ಕೋವಿಡ್ ಲಸಿಕೆ ಖರೀದಿ ಸಾಮರ್ಥ್ಯ ಇರುವವರು ಪಾವತಿಸಲೇಬೇಕು: ಮಧ್ಯಪ್ರದೇಶ ಸಿಎಂ

Update: 2020-12-11 05:31 GMT

ಮಧ್ಯಪ್ರದೇಶ : ಬಡವರು ಮತ್ತು ದುರ್ಬಲ ವರ್ಗದವರಿಗೆ ಸರ್ಕಾರ ಕೋವಿಡ್-19 ಲಸಿಕೆ ಪೂರೈಸಲಿದೆ; ಆದರೆ ಇದನ್ನು ಖರೀದಿಸುವ ಸಾಮರ್ಥ್ಯವಿರುವವರು ಇದಕ್ಕೆ ಪಾವತಿಸಲೇಬೇಕು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸ್ಪಷ್ಟಪಡಿಸಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ಆಯೋಜಿಸಿದ್ದ ’ನಾಯಕತ್ವ ಶೃಂಗ’ (ಲೀಡರ್‌ಶಿಪ್ ಸಮಿಟ್)ದಲ್ಲಿ ಮಾತನಾಡಿದ ಅವರು, "ಇಲ್ಲಿ ಹಣ ಪ್ರಮುಖವಲ್ಲ; ಆದರೆ ಆದ್ಯತೆ ಮುಖ್ಯ. ಇತರ ರೋಗಗಳಿರುವ ಹಿರಿಯ ನಾಗರಿಕರು ಮತ್ತು ನಮ್ಮ ಮುನ್ಪಡೆ ಕಾರ್ಯಕರ್ತರಿಗೆ ಮೊದಲು ಸಿಗಬೇಕು. ಯುವಕರು ಮತ್ತು ಆರೋಗ್ಯವಂತರು ಮುಂದೆ ಬಂದು ತಮಗೆ ಮೊದಲು ಲಸಿಕೆ ಅಗತ್ಯವಿಲ್ಲ ಎಂದು ಹೇಳಬೇಕು" ಎಂದು ಮನವಿ ಮಾಡಿದರು.

ಬಹುನಿರೀಕ್ಷಿತ ಲಸಿಕೆಯ ಬೆಲೆ ನಿಗದಿ ಕಾರ್ಯತಂತ್ರದ ಬಗ್ಗೆ ಬಿಜೆಪಿ ಮುಖಂಡರೊಬ್ಬರು ಹೇಳಿಕೆ ನೀಡಿರುವುದು ಇದೇ ಮೊದಲು.
ರಾಜ್ಯದಲ್ಲಿ ಕೋವಿಡ್ ನಿಯಂತ್ರಣದ ಅನುಭವವನ್ನು ಹಂಚಿಕೊಂಡು, "ಮಾರ್ಚ್ 23ರಂದು ನಾನು ಅಧಿಕಾರಕ್ಕೆ ಬಂದ ತಕ್ಷಣ ಕೋವಿಡ್-19 ನಿಭಾಯಿಸಲು ಮಾಡಿಕೊಂಡ ಸಿದ್ಧತೆಗಳ ಬಗ್ಗೆ ವಿವರ ಪಡೆದುಕೊಂಡೆ. ನಾನು ಯಾರ ಮೇಲೂ ಗೂಬೆ ಕೂರಿಸುವ ಪ್ರಯತ್ನ ಮಾಡುವುದಿಲ್ಲ. ಆದರೆ ಅದುವರೆಗೂ ಈ ವಿಷಯದ ಬಗ್ಗೆ ಅಂಥ ಗಂಭೀರ ಸಭೆಗಳು ನಡೆದಿರಲಿಲ್ಲ. ಯಾವುದೇ ವ್ಯವಸ್ಥೆ ಇರಲಿಲ್ಲ; ಪ್ರಯೋಗಾಲಯ, ಸಿಬ್ಬಂದಿ, ವೈಯಕ್ತಿಕ ಸುರಕ್ಷಾ ಸಾಧನಗಳು, ನಿಗದಿಪಡಿಸಿದ ಆಸ್ಪತ್ರೆ, ತರಬೇತಿ ಪಡೆದ ಸಿಬ್ಬಂದಿ ಕೂಡಾ ಇರಲಿಲ್ಲ" ಎಂದು ಆರೋಗ್ಯ ಮತ್ತು ಗೃಹ ಖಾತೆಯನ್ನು ತಮ್ಮ ಬಳಿಯೇ ಹೊಂದಿದ್ದ ಸಿಎಂ ಹೇಳಿದರು.

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನನ್ನದು ’ಸಿಂಗಲ್ ಮ್ಯಾನ್ ಆರ್ಮಿ’ ಎಂದು ಹೇಳಿಕೊಂಡರು. ರಾಜ್ಯವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಎಲ್ಲ ಹಂತದಲ್ಲೂ ಮೂಲಸೌಕರ್ಯ ಸುಧಾರಣೆ ಮಾಡಿರುವುದಾಗಿ ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News