ಜಾನುವಾರು ಸಾಕಲು ಆಗದಿದ್ದರೆ ಬಿಜೆಪಿ ಕಚೇರಿ, ನನ್ನ ಮನೆಗೆ ತಂದು ಬಿಡಿ ಎಂದ ಸಚಿವ ಅಶೋಕ್

Update: 2020-12-11 15:18 GMT

ಬೆಂಗಳೂರು, ಡಿ. 11: ಜಾನುವಾರು ಸಾಕಲು ಆಗದಿದ್ದರೆ ನಾನು ಸಾಕುತ್ತೇನೆ. ಗೋವನ್ನು ಬಿಜೆಪಿ ಕಚೇರಿ ಬಳಿ ತಂದು ಬಿಡಿ. ಇಲ್ಲವೇ, ನನ್ನ ಮನೆಗೆ ತಂದು ಬಿಡಿ. ನಾವು ಗಂಡು ಕರು, ವಯಸ್ಸಾದ ಹಸುಗಳನ್ನು ಸಾಕುತ್ತೇವೆ. ಜೊತೆಗೆ, ನಿಮ್ಮ ಹಿರಿಯರನ್ನು ಕೂಡ ಸಾಕುತ್ತೇವೆ, ಕಳುಹಿಸಿಕೊಡಿ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ವಿಧೇಯಕವನ್ನು ಮೇಲ್ಮನೆ ತಡೆಯಲು ಕಾಂಗ್ರೆಸ್ ಷಡ್ಯಂತ್ರ ಮಾಡುತ್ತದೆ ಎಂಬುದು ನಮಗೆ ಮೊದಲೇ ಗೊತ್ತಿತ್ತು. ಹೀಗಾಗಿ ನಾವು ಚಾಣಾಕ್ಷ ನಡೆಯನ್ನು ಅನುಸರಿಸಿದೆವು. 'ನೀವು ಚಾಪೆ ಕೆಳಗೆ ನುಸುಳಿದರೆ ನಾವು ರಂಗೋಲೆ ಕೆಳಗೆ ನುಸುಳುತ್ತೇವೆ' ಎಂದು ಪ್ರತಿಕ್ರಿಯಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರು ನಿರುದ್ಯೋಗಿಗಳಾಗಿದ್ದು, ಸುಖಾಸುಮ್ಮನೆ ರಾಜ್ಯ ಸರಕಾರ ಜಾರಿಗೆ ತಂದಿರುವ ಕಾಯ್ದೆಗಳನ್ನು ವಿರೋಧಿಸುತ್ತಿದ್ದಾರೆ. ಇವರ ಸಂಚಿಗೆ ರಾಜ್ಯ ರೈತರು ಯಾವುದೇ ಕಾರಣಕ್ಕೂ ಬಲಿಯಾಗಬಾರದು ಎಂದು ಕೋರಿದರು.

ಕಟ್ಟುನಿಟ್ಟಿನ ನಿಯಮಾವಳಿ: ರಾಜ್ಯ ಸರಕಾರ ಜಾರಿಗೆ ತರಲಿರುವ ಕರ್ನಾಟಕ ಭೂ ಸುಧಾರಣಾ ಕಾಯ್ದೆಯಿಂದ ಅಂಬಾನಿ, ಅದಾನಿ, ಟಾಟಾ, ಬಿರ್ಲಾ ಸೇರಿದಂತೆ ದೊಡ್ಡ ಉದ್ಯಮಿಗಳು ಭೂಮಿ ಖರೀದಿಸಲು ಸಾಧ್ಯವೇ ಇಲ್ಲ. ಈ ಸಂಬಂಧ ಸರಕಾರ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ರೂಪಿಸಲಿದೆ. ಉದ್ಯಮಿಗಳು ಬೇಕಾಬಿಟ್ಟಿ ಭೂಮಿ ಖರೀದಿಸಲಿದ್ದಾರೆಂಬ ಕಾಂಗ್ರೆಸ್ ಆರೋಪದಲ್ಲಿ ಹುರಳಿಲ್ಲ ಎಂದು ಅಶೋಕ್ ಅಲ್ಲಗಳೆದರು.

ಯಾವುದೇ ಕಾರಣಕ್ಕೂ ನೀರಾವರಿ ಭೂಮಿ ಮತ್ತು ದಲಿತರ ಒಡೆತದ ಭೂಮಿಯನ್ನು ಬೇರೆಯವರ ಖರೀದಿಸಲು ಅವಕಾಶವಿಲ್ಲ. ಉದ್ದೇಶಿತ ಕಾಯ್ದೆಯ ಪ್ರಕಾರ `ಎ' ವರ್ಗದ `ಎರಡು ಬೆಳೆ ತೆಗೆಯಬಹುದಾದ ಜಮೀನು' ಅನ್ನು 13 ಎಕರೆ ಮಾತ್ರ ಖರೀದಿ ಮಾಡಲು ಅವಕಾಶವಿದೆ. `ಬಿ' ವರ್ಗದ ಜಮೀನು `ಒಂದು ಬೆಳೆ ಬೆಳೆಯಬಹುದಾದ ಜಮೀನು' 15 ಎಕರೆ ಮಾತ್ರ ಖರೀದಿಸಬಹುದು. ಖುಷ್ಕಿ ಜಮೀನು 54 ಎಕರೆ ಒಂದು ಕುಟುಂಬ ಖರೀದಿಸಲು ನಿರ್ಬಂಧ ಹೇರಲಾಗಿದೆ ಎಂದು ಸ್ಪಷ್ಟಣೆ ನೀಡಿದರು.

