ಮಾಜಿ ಕೇಂದ್ರ ಸಚಿವ ರಾಮ್ ಲಾಲ್ ರಾಹಿ ಕೋವಿಡ್‌ಗೆ ಬಲಿ

Update: 2020-12-11 03:45 GMT

ಲಕ್ನೋ: ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರಾಮ್ ಲಾಲ್ ರಾಹಿ ಸೀತಾಪುರ ಜಿಲ್ಲೆಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಎದೆನೋವು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೋನ ವೈರಸ್ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಇರುವುದು ಕಂಡುಬಂದಿತ್ತು. ಗುರುವಾರ ಸಂಜೆ ಹೃದಯಾಘಾತದಿಂದ ಅವರು ಮೃತಪಟ್ಟರು ಎಂದು ಮುಖ್ಯ ವೈದ್ಯಕೀಯ ಅಧೀಕ್ಷಕ ಎ.ಕೆ.ಅಗರ್‌ ವಾಲ್ ಹೇಳಿದ್ದಾರೆ.

ಸುಧೀರ್ಘ ರಾಜಕೀಯ ಜೀವನದಲ್ಲಿ ರಾಹಿ ನಾಲ್ಕು ಬಾರಿ ಮಿಸ್ರಿಖ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಎರಡು ಬಾರಿ ಹರಗಾಂವ್ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಇಲ್ಲಿ ಅವರ ಪುತ್ರ ಸುರೇಶ್ ರಾಹಿ ಇದೀಗ ಶಾಸಕರಾಗಿದ್ದಾರೆ. ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಸಂಪುಟದಲ್ಲಿ ಅವರು ಗೃಹ ಖಾತೆ ರಾಜ್ಯ ಸಚಿವರಾಗಿದ್ದರು.

ರಾಹಿ ನಿಧನಕ್ಕೆ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ಅನುಭವಿ ಮುಖಂಡರಾದ ಅವರು ಸುಧೀರ್ಘ ಸೇವೆ ಸಲ್ಲಿಸಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಮ್ಮ ಶೋಕ ಸಂದೇಶದಲ್ಲಿ, "ರಾಹಿಯವರ ರಾಜಕೀಯ ಜೀವನ ಎಲ್ಲರಿಗೂ ಸ್ಫೂರ್ತಿ" ಎಂದು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News