ಅರುಣಾಚಲದ ಬಳಿ ಮೂರು ಗ್ರಾಮಗಳನ್ನು ನಿರ್ಮಿಸಿದ ಚೀನಾ

Update: 2020-12-06 15:20 GMT
Photo Credit: Planet Labs Inc.

ಹೊಸದಿಲ್ಲಿ, ಡಿ.6: ಅರುಣಾಚಲ ಪ್ರದೇಶದ ಪಶ್ಚಿಮಭಾಗದಲ್ಲಿರುವ ಬುಮ್‌ಲಾ ಕಣಿವೆಯ ಸಮೀಪ ಚೀನಾ ಮೂರು ಗ್ರಾಮಗಳನ್ನು ಸ್ಥಾಪಿಸಿದ್ದು ಇಲ್ಲಿ ಗ್ರಾಮಸ್ಥರನ್ನು ನೆಲೆಗೊಳಿಸಿರುವುದು ಉಪಗ್ರಹದಿಂದ ಲಭಿಸಿದ ಚಿತ್ರಗಳಲ್ಲಿ ಸ್ಪಷ್ಟವಾಗಿದೆ ಎಂದು ಚೀನಾ ವಿಷಯದ ಪರಿಣತ ಡಾ. ಬ್ರಹ್ಮ ಚೆಲ್ಲಾನೆ ಹೇಳಿದ್ದಾರೆ.

ಭಾರತ, ಚೀನಾ ಮತ್ತು ಭೂತಾನ್ ದೇಶಗಳ ಗಡಿರೇಖೆಗಳು ಸಂಧಿಸುವ ಸ್ಥಳಕ್ಕೆ ಅತೀ ಸಮೀಪದಲ್ಲೇ ಈ ಹೊಸ ಗ್ರಾಮಗಳ ನಿರ್ಮಾಣವಾಗಿದೆ. ಹಾನ್ ಸಮುದಾಯದ ಜನತೆ ಮತ್ತು ಚೀನಾ ಕಮ್ಯುನಿಸ್ಟ್ ಪಕ್ಷದ ಟಿಬೆಟಿಯನ್ ಸದಸ್ಯರನ್ನು ಈ ಗ್ರಾಮಗಳಲ್ಲಿ ನೆಲೆಗೊಳಿಸುವ ಮೂಲಕ ತನ್ನ ಪ್ರಾದೇಶಿಕ ಹಕ್ಕಿನ ಪ್ರತಿಪಾದನೆಗೆ ಪುಷ್ಟಿ ತುಂಬಲು ಮತ್ತು ಗಡಿನುಸುಳುವಿಕೆಯನ್ನು ಹೆಚ್ಚಿಸುವ ಕಾರ್ಯತಂತ್ರ ಇದಾಗಿದೆ. ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಮೀನುಗಾರರನ್ನು ಬಳಸಿಕೊಂಡ ರೀತಿಯಲ್ಲೇ ಇಲ್ಲಿ ದನಗಾಹಿ(ಪಶುಗಳನ್ನು ಮೇಯಿಸುವವರು), ಕುರಿ ಮೇಯಿಸುವವರನ್ನು ಈ ಗ್ರಾಮಗಳಲ್ಲಿ ನೆಲೆಗೊಳಿಸಿ ಭಾರತೀಯ ಸೇನೆ ಗಸ್ತು ತಿರುಗುತ್ತಿರುವ ಹಿಮಾಲಯ ಪ್ರದೇಶದೊಳಗೆ ನುಸುಳಿಸುವ ತಂತ್ರಗಾರಿಕೆ ಚೀನಾದ್ದಾಗಿದೆ ಎಂದು ಡಾ ಬ್ರಹ್ಮ ಚೆಲ್ಲಾನೆ ಹೇಳಿದ್ದಾರೆ. ಅರುಣಾಚಲ ಪ್ರದೇಶದ ವಲಯದಲ್ಲಿ ಭಾರತದೊಂದಿಗಿನ ಗಡಿ ಇನ್ನೂ ನಿರ್ಧರಿತವಾಗಿಲ್ಲ ಎಂದೇ ಪ್ರತಿಪಾದಿಸುತ್ತಿರುವ ಚೀನಾ ಇಲ್ಲಿ ಹೊಸದಾಗಿ ಗ್ರಾಮಗಳನ್ನು ನಿರ್ಮಿಸಿರುವುದು ಅರುಣಾಚಲ ಪ್ರದೇಶದ ಗಡಿರೇಖೆಯುದ್ದಕ್ಕೂ ತನ್ನ ಪ್ರಾದೇಶಿಕ ಹಕ್ಕನ್ನು ಬಲಪಡಿಸುವತ್ತ ಪ್ರಮುಖ ಹೆಜ್ಜೆಯಾಗಿರಬಹುದು ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಪೂರ್ವ ಲಡಾಖ್ ಪ್ರಾಂತ್ಯದಲ್ಲಿ ಮೇ ತಿಂಗಳಿನಲ್ಲಿ ಭಾರತ-ಚೀನಾ ಪಡೆಗಳ ಮಧ್ಯೆ ಬಿಕ್ಕಟ್ಟು ಸೃಷ್ಟಿಯಾಗಿ ಉಭಯ ಪಡೆಗಳ ಮಧ್ಯೆ ಹಿಂಸಾತ್ಮಕ ಸಂಘರ್ಷ ನಡೆದಿತ್ತು. ಇದೇ ಸಮಯದಲ್ಲಿ ಚೀನಾದ ಪ್ರದೇಶದೊಳಗಿರುವ ಈ ಗ್ರಾಮಗಳ ನಿರ್ಮಾಣ ಕಾರ್ಯವೂ ಬಿರುಸಿನಿಂದ ಸಾಗಿತ್ತು.

ಸುಸಜ್ಜಿತ ಗ್ರಾಮಗಳು

2020ರ ಫೆಬ್ರವರಿ 17ರ ವೇಳೆಗೆ ಈ ಪ್ರದೇಶದಲ್ಲಿ ಒಂದು ಗ್ರಾಮ ನಿರ್ಮಾಣವಾಗಿತ್ತು. ಈ ಗ್ರಾಮದಲ್ಲಿ 20ಕ್ಕೂ ಹೆಚ್ಚಿನ ಮನೆಗಳಿದ್ದು, ಕೆಂಪು ಬಣ್ಣದ ಛಾವಣಿ ಹೊಂದಿರುವ ಇವುಗಳನ್ನು ಮರಗಳಿಂದ ನಿರ್ಮಿಸಲಾಗಿದೆ. 2020ರ ನವೆಂಬರ್ 28ರಂದು ಉಪಗ್ರಹ ರವಾನಿಸಿದ ಫೋಟೋದಲ್ಲಿ ಮತ್ತೆರಡು ಗ್ರಾಮಗಳ ಮಾಹಿತಿ ಲಭಿಸಿದೆ. ಈ ಗ್ರಾಮಗಳಲ್ಲಿ ನಾಲ್ಕು ಕಾಲನಿಗಳಿದ್ದು ಕನಿಷ್ಠ 60 ಮನೆಗಳಿವೆ. ಪ್ರತೀ ಕಾಲನಿಯೂ ಒಂದು ಕಿ.ಮೀ. ವ್ಯಾಪ್ತಿಯೊಳಗಿದ್ದು ಎಲ್ಲಾ ಕಾಲನಿಗಳನ್ನು ಸರ್ವ ಋತು ಡಾಮರ್ ರಸ್ತೆಯ ಮೂಲಕ ಸಂಪರ್ಕಿಸಲಾಗಿದೆ. ಹೊಸ ಮನೆಗಳಿಗೆ ನೀರು, ವಿದ್ಯುತ್ ವ್ಯವಸ್ಥೆ ಹಾಗೂ ಇಂಟರ್‌ನೆಟ್ ಸಂಪರ್ಕ ಒದಗಿಸಲಾಗಿದೆ. ಅರುಣಾಚಲ ಪ್ರದೇಶದ ಗಡಿಯ ಕಾನೂನು ಮಾನ್ಯತೆಯನ್ನು ಚೀನಾ ಪ್ರಶ್ನಿಸುತ್ತಿದೆ. ಅರುಣಾಚಲ ಪ್ರದೇಶದ ದಕ್ಷಿಣದ 65,000 ಚದರ ಕಿ.ಮೀ ಪ್ರದೇಶ ತನ್ನ ಭೂವ್ಯಾಪ್ತಿಗೆ ಸೇರಿದ್ದು ಇದು ದಕ್ಷಿಣ ಟಿಬೆಟ್ ವಲಯ ಎಂದು ಚೀನಾದ ನಕ್ಷೆಯಲ್ಲಿ ತೋರಿಸಲಾಗುತ್ತಿದೆ. ಆದರೆ ಈ ವಾದವನ್ನು ತಳ್ಳಿಹಾಕಿರುವ ಭಾರತ, ಬ್ರಿಟನ್ ಆಡಳಿತಗಾರ ಹೆನ್ರಿ ಮೆಕ್‌ಮೋಹನ್ 1914ರ ಸಿಮ್ಲಾ ಒಡಂಬಡಿಕೆ ಸಂದರ್ಭ ಪ್ರಸ್ತಾಪಿಸಿರುವ ಚಾರಿತ್ರಿಕ ಮೆಕ್‌ಮೋಹನ್ ರೇಖೆಯೇ ಭಾರತ-ಚೀನಾಗಳ ನಡುವಿನ ಗಡಿರೇಖೆಯಾಗಿದೆ ಎಂಬುದು ಭಾರತದ ಪ್ರತಿಪಾದನೆಯಾಗಿದೆ.

‘ಭಾರತದ ನಿಯಂತ್ರಣದಲ್ಲಿರುವ ಪ್ರದೇಶ ಒಂದು ಪರ್ವತದಷ್ಟೇ ದೂರವಿದೆ’

ಗಡಿಯಲ್ಲಿನ ದುರ್ಬಲ ನಿಯಂತ್ರಿತ ಪ್ರದೇಶಗಳಿಗೆ 960 ಕುಟುಂಬದ 3,222 ಜನರನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಚೀನಾದ ಶನ್ನಾನ್ ಪ್ರಾಂತ್ಯದ ಕೋನಾ ನಗರದ ಮುಖ್ಯಸ್ಥರು ಹೇಳಿರುವುದಾಗಿ ಚೀನಾದ ಸರಕಾರಿ ಸ್ವಾಮ್ಯದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ನ ವರದಿಯಲ್ಲಿ ತಿಳಿಸಲಾಗಿದೆ. ಭಾರತದ ನಿಯಂತ್ರಣದಲ್ಲಿರುವ ಪ್ರದೇಶ ಈಗ ಕೇವಲ ಒಂದು ಪರ್ವತದಷ್ಟೇ ದೂರದಲ್ಲಿದೆ ಎಂಬ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶನ್ನಾನ್ ಪ್ರಾಂತ್ಯ ಭಾರತದೊಂದಿಗೆ 213 ಕಿ.ಮೀ. ಗಡಿಯನ್ನು ಹಂಚಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News