ಪಡಿತರ ಆಹಾರ ಮಾರಾಟ ಮಾಡಿದರೆ 6 ತಿಂಗಳು ರೇಷನ್ ಕಾರ್ಡ್ ಅಮಾನತು: ಆಹಾರ ಇಲಾಖೆ ಆದೇಶ

Update: 2020-12-11 11:37 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.11: ಅನ್ನಭಾಗ್ಯ ಯೋಜನೆಯಡಿ ಸಿಗುವ ಪಡಿತರವನ್ನು ಅಂಗಡಿಗಳಲ್ಲಿ ಮಾರಾಟ ಮಾಡಿದಲ್ಲಿ, ಅವರ ಪಡಿತರ ಚೀಟಿಯನ್ನು 6 ತಿಂಗಳು ಅಮಾನತು ಮಾಡುವುದಾಗಿ ಆಹಾರ ಇಲಾಖೆ ಆದೇಶ ಹೊರಡಿಸಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ರಾಜ್ಯ ಸರಕಾರ ತಿನ್ನುವ ಆಹಾರಕ್ಕೂ ಇಂತಹ ಕಠಿಣ ಕಾನೂನು ಜಾರಿ ಮಾಡುವುದು ಸರಿಯಲ್ಲ. ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ ಬಿಳಿ ಅಕ್ಕಿ ಅನ್ನ ತಿನ್ನುವುದಿಲ್ಲ. ಆದರೂ ಇಲಾಖೆ ಅದನ್ನೇ ವಿತರಿಸುತ್ತಿದೆ. ಹಾಗೂ ಕುಟುಂಬದಲ್ಲಿ ಯಾರೊ ಒಬ್ಬರು ಅಕ್ಕಿಯನ್ನು ಮಾರಾಟ ಮಾಡಿದರೆ, ಪಡಿತರ ಕಾರ್ಡನ್ನು ಅಮಾನತಿನಲ್ಲಿಟ್ಟು, ಇಡೀ ಕುಟುಂಬಕ್ಕೆ ಶಿಕ್ಷೆ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಸದ್ಯ ಪಡಿತರ ಕಾರ್ಡ್ ದಾರರಿಗೆ ಒಬ್ಬರಿಗೆ 5 ಕೆಜಿ ಅಕ್ಕಿ ಕೊಡುತ್ತಾರೆ. ವಾಸ್ತವವಾಗಿ ಒಬ್ಬ ವ್ಯಕ್ತಿಗೆ ಒಂದು ತಿಂಗಳಿಗೆ ಕೇವಲ 5 ಕೆಜಿ ಸಾಕಾಗುವುದಿಲ್ಲ. ಹೀಗಾಗಿ ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಿದ ಸಿದ್ದರಾಮಯ್ಯ ಏಕ ಸದಸ್ಯ ಕುಟುಂಬಗಳಿಗೆ 10 ಕೆಜಿ, ದ್ವಿ ಸದಸ್ಯ ಕುಟುಂಬಗಳಿಗೆ 20 ಕೆಜಿ ಘೋಷಣೆ ಮಾಡಿದ್ದರು. ಆದರೆ, ಬಿಜೆಪಿ ಸರಕಾರ ಇದನ್ನು 5 ಕೆಜಿಗೆ ಇಳಿಸಿದೆ. ಇದರ ಜೊತೆಗೆ ಈಗ ಅಕ್ಕಿಯನ್ನು ಮಾರಾಟ ಮಾಡಿದರೆ ಪಡಿತರ ಕಾರ್ಡನ್ನು ಆರು ತಿಂಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದು ಬಡವರ ಆಹಾರವನ್ನು ಕಿತ್ತುಕೊಳ್ಳುವ ಆದೇಶವಾಗಿದೆ. ಕೂಡಲೆ ಈ ಆದೇಶವನ್ನು ಹಿಂಪಡೆಯಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರಾವಳಿ ಭಾಗದಲ್ಲಿ ಹೆಚ್ಚಿನ ಮಂದಿ ಕೆಂಪಕ್ಕಿಯನ್ನು ಊಟಕ್ಕೆ ಬಳಸುತ್ತಾರೆ. ಹೀಗಾಗಿ ಪಡಿತರದಲ್ಲಿ ಕೆಂಪಕ್ಕಿಯನ್ನು ಕೊಡಿ ಎಂದು ಹಲವು ಬಾರಿ ಮನವಿ ಮಾಡಿದ್ದೇವೆ. ಆ ಬಗ್ಗೆ ಸರಕಾರ ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ. ಹಾಗಂತ ನಾವು ಬಿಳಿ ಅಕ್ಕಿಯನ್ನು ಮಾರಾಟ ಮಾಡುವುದಿಲ್ಲ. ಇಡ್ಲಿ, ದೋಸೆಗೆ ಬಳಸುತ್ತೇವೆ. ಯಾರೋ ಕೆಲವರು ಅಕ್ಕಿಯನ್ನು ಮಾರಾಟ ಮಾಡಬಹುದು. ಅದನ್ನೇ ಮುಂದಿಟ್ಟುಕೊಂಡು ಪಡಿತರ ಚೀಟಿಯನ್ನು ಅಮಾನತು ಮಾಡುವ ಕಠಿಣ ನಿರ್ಧಾರ ಸರಿಯಲ್ಲವೆಂದು ಪುತ್ತೂರಿನ ಗಾಯತ್ರಿ ಎಂಬವರು ಅಭಿಪ್ರಾಯಪಟ್ಟಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಅಕ್ಕಿಗಿಂತ ಜೋಳ ಮತ್ತು ಗೋದಿಯನ್ನು ಹೆಚ್ಚಾಗಿ ಬಳಸುತ್ತಾರೆ. ಅಲ್ಲಿಯೂ ಜೋಳ-ಗೋದಿಯನ್ನು ಕೇವಲ ಒಂದು ಕೆಜಿ ಕೊಡಲಾಗುತ್ತದೆ. ಇಂತಹ ಹಲವು ಸಮಸ್ಯೆಗಳು ಪಡಿತರ ಪದಾರ್ಥಗಳ ವಿತರಣೆಯಲ್ಲಿದೆ. ಇದನ್ನು ಸರಿಪಡಿಸುವ ಕಡೆಗೆ ಆಹಾರ ಇಲಾಖೆ ಗಮನ ಕೊಡಬೇಕೆ ವಿನಃ ಜನತೆಯನ್ನೇ ಅಪರಾಧಿಗಳ ಸ್ಥಾನದಲ್ಲಿ ನಿಲ್ಲಿಸಿ, ಕೊಡುವ 5 ಕಿಜಿ ಅಕ್ಕಿಯನ್ನು ಕಿತ್ತುಕೊಳ್ಳುವಂತಹ ಆದೇಶ ಹೊರಡಿಸುವುದು ಸರಿಯಲ್ಲವೆಂದು ಹುಬ್ಬಳ್ಳಿಯ ಶಿವಕುಮಾರ್ ಎಂಬವರು ತಿಳಿಸಿದ್ದಾರೆ.

ಪಡಿತರ ಅಕ್ಕಿಯನ್ನು ಶೇ.99 ರಷ್ಟು ಮಂದಿ ಮಾರಾಟ ಮಾಡುವುದಿಲ್ಲ. ಮೊದಲು ಆಹಾರ ಇಲಾಖೆಯಲ್ಲಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿ. ಪಡಿತರ ಅಕ್ಕಿಯನ್ನು ಮಾರಾಟ ಮಾಡಿದರೆ ಆರು ತಿಂಗಳು ಪಡಿತರ ಕಾರ್ಡ್‍ನ್ನು ಅಮಾನತು ಮಾಡುವಂತಹ ಆದೇಶ, ಬಡವರ ಊಟವನ್ನು ಕಿತ್ತುಕೊಳ್ಳುವ ಕ್ರಮವಾಗಿದೆ. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು.

-ಗೌರಮ್ಮ, ಕಾರ್ಯದರ್ಶಿ, ಜನವಾದಿ ಮಹಿಳಾ ಸಂಘಟನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News