ತೆರಿಗೆ ಹಂಚಿಕೆ ಪಾಲಿನಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿಲ್ಲ: ಬಸವರಾಜ ಬೊಮ್ಮಾಯಿ

Update: 2020-12-10 17:29 GMT

ಬೆಂಗಳೂರು, ಡಿ.10: ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ತೆರಿಗೆ ಹಂಚಿಕೆ ಪಾಲಿನಲ್ಲಿ ಯಾವುದೇ ಅನ್ಯಾಯ ಅಥವಾ ತಾರತಮ್ಯವಾಗಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗುರುವಾರ ವಿಧಾನಪರಿಷತ್‍ನಲ್ಲಿ ಪೂರಕ ಬಜೆಟ್ ಮಂಡನೆ ಕುರಿತ ಚರ್ಚೆ ವೇಳೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಆಪಾದಿಸಿದರು. ಈ ವೇಳೆ ಎದ್ದು ನಿಂತ ಸಚಿವ ಬೊಮ್ಮಾಯಿ, ಕೊರೋನ ಹೊಡೆತದಿಂದ ಆದಾಯ ಕಡಿಮೆಯಾಗಿದೆ. ಎಲ್ಲ ರಾಜ್ಯಗಳಲ್ಲಿಯೂ ಆರ್ಥಿಕ ಹಿಂಜರಿತ ಉಂಟಾಗಿದೆ. ಹೀಗಾಗಿ, ಜಿಎಸ್‍ಟಿ ಪಾಲು ಬಂದಿಲ್ಲ ಎಂದರು. 

ಈ ವೇಳೆ ಮಾತನಾಡಿದ ಎಸ್.ಆರ್.ಪಾಟೀಲ್, ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಹಾಳಾಗಿದೆ. ಕೇಂದ್ರದಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರಾಗಿದ್ದಾರೆ. ಅವರಿಂದ ರಾಜ್ಯಕ್ಕೆ ಹೆಚ್ಚಿನ ನೆರವು ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ತೆರಿಗೆ ಪಾಲಿನಲ್ಲಿ ನವೆಂಬರ್‍ನಲ್ಲಿ 12,192 ಕೋಟಿ ಮಾತ್ರ ಕರ್ನಾಟಕಕ್ಕೆ ಮರು ಪಾವತಿಯಾಗಿದೆ. ಕೇಂದ್ರ ಸರಕಾರ ನಮಗೆ ಹೆಚ್ಚುವರಿ ನೆರವು ನೀಡುವುದಿರಲಿ, ನಮಗೆ ಕೊಡಬೇಕಾದ ಪಾಲನ್ನೆ ಸರಿಯಾಗಿ ಕೊಡುತ್ತಿಲ್ಲ. ಕೇಂದ್ರ ಮಲತಾಯಿ ದೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಕರ್ನಾಟಕಕ್ಕೆ ಹಣಕಾಸಿನ ವಿಷಯದಲ್ಲಾಗುತ್ತಿರುವ ಅನ್ಯಾಯ ನೋಡಿದರೆ ನಾವು ಒಕ್ಕೂಟ ವ್ಯವಸ್ಥೆಯಿಂದ ಹೊರಗಡೆ ಇದ್ದೇವೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ ಎಂದು ದೂರಿದರು. ಆಗ ಕಾಂಗ್ರೆಸ್‍ನ ಸದಸ್ಯ ಸಿಎಂ ಇಬ್ರಾಹಿಂ ಮಾತನಾಡಿ, ಬೇರೆ ಬೇರೆ ರಾಜ್ಯಗಳಿಗೆ ಅನುದಾನ ನೀಡೋಕೆ ಸಾಧ್ಯವಾಗುತ್ತದೆ, ಕರ್ನಾಟಕಕ್ಕೆ ನೆರವು ನೀಡಲು ಸಾಧ್ಯವಾಗದಾ? ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನಮಗೆ ಕೇಂದ್ರದಿಂದ ಬರಬೇಕಾದ ಜಿಎಸ್ಟಿ ಪಾಲು ಕಡಿಮೆಯಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಪಕ್ಷಗಳ ನಿಯೋಗವನ್ನು ಕರೆದೊಯ್ದು ದಿಲ್ಲಿಯಲ್ಲಿ ಕೇಂದ್ರ ಸರಕಾರದೊಂದಿಗೆ ಮಧ್ಯಸ್ಥಿಕೆ ವಹಿಸುವ ಮೂಲಕ ನಮ್ಮ ಪಾಲನ್ನು ಕಡಕ್ ಆಗಿ ಕೇಳುವ ಕೆಲಸ ಮಾಡಿ. ರಾಜ್ಯಕ್ಕೆ ಅನ್ಯಾಯವಾಗಲು ಬಿಡಬೇಡಿ ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News