ಪ್ರಧಾನಿ, ಸಿಎಂ ವಿರುದ್ಧ ಘೋಷಣೆ ಕೂಗಿ ಕಾಯ್ದೆಗಳ ನಡಾವಳಿ ಪ್ರತಿ ಸುಟ್ಟು ರೈತರ ಪ್ರತಿಭಟನೆ

Update: 2020-12-11 17:22 GMT

ಮಂಡ್ಯ, ಡಿ.11: ಕೃಷಿ ಸಂಬಂಧಿ ತಿದ್ದುಪಡಿ ಕಾಯ್ದೆಗಳು, ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಮೈಷುಗರ್ ಗುತ್ತಿಗೆ ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ಸಿಐಟಿಯು, ದಲಿತ ಸಂಘರ್ಷ ಸಮಿತಿ, ಪ್ರಾಂತ ರೈತ ಸಂಘ ಮತ್ತು ರೈತಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.

ಆರ್‍ಪಿ ರಸ್ತೆಯಲ್ಲಿ ಜಮಾವಣೆಗೊಂಡ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಘೋಷಣೆ ಕೂಗಿ ಕಾಯ್ದೆಗಳ ನಡಾವಳಿ ಪ್ರತಿಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯದ ಬಿಜೆಪಿ ನೇತೃತ್ವದ ಸರಕಾರಗಳು ರೈತ, ಕಾರ್ಮಿಕ, ದಲಿತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಕಾರ್ಪೋರೇಟ್ ಬಂಡವಾಳಶಾಹಿಗಳ ಗುಲಾಮರಂತೆ ನಡೆದುಕೊಳ್ಳುತ್ತಿವೆ ಎಂದು ಅವರು ಆರೋಪಿಸಿದರು.

ಸರಕಾರಗಳ ನಡೆಗೆ ದೇಶವ್ಯಾಪಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ದೆಹಲಿಯಲ್ಲಿ ಪಂಜಾಬ್, ಹರಿಯಾಣ ರಾಜ್ಯಗಳ ಲಕ್ಷಾಂತರ ರೈತರು ಪ್ರತಿಭಟನೆಗಿಳಿದಿದ್ದಾರೆ. ಆದರೆ, ಸರಕಾರ ತನ್ನ ಮೊಂಡುತನ ಬಿಡುತ್ತಿಲ್ಲ ಎಂದು ಅವರು ಕಿಡಿಕಾರಿದರು.

ಕೂಡಲೇ ಅನ್ನದಾತನರಿಗೆ ಮಾರಕವಾಗಿರುವ ತಿದ್ದುಪಡಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು. ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು 40 ವರ್ಷ ಗುತ್ತಿಗೆ ನೀಡಿರುವುದನ್ನು ಹಿಂದಕ್ಕೆ ಪಡೆದು ಸರಕಾರಿ ಸ್ವಾಮ್ಯದಲ್ಲೇ ನಡೆಸಬೇಕು. ಇಲ್ಲದಿದ್ದರೆ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಮಾಜಿ ಸಂಸದ ಹಾಗೂ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ, ರೈತ ನಾಯಕಿ ಸುನಂದಾ ಜಯರಾಂ, ಸಿಐಟಿಯು ನಾಯಕಿ ಸಿ.ಕುಮಾರಿ, ಕರ್ನಾಟಕ ರಾಜ್ಯ ರೈತಸಂಘದ ಮುಖಂಡರಾದ ಕೆ.ಬೋರಯ್ಯ, ಮುದ್ದೇಗೌಡ, ಇಂಡುವಾಳು ಚಂದ್ರಶೇಖರ್, ಸೋಮಶೇಖರ್, ಪಿ.ಕೆ. ನಾಗಣ್ಣ, ಕಿರಂಗೂರು ಪಾಪು ,ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಬಿ.ಶ್ರೀನಿವಾಸ್, ಗಾಯಕ ಹುರುಗಲವಾಡಿ ರಾಮಯ್ಯ, ಕರ್ನಾಟಕ ಪ್ರಾಂತ ರೈತ ಸಂಘದ ಟಿ.ಯಶವಂತ, ಹಿರಿಯ ಸಹಕಾರಿ ಕೀಲಾರ ಕೃಷ್ಣ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News