ಮಾದಕ ವಸ್ತುಗಳ ಜಾಲ ನಿಯಂತ್ರಣಕ್ಕೆ ‘ಎನ್‍ಡಿಪಿಎಸ್' ಕಾಯ್ದೆ ತಿದ್ದುಪಡಿಗೆ ಕೇಂದ್ರಕ್ಕೆ ಮನವಿ: ಗೃಹ ಸಚಿವ ಬೊಮ್ಮಾಯಿ

Update: 2020-12-08 15:07 GMT

ಬೆಂಗಳೂರು, ಡಿ. 8: ರಾಜ್ಯದಲ್ಲಿನ ಮಾದಕ ವಸ್ತುಗಳ ಜಾಲವನ್ನು ನಿಯಂತ್ರಿಸುವ ದೃಷ್ಟಿಯಿಂದ ‘ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್'ಗೆ (ಎನ್‍ಡಿಪಿಎಸ್) ಸೂಕ್ತ ತಿದ್ದುಪಡಿ ತರಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದಲ್ಲದೆ, ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಈಶ್ವರ್ ಬಿ.ಖಂಡ್ರೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಮಾದಕ ವಸ್ತುಗಳ ಮಾಫಿಯಾ ವಿರುದ್ಧ ರಾಜ್ಯ ಸರಕಾರ ಸಮರ ಸಾರಿದ್ದು, ಅನೇಕ ಒತ್ತಡಗಳಿದ್ದರೂ, ಅವುಗಳಿಗೆ ನಾವು ಮಣಿದಿಲ್ಲ. ದಂಧೆಯಲ್ಲಿದ್ದ ವ್ಯಕ್ತಿಗಳು ಎಷ್ಟೇ ಪ್ರಭಾವಿಗಳಿದ್ದರೂ ಬಿಡದೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ. ಅಲ್ಲದೆ, ಕಾನೂನು ಲೋಪಗಳನ್ನು ಸರಿಪಡಿಸಲು ನಮ್ಮ ಸರಕಾರ ಕ್ರಮ ವಹಿಸಿದೆ' ಎಂದರು.

ರಾಜ್ಯದಲ್ಲಿ ಜೂಜಾಟ ಮತ್ತು ಮಾದಕ ವಸ್ತುಗಳ ಮಾಫಿಯಾ ಸಾಮಾಜಿಕ ಪಿಡುಗಾಗಿದ್ದು, ಇದಕ್ಕೆ ಕಡಿವಾಣ ಹಾಕಲೇಬೇಕಾದ ಅಗತ್ಯವಿದೆ. ಹಿಂದಿನ ಸರಕಾರಗಳಿಗಿಂತಲೂ ನಮ್ಮ ಸರಕಾರ ಬಿಗಿಯಾದ ಕ್ರಮ ತೆಗೆದುಕೊಂಡಿದೆ. ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ಮಾಡುವ ಸಂಬಂಧ ಈಗಾಗಲೇ ರಾಷ್ಟ್ರೀಯ ಕಾನೂನು ಕಾಲೇಜಿನ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಲಾಗಿದೆ. ಶೀಘ್ರದಲ್ಲೇ ಈ ಕಾನೂನು ರಾಜ್ಯದಲ್ಲಿ ಜಾರಿಯಾಗಲಿದೆ ಎಂದು ಹೇಳಿದರು.

ರಾಜ್ಯದಲ್ಲಿರುವ ಮಾದಕ ವಸ್ತುಗಳ ಪ್ರಕರಣಗಳನ್ನು ಬೇರುಮಟ್ಟದಿಂದ ಕಿತ್ತುಹಾಕುವುದು ಸರಕಾರದ ಧ್ಯೇಯ. ಮಾದಕ ದ್ರವ್ಯಗಳ ನಿಯಂತ್ರಣ ಕಾಯ್ದೆಯಡಿ 2017ರಲ್ಲಿ 1,126 ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1,095 ಪ್ರಕರಣಗಳ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಲಾಗಿದ್ದು, 197 ಪ್ರಕರಣಗಳಿಗೆ ಶಿಕ್ಷೆಯಾಗಿದೆ. 2018ರಲ್ಲಿ 1,031 ಪ್ರಕರಣಗಳು, 2019ರಲ್ಲಿ 1,161 ಹಾಗೂ 2020ರಲ್ಲಿ 3,852 ಪ್ರಕರಣಗಳ ಪೈಕಿ 22,85 ಚಾರ್ಜ್‍ಶೀಟ್ ಸಲ್ಲಿಕೆಯಾಗಿದ್ದು, 233 ಪ್ರಕರಣಗಳಿಗೆ ಶಿಕ್ಷೆಯಾಗಿವೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್) ವರದಿ ವಿಳಂಬ ತಪ್ಪಿಸಲು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. 50ಕ್ಕೂ ಅಧಿಕ ಮಾದರಿಗಳನ್ನು ಏಕಕಾಲಕ್ಕೆ ಪ್ರಯೋಗಾಲಯದಲ್ಲಿ ವರದಿ ನೀಡಲು ಸಾಧ್ಯವಿದೆ ಎಂದ ಅವರು, ಮುಂಬರುವ ದಿನಗಳಲ್ಲಿ ಮೈಸೂರು, ಮಂಗಳೂರು, ಬೆಳಗಾವಿ, ಕಲಬುರಗಿ ಮತ್ತು ಹುಬ್ಬಳಿ-ಧಾರವಾಡ ನಗರಗಳಲ್ಲಿಯೂ ವಿಭಾಗೀಯ ಮಟ್ಟದಲ್ಲಿಯೂ ಪ್ರಯೋಗಾಲಯ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದರು.

