ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬೀಳಿಸಲು ಯಾರಿಂದಲೂ ಸಾಧ್ಯವಿಲ್ಲ: ಶಾಸಕ ಜಿ.ಟಿ.ದೇವೇಗೌಡ

Update: 2020-12-11 18:22 GMT

ಮೈಸೂರು,ಡಿ.11: ಕಾಂಗ್ರೆಸ್ ಜೊತೆ ಕೈಜೋಡಿಸಿ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರು ಕೆಟ್ಟಿದೆ ಎಂದು ನನಗನ್ನಿಸುತ್ತಿಲ್ಲ. ಕುಮಾರಸ್ವಾಮಿ ಅವರು ಯಾವ ಅರ್ಥದಲ್ಲಿ ಈ ಮಾತು ಹೇಳಿದ್ದಾರೋ ನನಗೆ ಗೊತ್ತಿಲ್ಲ ಎಂದು ಜಾ.ದಳ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಕಾಂಗ್ರೆಸ್ ಜೊತೆಗೆ ಸರ್ಕಾರ ಮಾಡಿದ್ದು ನಮ್ಮ ತಪ್ಪು ಎಂದಿರುವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಜಿ.ಟಿ.ದೇವೇಗೌಡ ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಜೊತೆ ಕೈ ಜೋಡಿಸುವಾಗ ನಮ್ಮ ಯಾವ ಶಾಸಕರ ಅಭಿಪ್ರಾಯವನ್ನು ಪಕ್ಷ ಕೇಳಲಿಲ್ಲ. ದೇವೇಗೌಡರು, ಕುಮಾರಸ್ವಾಮಿ ಅವರು ಸೇರಿಕೊಂಡು ಈ ತೀರ್ಮಾನ ಮಾಡಿದ್ದರು. ಹಿಂದೆ ಧರ್ಮಸಿಂಗ್ ಅವರ ಜೊತೆ ಸಮ್ಮಿಶ್ರ ಸರ್ಕಾರ ಮಾಡುವಾಗ ನಮ್ಮ ಅಭಿಪ್ರಾಯ ಕೇಳಿದ್ದರು. ಈ ಬಾರಿ ಆ ರೀತಿ ಅಭಿಪ್ರಾಯ ಕೇಳಲಿಲ್ಲ ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರದಲ್ಲಿ ಜಾ.ದಳ-ಕಾಂಗ್ರೆಸ್ ಸಚಿವರ ಜೊತೆ ಹೊಂದಾಣಿಕೆ ಇತ್ತು. ಕುಮಾರಸ್ವಾಮಿ ಅವರಿಗೆ ಆಗಿರುವ ಕಹಿ ಅನುಭವ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಜೊತೆ ಸರ್ಕಾರ ಮಾಡಿ ಕುಮಾರಸ್ವಾಮಿ ಹೆಸರು ಕೆಟ್ಟಿದೆ ಎಂದು ನನಗೆ ಅನ್ನಿಸುವುದಿಲ್ಲ. ಸರ್ಕಾರದಲ್ಲಿ ಕುಮಾರಸ್ವಾಮಿ ಒಳ್ಳೆ ಕೆಲಸವನ್ನೇ ಮಾಡಿದ್ದಾರೆ. ಅವರ ಹೆಸರು ಹೇಗೆ ಕೆಡುತ್ತೆ ಎಂದು ಪ್ರಶ್ನಿಸಿದರಲ್ಲದೇ, ಅವರು ಏನನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹಾಗೇ ಹೇಳಿದ್ದಾರೋ ನನಗೆ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಸರ್ಕಾರ ಅಲ್ಲಾಡುತ್ತೇ, ಬೀಳುತ್ತೇ ಎನ್ನುವುದು ರಾಜಕೀಯ ಅಪ್ರಬುದ್ಧತೆ ಆಗುತ್ತದೆ ಎಂದರು.

ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಕೇಂದ್ರ- ರಾಜ್ಯದಲ್ಲಿ ಸದೃಢವಾಗಿದೆ. ಇನ್ನೂ 5 ವರ್ಷ ಎರಡು ಕಡೆ ಬಿಜೆಪಿ ಸರ್ಕಾರ ಬೀಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಸಿಎಂ ಬದಲಾವಣೆ ವಿಚಾರ ಮಾತನಾಡಿ, ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ. ಎರಡೂ ಸರ್ಕಾರಗಳು ಅವಧಿ ಪೂರೈಸಲಿವೆ. ಸ್ಥಳೀಯ ಸಂಸ್ಥೆ ಚುನಾವಣೆಗಳು ಸರ್ಕಾರದ ಪರವಾಗಿ ಇರಲಿವೆ. ಯಾರು ಏನೇ ಮಾತನಾಡಿದರು ಈ ಫಲಿತಾಂಶ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News