ರಾಜ್ಯದಲ್ಲಿ ಶೇ.45ರಷ್ಟು ಪಠ್ಯ ಕಡಿತಕ್ಕೆ ಶಿಕ್ಷಣ ಇಲಾಖೆ ಚಿಂತನೆ

Update: 2020-12-11 16:55 GMT

ಬೆಂಗಳೂರು, ಡಿ.11: ರಾಜ್ಯದಲ್ಲಿ ಶಾಲೆಗಳು ಆರಂಭವಾಗುವ ಸಂಬಂಧ ಅಂತಿಮ ತೀರ್ಮಾನಗೊಳ್ಳದ ಹಿನ್ನೆಲೆಯಲ್ಲಿ ಶೇ.30 ರಷ್ಟು ಪಠ್ಯ ಕಡಿತ ಮಾಡಲು ಮುಂದಾಗಿದ್ದ ಶಿಕ್ಷಣ ಇಲಾಖೆ ಇನ್ನೂ ಹೆಚ್ಚುವರಿಯಾಗಿ ಶೇ.15 ಸೇರಿಸಿ ಒಟ್ಟಾರೆ ಶೇ.45 ಪ್ರಮಾಣ ಪಠ್ಯ ಕಡಿತ ಮಾಡಲು ಮುಂದಾಗಿದೆ.

ಕರ್ನಾಟಕ ಪಠ್ಯಪುಸ್ತಕ ಸಂಘ ಹಾಗೂ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಜಂಟಿಯಾಗಿ ಈ ಹಿಂದೆ 6 ತಿಂಗಳಿಗೆ ಲೆಕ್ಕಹಾಕಿ ಶೇ.30 ರಷ್ಟು ಪಠ್ಯ ಕಡಿತಗೊಳಿಸುವಂತೆ ತೀರ್ಮಾನಿಸಿ, ಸರಕಾರದ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ, 2020-21ನೇ ಸಾಲಿನಲ್ಲಿ ಶೈಕ್ಷಣಿಕ ಅವಧಿಗಳು ಎಷ್ಟು ದೊರೆಯುತ್ತವೆ ಎಂಬುದು ಇನ್ನೂ ಖಚಿತವಾಗಿಲ್ಲ. ಹೀಗಾಗಿ, ಜನವರಿಯಲ್ಲಿ ಆರಂಭವಾದರೂ ದೊರೆಯಬಹುದಾದ ಶೈಕ್ಷಣಿಕ ಅವಧಿಗೆ ಲೆಕ್ಕಾಚಾರ ಮಾಡಿ ಶೇ.45 ಪಠ್ಯಕ್ರಮ ಕಡಿತ ಮಾಡುವುದು ಸೂಕ್ತ ಎಂದು ಡಿಎಸ್‍ಇಆರ್‍ಟಿ ಮತ್ತು ಕೆಟಿಬಿಎಸ್ ಆಲೋಚಿಸಿವೆ.

ರಾಜ್ಯ ಸರಕಾರ ಪ್ರೌಢ ಶಾಲೆ ಮತ್ತು ಪಿಯು ತರಗತಿಗಳನ್ನು ಆರಂಭಿಸುವ ಕಡೆ ಆಲೋಚನೆ ನಡೆಸುತ್ತಿದೆ. ಸಾಧ್ಯವಾದಷ್ಟು ಬೇಗ ಮುಖ್ಯಮಂತ್ರಿಗೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಇದರ ನಡುವೆ ಪಠ್ಯಪುಸ್ತಕದಲ್ಲಿ ಕಡಿತ ಮಾಡುವ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇನ್ನೂ ಅನುಮೋದನೆ ಸಿಕ್ಕಿಲ್ಲ.

ತ್ವರಿತ ತಿಳಿಸಲು ಮನವಿ: ಖಾಸಗಿ ಶಾಲೆಗಳು ಈಗಾಗಲೆ ಆನ್‍ಲೈನ್ ಮೂಲಕ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಮಧ್ಯವಾರ್ಷಿಕ ಪರೀಕ್ಷೆಯನ್ನು ಮಾಡಿ ಮುಗಿಸಿದ್ದಾರೆ. ಸರಕಾರಿ ಮಕ್ಕಳಿಗೆ ಯಾವುದೇ ಪರೀಕ್ಷೆ ನಡೆದಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಬೇಗ ಪಠ್ಯಕಡಿತ ಮಾಡಿ ಬೋಧನೆ ಮಾಡಬೇಕಾದ ಪಠ್ಯಕ್ರಮವನ್ನು ತಿಳಿಸಿದರೆ ಮಕ್ಕಳು ಅಭ್ಯಾಸ ನಡೆಸಲು ಅನುಕೂಲವಾಗುತ್ತದೆ. ಸರಕಾರ ಈ ವಿಚಾರದ ಬಗ್ಗೆ ರ್ಚಚಿಸಿ ಬೇಗ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಖಾಸಗಿ ಶಾಲೆಗಳು ಸರಕಾರವನ್ನು ಒತ್ತಾಯಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News