ಜಾಮೀನು ಸಿಕ್ಕಿಲ್ಲ: ಮಾದಕ ವಸ್ತುಗಳ ಪ್ರಕರಣಗಳಡಿಯಲ್ಲಿ ಈ ಹಿಂದೆ ಬಂಧಿತರು ಒಂದೆರಡು ದಿನಗಳಲ್ಲಿ ಜಾಮೀನಿನ ಮೇಲೆ ಹೊರಬರುತ್ತಿದ್ದರು. ಆದರೆ, ನಮ್ಮ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಈವರೆಗೂ ಯಾರೊಬ್ಬರಿಗೂ ಜಾಮೀನು ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಕಾಯ್ದೆ ತಿದ್ದುಪಡಿ ಮೂಲಕ ಮಾದಕ ವಸ್ತುಗಳ ಮಾರಾಟ, ಸಾಗಣೆ ಮತ್ತು ಸೇವನೆ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ನಮ್ಮ ಮೇಲೆ ದೊಡ್ಡ ಮಟ್ಟದ ಒತ್ತಡಗಳು ಬಂದರೂ ನಾವು ಯಾರ ಮೇಲೂ ಕರುಣೆ ತೋರದೆ ನಿರ್ದಾಕ್ಷಿಣ್ಯವಾಗಿ ಕಾನೂನಿನ ಪ್ರಕಾರ ಕ್ರಮ ವಹಿಸಿದ್ದೇವೆ. ಮಾದಕ ವಸ್ತುಗಳ ನಿಯಂತ್ರಣಕ್ಕೆ ಸರಕಾರ ಮತ್ತು ಗೃಹ ಇಲಾಖೆ ಸಮರ ಸಾರಿದ್ದು, ಇದರಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಟ್ಟುನಿಟ್ಟಿನ ನಿಗಾ: ರಾಜ್ಯದ ಗಡಿ ಜಿಲ್ಲೆಗಳಲ್ಲಿ ಮತ್ತು ರಿಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ನಡೆಯುವ ಕಾನೂನು ಬಾಹಿರ ಕೃತ್ಯಗಳ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು. ಅಲ್ಲದೆ, ಶಾಲಾ-ಕಾಲೇಜುಗಳ ಬಳಿ ವೈಟ್ನರ್, ಥಿನ್ನರ್, ಸಿಂಥಟಿಕ್ ಡ್ರಗ್ಸ್ ಹಾಗೂ ಹುಕ್ಕಾ ಬಾರ್ ಗಳ ನಿಯಂತ್ರಣಕ್ಕೂ ಸರಕಾರ ಮುಂದಾಗಲಿದೆ ಎಂದು ಹೇಳಿದರು.

ಡಾರ್ಕ್ ವೆಬ್ ಜಾಲವನ್ನು ಭೇದಿಸಿದ್ದೇವೆ: ಡಾರ್ಕ್ ವೆಬ್ ಜಾಲದ ಮೂಲಕ ನಡೆಯುತ್ತಿದ್ದ ಮಾದಕ ದ್ರವ್ಯಗಳ ವ್ಯವಹಾರಕ್ಕೂ ಕಡಿವಾಣ ಹಾಕಲಾಗಿದೆ. ಜೂಜಾಟದಿಂದ ಹಿಡಿದು ಡ್ರಗ್ಸ್, ಅನಧಿಕೃತ ಶಸ್ತ್ರಾಸ್ತ್ರಗಳ ಸಾಗಣೆ ಜಾಲದವರೆಗೂ ಒಂದಕ್ಕೂಂದು ಸಂಬಂಧವಿದೆ. ಈ ಎಲ್ಲ ಜಾಲಗಳಿಗೂ ಕಡಿವಾಣ ಹಾಕಲಾಗಿದೆ. ಡ್ರಗ್ಸ್ ಜಾಲದಲ್ಲಿದ್ದ 15 ಮಂದಿ ನೈಜಿರಿಯಾ ಮತ್ತು 65ಕ್ಕೂ ಅಧಿಕ ಮಂದಿ ಬಾಂಗ್ಲಾ ಮೂಲದ ಪ್ರಜೆಗಳನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ರಾಜ್ಯ ಹಾಗೂ ದೇಶದಿಂದಲೇ ಹೊರ ಹಾಕಲು ಕ್ರಮ ವಹಿಸಿದ್ದೇವೆ ಎಂದ ಅವರು, ಮಾದಕ ವಸ್ತುಗಳ ಜಾಲ ನಿಯಂತ್ರಣಕ್ಕೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News