ಕಾಂಗ್ರೆಸ್ ನಡೆದುಕೊಂಡ ರೀತಿ ಗೋಮಾತೆಗೆ ಮಾಡಿದ ದ್ರೋಹ: ಸಚಿವ ಪ್ರಭು ಚೌಹಾಣ್

Update: 2020-12-11 16:23 GMT

ಬೆಂಗಳೂರು ಡಿ 11: ಗೋಮಾತೆಯ ಮೂಕರೋದನ ತಡೆಯಲು ತಂದ ವಿಧೇಯಕವನ್ನು ಕಾಂಗ್ರೆಸ್ ನಿನ್ನೆ ಪರಿಷತ್ತಿನಲ್ಲಿ ಚರ್ಚೆಗೆ ತರದೆ ಪರಿಷತ್ತಿನ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದು ಖಂಡನೀಯ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.

ತಾಯಿಯ ಹಾಲಿನ ಋಣ ಹೇಗೆ ತೀರಿಸಲು ಆಗುವುದಿಲ್ಲವೋ ಗೋಮಾತೆಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ಹಾಲು ಕುಡಿದ ಪ್ರತಿಯೊಬ್ಬ ಗೋಮಾತೆಯ ರಕ್ಷಣೆಗೆ ನಿಲ್ಲಬೇಕು. ಕಾಂಗ್ರೆಸ್ ನಿನ್ನೆ ನಡೆದುಕೊಂಡ ರೀತಿ ಗೋಮಾತೆಗೆ ಮಾಡಿದ ದ್ರೋಹ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೋಹತ್ಯೆ ತಡೆಯುವ ಬಗ್ಗೆ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲೂ ಚರ್ಚೆ ಆಗಿತ್ತು. ವೈಯಕ್ತಿಕವಾಗಿ ಮಸೂದೆ ಜಾರಿಯ ಬಗ್ಗೆ ಹೆಚ್ಚು ಆಸಕ್ತಿವಹಿಸಿ ಉತ್ತರಪ್ರದೇಶ, ಗುಜರಾತ್ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದೇನೆ. ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿತು ಎಂದು ಅವರು ತಿಳಿಸಿದ್ದಾರೆ.

2010ರಲ್ಲಿ ಬಿಜೆಪಿ ಮುಖ್ಯಮಂತ್ರಿ ಯಡಿಯೂರಪ್ಪ ಈ ವಿಧೇಯಕವನ್ನು ಮಂಡಿಸಿ ಎರಡೂ ಸದನದಲ್ಲಿ ಅಂಗೀಕಾರ ಪಡೆದಿದ್ದರು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಯಾವುದೇ ನೋಟಿಸ್ ನೀಡದೆ ತರಾತುರಿಯುಲ್ಲಿ ಹಿಂಪಡೆದಿದ್ದು, ಹಳೆಯ ಕಾಯ್ದೆಯನ್ನೆ ಮುಂದುವರೆಸಿತು. ಗೋವುಗಳ ಬಗ್ಗೆ ಕಾಂಗ್ರೆಸ್‍ಗೆ ಕಾಳಜಿ ಇಲ್ಲದಿರುವುದು ಇದರಿಂದಲೇ ತಿಳಿಯುತ್ತದೆ ಎಂದು ಅವರು ದೂರಿದ್ದಾರೆ.

ಗೋವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಆಗಬೇಕು. ಸಂವಿಧಾನದ ಆಶಯ ಇದೇ ಆಗಿದೆ. ಆ ದೃಷ್ಟಿಯಿಂದ ಗೋಹತ್ಯೆ ನಿಷೇಧ ಆಗಲೇಬೇಕು ಎಂಬ ಕಾರಣಕ್ಕಾಗಿ ಈ ವಿಧೇಯಕವನ್ನು ತಂದು ವಯಸ್ಸಾದ ಗೋವುಗಳ ರಕ್ಷಣೆಗೆ ಕ್ರಮಗಳನ್ನು ಕೈಗೊಳ್ಳಲು ಸರಕಾರ ಮುಂದಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಗೋಶಾಲೆಗಳ ಸ್ಥಾಪನೆ, ಗೋಸೇವಾ ಆಯೋಗದ ಸ್ಥಾಪನೆ, ಪಶು ಸಂಜೀವಿನಿ ಸೇವೆ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಯೋಚನೆಯಿದೆ ಎಂದು ಅವರು ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ 11.50 ಲಕ್ಷ ಜಾನುವಾರುಗಳು ಮತ್ತು ಗುಜರಾತ್ ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ಜಾನುವಾರುಗಳ ರಕ್ಷಣೆ ಮಾಡಲಾಗಿದೆ. ಈ ಎರಡೂ ರಾಜ್ಯಗಳಲ್ಲಿ ಸರಕಾರದ ಹಲವಾರು ಯೋಜನೆಗಳನ್ನು ಗೋಪಾಲನೆ ಮತ್ತು ಸಂರಕ್ಷಣೆಗೆ ಅನುಕೂಲಕರವಾಗುವ ತರಹ ಸಂಯೋಜಿಸಲಾಗಿದೆ. ಇದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಜಾರಿಗೆ ತರುವ ಆಲೋಚನೆಯಿದೆ. ಈ ಕಾಯ್ದೆ 19 ರಾಜ್ಯಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಸಭಾಧ್ಯಕ್ಷರು ಹೆಚ್ಚುವರಿ ಕಾರ್ಯಸೂಚಿಯ ಬಗ್ಗೆ ಮೊದಲೇ ಸೂಚನೆ ನೀಡಿದ್ದರು. ಕಾಂಗ್ರೆಸ್ ಪಕ್ಷ ಗೋವಿನ ಬಗ್ಗೆ ಕಾಳಜಿ ತೊರದೇ ವಿಧೇಯಕವನ್ನು ವಿರೋಧಿಸಿರುವುದು ಬೇಸರ ತಂದಿದೆ. ಕಾಂಗ್ರೆಸ್‍ನವರು ಗೋಹತ್ಯೆಯನ್ನು ರಾಜಕೀಯ ದುರುದ್ದೇಶಕ್ಕಾಗಿ ಬಳಸುತ್ತಿದ್ದಾರೆ. ಅವರಿಗೆ ಮೂಕ ಪ್ರಾಣಿಗಳ ರಕ್ಷಣೆ ಮಾಡುವ ಮನಸ್ಸಿಲ್ಲ. ನಿನ್ನೆ ವಿಧಾನಪರಿಷತ್ತಿನ ಕಾರ್ಯಸೂಚಿಯಲ್ಲಿ ವಿಷಯ ಸೇರಿಸಲಾಗಿದ್ದರೂ ತರಾತುರಿಯಲ್ಲಿ ಸಭಾಪತಿ ಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು ಅವರು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಪಶುಸಂಗೋಪನೆ ಇಲಾಖೆಯ ಕೆಲ ಅಂಕಿ-ಅಂಶಗಳನ್ನು ಮುಂದಿಟ್ಟು ಮಾತನಾಡಿದ್ದಾರೆ. ಅದರಲ್ಲಿ ದೇಶಿ ಗೋವುಗಳ ಸಂಖ್ಯೆ ತುಂಬಾ ಕುಂಠಿತವಾಗಿದ್ದು ಅದನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಸರಕಾರದ್ದಾಗಿದೆ. ಕಾಂಗ್ರೆಸ್‍ನವರು ಅಕ್ರಮ ಗೋವುಗಳ ಸಾಗಣೆ, ಮಾರಾಟ, ವಧೆ ಬಗ್ಗೆ ಏಕೆ ಮಾತನಾಡುವುದಿಲ್ಲ? ನಮ್ಮ ಸರಕಾರ ಗೋವುಗಳ ಸಂರಕ್ಷಣೆ, ಸಂವರ್ಧನೆಗೆ ಹೆಚ್ಚು ಒತ್ತು ನೀಡುತ್ತಿದೆ ಹಾಗೂ ವಧೆಗೆ ಕಡಿವಾಣ ಹಾಕುತ್ತಿದೇವೆ. ಗುಜರಾತ್ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಯಶಸ್ವಿಯಾಗಿ ಗೋಹತ್ಯೆ ನಿಷೇಧ ಜಾರಿಯಲ್ಲಿದ್ದರೂ ಹಾಲು ಉತ್ಪಾದನೆ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ರಾಜ್ಯದಲ್ಲಿ ಗಂಡು ಕರುಗಳಿಗೆ ಸಂಬಂಧಪಟ್ಟಂತೆ ರೈತರೇ ಆರು ತಿಂಗಳ ಕಾಲ ಅದನ್ನು ಪೋಷಣೆ ಮಾಡಿ ನಂತರ ಗೋಶಾಲೆಗೆ ನೀಡಬಹುದಾಗಿದೆ.

-ಪ್ರಭು ಚೌಹಾಣ್, ಪಶುಸಂಗೋಪನೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News