ಸ್ಕೆಚ್ ಹಾಕಿ ಸಮ್ಮಿಶ್ರ ಸರಕಾರವನ್ನು ಬೀಳಿಸಿದ್ದು ನಾನೇ !: ಸಿ.ಪಿ.ಯೋಗೇಶ್ವರ್‌ರದ್ದು ಎನ್ನಲಾದ ಆಡಿಯೋ ವೈರಲ್

Update: 2020-12-11 15:05 GMT

ಬೆಂಗಳೂರು, ಡಿ.11: ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರವನ್ನು ‘ಸ್ಕೆಚ್ ಹಾಕಿ ಬೀಳಿಸಿದ್ದು ನಾನೇ’ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನೀಡಿರುವ ಹೇಳಿಕೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇತ್ತೀಚೆಗೆ ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಚನ್ನಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ಯೋಗೇಶ್ವರ್ ಈ ವಿಷಯವನ್ನು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

''ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ಸೇರಿಕೊಂಡು ನನ್ನನ್ನು ಚನ್ನಪಟ್ಟಣದಲ್ಲಿ ಸೋಲಿಸಿದರು. ಇದರಿಂದ ಮತದಾರರಿಗೆ ಮುಖ ತೋರಿಸಲು ಸಾಧ್ಯವಾಗಲಿಲ್ಲ. ಬೇಸರಗೊಂಡು ಬೆಂಗಳೂರು ಸೇರಿಕೊಂಡೆ. ಆದರೆ, ನಾನು ಚನ್ನಪಟ್ಟಣದಲ್ಲಿ ಮಾತ್ರ ರಾಜಕೀಯ ಮಾಡಿಕೊಂಡು ಇದ್ದರೆ ಆಗಲ್ಲ. ಏನಾದರೂ ಮಾಡಲೇಬೇಕು ಎಂದು ನಿರ್ಧರಿಸಿ, ಸ್ಕೆಚ್ ಹಾಕಿ ಇವರಿಬ್ಬರೂ ಸೇರಿ ರಚನೆ ಮಾಡಿದ್ದ ಸರಕಾರವನ್ನು ಬೀಳಿಸಿದೆ'' ಎಂದು ಯೋಗೇಶ್ವರ್ ಹೇಳಿದ್ದಾರೆ ಎನ್ನಲಾಗಿದೆ.

ಆಡಿಯೋದಲ್ಲಿ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ವಿರುದ್ಧ ಏಕವಚನದಲ್ಲೆ ವಾಗ್ದಾಳಿ ನಡೆಸಲಾಗಿದ್ದು, ''ಚನ್ನಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸುರೇಶ್, ಯೋಗೇಶ್ವರ್ ಯಾರು ಎಂದು ಪ್ರಶ್ನಿಸಿದ್ದ. ಸಮ್ಮಿಶ್ರ ಸರಕಾರ ಬೀಳುತ್ತಿದ್ದಂತೆ ಅವರ ಅಣ್ಣ ಶಿವಕುಮಾರ್ ತಿಹಾರ್ ಜೈಲಿಗೆ ಹೋದ. ಕರ್ನಾಟಕದಿಂದ ಯಾರಾದರೂ ಆ ಜೈಲಿಗೆ ಹೋಗಿದ್ದರೆ ಅದು ಒಬ್ಬನೇ, ಈಗ ಕೆಪಿಸಿಸಿ ಅಧ್ಯಕ್ಷ ಆಗಿರುವ ಶಿವಕುಮಾರ್'' ಎಂದು ವ್ಯಂಗ್ಯವಾಡಿದ್ದಾರೆ.

ಈಗ ಅಣ್ಣ ತಮ್ಮಂದಿರಿಗೆ, ದೇವೇಗೌಡರ ಮಗನಿಗೆ ನಾನು ಯಾರೂ ಅನ್ನೋದು ಗೊತ್ತಾಗಿದೆ. ಕಳೆದ ಚುನಾವಣೆಯಲ್ಲಿ ನಾನು ಗೆದ್ದಿದ್ದರೆ, ಇಷ್ಟೊತ್ತಿಗೆ ಉಪ ಮುಖ್ಯಮಂತ್ರಿಯೋ, ಪ್ರಭಾವಿ ಮಂತ್ರಿಯೋ ಆಗಿರುತ್ತಿದೆ. ಈಗಲೂ ಬಿಜೆಪಿಯವರು ನನ್ನನ್ನು ಕೈ ಬಿಟ್ಟಿಲ್ಲ. ಹಳೆ ಮೈಸೂರು ಭಾಗದವರಿಗೆ ಪ್ರಾತಿನಿಧ್ಯ ಕೊಡಲು ನನ್ನನ್ನು ಮಂತ್ರಿ ಮಾಡೇ ಮಾಡುತ್ತಾರೆ. ಆದರೆ, ಅದಕ್ಕೂ ಅಡ್ಡಿಪಡಿಸಲು ಕುಮಾರಸ್ವಾಮಿ ರಾತ್ರೋ ರಾತ್ರಿ ಬಿಜೆಪಿ ನಾಯಕರ ಮನೆ ಬಾಗಿಲು ಬಡಿಯುತ್ತಿದ್ದಾರೆ. ಈ ಕುಮಾರಸ್ವಾಮಿಗೆ ಚನ್ನಪಟ್ಟಣದಲ್ಲಿ ಕೆಲವು ಗುತ್ತಿಗೆದಾರರು ಬಿಟ್ಟರೆ ಬೇರೆ ಯಾರೂ ಗೊತ್ತಿಲ್ಲ. ನಾನು ಮಾಡಿಸಿದ ನೀರಾವರಿ ಯೋಜನೆಗಳನ್ನು ತನ್ನದು ಎಂದು ಕುಮಾರಸ್ವಾಮಿ ಹೇಳಿಕೊಂಡು ತಿರುಗುತ್ತಿದ್ದಾರೆ. ಆತ ಏನಾದರೂ ಪೇಪರ್ ನೋಡದೆ ಚನ್ನಪಟ್ಟಣದ 10 ಊರುಗಳ ಹೆಸರು ಹೇಳಿಬಿಟ್ಟರೆ ನಾನು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಡುತ್ತೇನೆ ಯೋಗೇಶ್ವರ್ ಸವಾಲು ಹಾಕಿದ್ದಾರೆ ಎನ್ನಲಾಗಿದೆ.

ದೇವೇಗೌಡರ ಕುಟುಂಬ ಹಾಗೂ ಡಿ.ಕೆ.ಸಹೋದರರನ್ನು ಹಳೆ ಮೈಸೂರು ಭಾಗದ ಜನ ತಿರಸ್ಕರಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ದೇವೇಗೌಡ ಹಾಗೂ ನಿಖಿಲ್ ಕುಮಾರಸ್ವಾಮಿಯನ್ನು ಜನ ಸೋಲಿಸಿದ್ದಾರೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಅಣ್ಣ, ತಮ್ಮನಿಗೂ ಜನ ಪಾಠ ಕಲಿಸಿದ್ದಾರೆ ಎಂದು ಹೇಳಿದ್ದು ವೈರಲ್ ಆಡಿಯೋದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News