ಖರೀದಿಸುವ `ಎ' ವರ್ಗದ ಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅವಕಾಶವಿಲ್ಲ. ವಾಣಿಜ್ಯ ಉದ್ದೇಶಕ್ಕೂ ಉಪಯೋಗಿಸುವಂತಿಲ್ಲ. ದಲಿತರ ಭೂಮಿ ಖರೀದಿಸುವಂತಿಲ್ಲ ಎನ್ನುವ ನಿಬರ್ಂಧ ವಿಧಿಸಿದ್ದು, ದಲಿತರ ಭೂಮಿ ದಲಿತ ವರ್ಗಕ್ಕೆ ಸೇರಿದ ಇತರರು ಖರೀದಿಸಬಹುದು. ದಲಿತರ ಭೂಮಿಯ ಮಾಲಕತ್ವ ಬದಲಾವಣೆ ಸುಲಭವಲ್ಲ ಎಂದು ಅಶೋಕ್ ಇದೇ ವೇಳೆ ತಿಳಿಸಿದರು.

`ಉಳುವವನೇ ಭೂಮಿಯ ಒಡೆಯ' ಎಂಬ ಕಾನೂನು ಪ್ರತ್ಯೇಕವಿದೆ. ಅದಕ್ಕೆ ಯಾವುದೇ ತಿದ್ದುಪಡಿ ತಂದಿಲ್ಲ. ಅದನ್ನೂ ಬದಲಾಯಿಸಲಾಗಿದೆ ಎಂದು ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ. ದೇವರಾಜ ಅರಸು ಕಾಲದ ಆ ಕಾನೂನನ್ನು ನಾವು ಮುಟ್ಟಿಲ್ಲ. ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿ ಎಲ್ಲ ರಾಜ್ಯಗಳಲ್ಲೂ ಕೃಷಿ ಜಮೀನು ಮುಕ್ತವಾಗಿ ಖರೀದಿಸುವ ಅವಕಾಶವಿದ್ದು, ಅದೇ ರೀತಿ ರಾಜ್ಯದಲ್ಲಿ ಕಾನೂನು ರೂಪಿಸಲಾಗಿದೆ ಎಂದರು.

ಕಾಂಗ್ರೆಸ್ ಕೂಸು: ಭೂ ಸುಧಾರಣೆ ತಿದ್ದುಪಡಿ ಕಾಂಗ್ರೆಸ್ ಕೂಸು. ಈ ಹಿಂದೆ ಉದ್ದೇಶಿತ ಕಾಯ್ದೆಯಲ್ಲಿನ 79 ಎ, ಬಿ ರದ್ದು ಮಾಡುವ ತೀರ್ಮಾನವನ್ನು ಕಾಂಗ್ರೆಸ್ ಮಾಡಿತ್ತು ಎಂದು ಟೀಕಿಸಿದ ಅಶೋಕ್, ಕಾಂಗ್ರೆಸ್‍ಗೆ ಕಳಕಳಿ ಇದ್ದರೆ, ಅವರ ಆಡಳಿತ ಇರುವ ರಾಜ್ಯಗಳಲ್ಲಿ 79 ಎ ಮತ್ತು ಬಿ ಜಾರಿ ತರಲಿ. ರಾಜ್ಯದಲ್ಲಿ 11.79 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಪಾಳು ಬಿದ್ದಿದೆ. ಕೆಲವು ಕಡೆ ನೀಲಗಿರಿ ಬೆಳೆಯಲಾಗುತ್ತಿದೆ. ಇಂತಹ ಭೂಮಿಯುಳ್ಳ ರೈತರಿಗೆ ಕಾಯ್ದೆಯಿಂದ ಅನುಕೂಲವಾಗಲಿದೆ ಎಂದರು.

ರೈತರೇ ಅಲ್ಲ: ಮಾಜಿ ಪ್ರಧಾನಿ ದೇವೆಗೌಡರು, ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ರೈತರೇ ಅಲ್ಲ. ಅವರು ಊರು ಬಿಟ್ಟು ಎಷ್ಟೋ ವರ್ಷಗಳೇ ಕಳೆದಿವೆ ಎಂದು ಲೇವಡಿ ಮಾಡಿದ ಸಚಿವ ಅಶೋಕ್, ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರುದ್ಧ ಗುಲ್ಲೆಬ್ಬಿಸುವವರನ್ನು ರೈತರು ಯಾವುದೇ ಕಾರಣಕ್ಕೂ ನಂಬಬಾರದು ಎಂದು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News