ಶನಿವಾರದಿಂದ ಅಂಚೆ ಕಚೇರಿ ಎಸ್‌ಬಿ ಖಾತೆಗಳಲ್ಲಿ 500 ರೂ.ಕನಿಷ್ಠ ಬ್ಯಾಲೆನ್ಸ್ ಕಡ್ಡಾಯ

Update: 2020-12-11 17:14 GMT

ಹೊಸದಿಲ್ಲಿ, ಡಿ.11: ಬ್ಯಾಂಕುಗಳ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕೆಂಬ ನಿಯಮ ಶನಿವಾರದಿಂದ ಅಂಚೆ ಕಚೇರಿಗಳಲ್ಲಿಯೂ ಜಾರಿಗೆ ಬರಲಿದೆ. ಅಂಚೆ ಕಚೇರಿಗಳ ಉಳಿತಾಯ ಖಾತೆಗಳಲ್ಲಿ 500 ರೂ.ಗಳ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ 100 ರೂ.(ಜಿಎಸ್‌ಟಿ ಪ್ರತ್ಯೇಕ)ಗಳ ನಿರ್ವಹಣಾ ಶುಲ್ಕವನ್ನು ವಿಧಿಸಲಾಗುವುದು ಎಂದು ಅಂಚೆ ಇಲಾಖೆಯು ತಿಳಿಸಿದೆ. ಡಿ.11ರೊಳಗೆ ತಮ್ಮ ಖಾತೆಗಳಲ್ಲಿ 500 ರೂ.ಗಳ ಕನಿಷ್ಠ ಬ್ಯಾಲೆನ್ಸ್ ಇರುವಂತೆ ನೋಡಿಕೊಳ್ಳಲು ಇಲಾಖೆಯು ಗ್ರಾಹಕರಿಗೆ ಸೂಚಿಸಿತ್ತು.

ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿ ವಾರ್ಷಿಕ ಶೇ.4 ಬಡ್ಡಿಯನ್ನು ನೀಡಲಾಗುತ್ತಿದ್ದು,ಕನಿಷ್ಠ 500 ರೂ.ಗಳ ಠೇವಣಿಯೊಂದಿಗೆ ಖಾತೆಯನ್ನು ಆರಂಭಿಸಬೇಕಾಗುತ್ತದೆ ಮತ್ತು ನಂತರ ಜಮಾ ಮಾಡುವ ಮೊತ್ತ ಕನಿಷ್ಠ 10 ರೂ.ಇರಬೇಕಾಗುತ್ತದೆ. ಖಾತೆಯಿಂದ ಹಿಂದೆಗೆಯಬಹುದಾದ ಕನಿಷ್ಠ ಮೊತ್ತ 50 ರೂ.ಗಳಾಗಿದ್ದು,ಜಮೆ ಮಾಡುವ ಹಣಕ್ಕೆ ಯಾವುದೇ ಮಿತಿಯಿಲ್ಲ.

ಕನಿಷ್ಠ ಬ್ಯಾಲೆನ್ಸ್ 500 ರೂ.ಗಿಂತ ಕಡಿಮೆಯಾಗುತ್ತಿದ್ದರೆ ಹಿಂದೆಗೆತಕ್ಕೆ ಅವಕಾಶವಿರುವುದಿಲ್ಲ. ಹಣಕಾಸು ವರ್ಷದ ಅಂತ್ಯದೊಳಗೆ ಕನಿಷ್ಠ ಬ್ಯಾಲೆನ್ಸ್‌ನ್ನು 500 ರೂ.ಗೆ ಹೆಚ್ಚಿಸದಿದ್ದರೆ 100 ರೂ.ಗಳನ್ನು ಖಾತೆ ನಿರ್ವಹಣಾ ಶುಲ್ಕವಾಗಿ ಕಡಿತಗೊಳಿಸಲಾಗುವುದು ಮತ್ತು ಖಾತೆಯಲ್ಲಿ ಬ್ಯಾಲೆನ್ಸ್ ಶೂನ್ಯಕ್ಕಿಳಿದರೆ ಅದನ್ನು ಮುಚ್ಚಲಾಗುವುದು. ಬಡ್ಡಿಯನ್ನು ಪ್ರತಿ ತಿಂಗಳ 10ನೇ ದಿನ ಮತ್ತು ತಿಂಗಳ ಕೊನೆಯ ದಿನದ ನಡುವೆ ಕನಿಷ್ಠ ಬ್ಯಾಲೆನ್ಸ್‌ನ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಈ ಅವಧಿಯಲ್ಲಿ ಕನಿಷ್ಠ ಬ್ಯಾಲೆನ್ಸ್ 500 ರೂ.ಗಿಂತ ಕಡಿಮೆಯಿದ್ದರೆ ಬಡ್ಡಿ ದೊರೆಯುವುದಿಲ್ಲ. ಬಡ್ಡಿಯನ್ನು ವಿತ್ತ ಸಚಿವಾಲಯವು ನಿಗದಿಗೊಳಿಸಿದ ದರದಲ್ಲಿ ಪ್ರತಿ ಹಣಕಾಸು ವರ್ಷದ ಅಂತ್ಯದಲ್ಲಿ ಖಾತೆಗೆ ಜಮಾ ಮಾಡಲಾಗುತ್ತದೆ. ಎಲ್ಲ ಉಳಿತಾಯ ಖಾತೆಗಳಲ್ಲಿ 10,000 ರೂ.ವರೆಗಿನ ಬಡ್ಡಿಗೆ ಆದಾಯ ತೆರಿಗೆಯಿಂದ ವಿನಾಯಿತಿಯಿದೆ. ನಿರಂತರ ಮೂರು ವರ್ಷಗಳ ಅವಧಿಯಲ್ಲಿ ಖಾತೆಯಲ್ಲಿ ಯಾವುದೇ ವಹಿವಾಟು ನಡೆಯದಿದ್ದರೆ ಅದನ್ನು ನಿಷ್ಕ್ರಿಯ ಖಾತೆಯೆಂದು ಪರಿಗಣಿಸಲಾಗುವುದು ಎಂದು ಇಲಾಖೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News