ ಮೂಲಕ ಆರಂಭಿಸಿದ್ದರು. ಲಂಡನ್ನಿನ ಪ್ರಥಮ ದುಂಡುಮೇಜಿನ ಸಮ್ಮೇಳನ ನಡೆದಾಗ 1930 ನವೆಂಬರ್ 12 ರಂದು ಅಂಬೇಡ್ಕರ್ ಮಾತನಾಡಿದ `ದೇಶಭಕ್ತಿ ಎಂದರೇನು?’, ಎರಡನೆ ಭಾಗ `ಜಾತಿ ಭೇದದ’ ಕುರಿತ ಟಿಪ್ಪಣಿ, ಮೂರನೆಯದಾಗಿ 1956 ರಲ್ಲಿ ಅಂಬೇಡ್ಕರ್ ಮಾತನಾಡಿದ 'ಕೊನೆಯ ಪ್ರಾರ್ಥನೆ’ ಎಂಬ ಭಾಗಗಳನ್ನು ಅವರು ಓದಿದ್ದಾರೆ. 

ಬಳಿಕ ಇದುವರೆಗೂ ಮೂಡ್ನಾಕೂಡು ಚಿನ್ನಸ್ವಾಮಿ, ಯೋಗೇಶ್ ಮಾಸ್ಟರ್, ರಂಗಕರ್ಮಿ ಬಿ.ಸುರೇಶ್ ಸೇರಿ ಹಿರಿಯ ಲೇಖಕರು, ಸಾಹಿತಿಗಳು, ಚಿಂತಕರು, ರೈತರು, ಸಾಮಾಜಿಕ ಕಾರ್ಯಕರ್ತರು, ರಂಗಕರ್ಮಿಗಳು, ವಿದ್ಯಾರ್ಥಿಗಳು ಸೇರಿ ಹಲವರು ಸುಮಾರು 89 ಓದು ಸರಣಿ ಪೂರ್ಣಗೊಳಿಸಿದ್ದಾರೆ. ಹಿರಿಯ ಲೇಖಕ ನಟರಾಜ್ ಹುಳಿಯಾರ್ ಅವರು ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ನಡೆಯುವ ವಿಶೇಷ ಓದು ಸರಣಿಯಲ್ಲಿ ಅಂಬೇಡ್ಕರ್ ಅವರ ಬಗ್ಗೆ ಓದಲಿದ್ದಾರೆ. ಹಿರಿಯ ಸಾಹಿತಿ ದೇವನೂರ ಮಹದೇವ ಅವರು ನೂರನೇ ಕಂತಿನಲ್ಲಿ ಅಂಬೇಡ್ಕರ್ ಕುರಿತು ಓದಲಿದ್ದಾರೆ. 

ಅಲ್ಲದೇ, 2019ರ ಎಪ್ರಿಲ್ 14ರಂದು ನಡೆದ ಫೇಸ್ಬುಕ್ ಲೈವ್ ನಲ್ಲಿ ಅಂಬೇಡ್ಕರ್ ಬಗೆಗಿನ ಕಾರ್ಯಕ್ರಮದಲ್ಲಿ ಸುಮಾರು 40 ಮಂದಿ ಪಾಲ್ಗೊಂಡಿದ್ದು, ಆಯ್ದ 10 ಮಂದಿಯ ಓದು ಸರಣಿಯನ್ನು ಯೂಟ್ಯೂಬ್ ನಲ್ಲಿ ಹಾಕಲಾಗಿದೆ. ಮುಂದಿನ 2020ರ ಎಪ್ರಿಲ್ 14ರಂದು 'ಅಂಬೇಡ್ಕರ್ ಓದು ಸರಣಿ' ಕಾರ್ಯಕ್ರಮವು 250ರ ಗುರಿ ತಲುಪುವ ನಿರೀಕ್ಷೆ ಇದೆ.

ಅಂಬೇಡ್ಕರ್ ಓದು ಸರಣಿ ಕಾರ್ಯಕ್ರಮವು ಇದುವರೆಗೂ ಸುಮಾರು ಒಂದು ಲಕ್ಷದಷ್ಟು ಮಂದಿಗೆ ತಲುಪಿದೆ ಎಂದು ಓದು ಸರಣಿಯನ್ನು ಆರಂಭಿಸಿರುವ ಅರುಣ್ ಜೋಳದಕೂಡ್ಲಿಗಿ ಮಾಹಿತಿ ನೀಡಿದ್ದಾರೆ.

''ಸಾಮಾಜಿಕ ಜಾಲತಾಣದಲ್ಲಿ ಅಂಬೇಡ್ಕರ್ ಬಗ್ಗೆ ಹುಡುಕಾಟ ಮಾಡುವವರಿಗೆ ಕನ್ನಡದಲ್ಲಿ ಅವರ ಆಯ್ದ ಬರಹ-ಭಾಷಣಗಳ ಆಡಿಯೋ-ವೀಡಿಯೋ ರೂಪ ಸಿಗಬೇಕಿದೆ. ಹಾಗಾಗಿ ಅಂಬೇಡ್ಕರ್ ಚಿಂತನೆಯಲ್ಲಿ ನಂಬುಗೆ ಇಟ್ಟವರಿಂದ ಅಂಬೇಡ್ಕರ್ ಬರಹ-ಭಾಷಣದ ಆಯ್ದ ಭಾಗಗಳನ್ನು ಓದಿಸಿ ಯೂಟ್ಯೂಬ್ ನಲ್ಲಿ ಹಾಕುತ್ತಿರುವೆ'' ಎಂದು ಅವರು ತಿಳಿಸಿದ್ದಾರೆ.

ಅಂಬೇಡ್ಕರ್ ಚಿಂತನೆಯನ್ನು ಸಾಧ್ಯವಾದಷ್ಟು ಸಾಮಾನ್ಯ ಜನರಿಗೆ ವಿಸ್ತರಿಸುವ ಕನಸು ಈ ಸರಣಿಯ ಹಿಂದಿದೆ. ಬಾಬಾಸಾಹೇಬರ ಚಿಂತನೆಯಲ್ಲಿ ನಂಬಿಕೆ ಇಟ್ಟವರ ಸಹಭಾಗಿತ್ವದಿಂದ ಈ ಕನಸು ನನಸಾಗಲು ಸಾಧ್ಯವಿದೆ ಎಂಬುವುದು ಅರುಣ್ ಅವರ ಅನಿಸಿಕೆ. 

ಅಂಬೇಡ್ಕರ್ ಅಭಿಯಾನ ಮತ್ತು ಅಂಬೇಡ್ಕರ್ ಓದು ಸರಣಿಯ ಎಲ್ಲಾ ವೀಡಿಯೋಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ಕೊಡಬಹುದು

https://www.youtube.com/user/joladarun/videos

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News