ಡಿ.15ಕ್ಕೆ ವಿಧಾನಪರಿಷತ್ ವಿಶೇಷ ಅಧಿವೇಶನ: ಗೋಹತ್ಯೆ ನಿಷೇಧ ಮಸೂದೆ ಮಂಡಿಸಲು ಬಿಜೆಪಿ ಸಜ್ಜು

Update: 2020-12-12 13:17 GMT
File Photo

ಬೆಂಗಳೂರು, ಡಿ. 12: ರಾಜ್ಯದಲ್ಲಿ `ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020'ನ್ನು(ಗೋಹತ್ಯೆ ನಿಷೇಧ ಮಸೂದೆ) ಅಂಗೀಕರಿಸಲು ಡಿ.15ರಂದು ಒಂದು ದಿನದ ವಿಧಾನಪರಿಷತ್ತಿನ(ಮೇಲ್ಮನೆ) ವಿಶೇಷ ಅಧಿವೇಶನವನ್ನು ಕರೆಯಲಾಗಿದೆ.

ಗೋಹತ್ಯೆ ನಿಷೇಧ ವಿಧೇಯಕ ಮಂಡಿಸಲು ಡಿ.10ರಂದೇ ರಾಜ್ಯ ಸರಕಾರ ಸಿದ್ಧತೆ ನಡೆಸಿತ್ತು. ಆದರೆ, ಸಭಾಪತಿ ಇದಕ್ಕೆ ಅವಕಾಶ ನೀಡದೆ ಪರಿಷತ್ ಕಲಾಪವನ್ನು ಏಕಾಏಕಿ ಅನಿರ್ಧಿಷ್ಟಾವಧಿಗೆ ಮುಂದೂಡಿದ್ದರು ಎಂದು ಬಿಜೆಪಿ ಆರೋಪಿಸಿತ್ತು. ಅಲ್ಲದೆ, ವಿಶೇಷ ಅಧಿವೇಶನ ಕರೆಯಲು ಸಭಾಪತಿಯವರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಮೇಲ್ಮನೆ ಸಭಾನಾಯಕರೂ ಆಗಿರುವ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ಬಿಜೆಪಿ ಸದಸ್ಯರ ನಿಯೋಗದ ನಿನ್ನೆ ರಾಜ್ಯಪಾಲರಿಗೂ ಮನವಿ ಸಲ್ಲಿಸಿತ್ತು.

ಈ ಮಧ್ಯೆ `ಡಿ.15ರ ಮಂಗಳವಾರ ಬೆಳಗ್ಗೆ 11ಗಂಟೆಗೆ ರಾಜ್ಯ ಸರಕಾರದ ಸೂಚನೆ ಮೇರೆಗೆ ವಿಧಾನ ಪರಿಷತ್ ವಿಶೇಷ ಅಧಿವೇಶನವನ್ನು ಬೆಂಗಳೂರಿನ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ ಪುನಃ ಸಭೆ ಕರೆಯಲಾಗಿದೆ. ಆದುದರಿಂದ ಎಲ್ಲ ಸದಸ್ಯರು ಮೇಲ್ಕಂಡ ಅಧಿವೇಶನಕ್ಕೆ ಹಾಜರಾಗಬೇಕು' ಎಂದು ವಿಧಾನ ಪರಿಷತ್ತಿನ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ ಅವರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಡಿ.9ರಂದು ರಾತ್ರಿ ತರಾತುರಿಯಲ್ಲಿ `ಗೋಹತ್ಯೆ ನಿಷೇಧ ವಿಧೇಯಕ'ವನ್ನು ಮಂಡಿಸಿ ಪ್ರತಿಪಕ್ಷಗಳ ವಿರೋಧದ ಮಧ್ಯೆ ಯಾವುದೇ ಚರ್ಚೆ ಇಲ್ಲದೆ ಅಂಗೀಕಾರವನ್ನು ಮಾಡಲಾಗಿತ್ತು. ಇದೀಗ ವಿಧಾನ ಪರಿಷತ್ತಿನಲ್ಲಿಯೂ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿ ಅಂಗೀಕಾರ ಪಡೆಯಬೇಕಿರುವ ಅನಿವಾರ್ಯತೆ ಇದೆ. ಆದುದರಿಂದ ಡಿ.15ಕ್ಕೆ ವಿಶೇಷ ಅಧಿವೇಶನ ಕರೆಯಲಾಗಿದ್ದು, ಮೇಲ್ಮನೆಯ ಜೆಡಿಎಸ್ ಸದಸ್ಯರ ತೀರ್ಮಾನದ ಮೇಲೆ ಗೋಹತ್ಯೆ ನಿಷೇಧ ಮಸೂದೆಯ ಭವಿಷ್ಯ ಅಡಗಿದೆ ಎನ್ನಲಾಗುತ್ತಿದೆ.

ಬೆಂಬಲಕ್ಕೆ ಮನವಿ: ವಿಧಾನ ಪರಿಷತ್ ವಿಶೇಷ ಅಧಿವೇಶನದ ಮೂಲಕ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ ಪಡೆಯುವ ಹಂಬಲದಲ್ಲಿರುವ ಬಿಜೆಪಿ ಮುಖಂಡರು, ಮೇಲ್ಮನೆ ಜೆಡಿಎಸ್ ನಾಯಕರಿಗೆ `ಗೋಹತ್ಯೆ ನಿಷೇಧ ವಿಧೇಯಕ' ಮಂಡನೆ ಮತ್ತು ಅಂಗೀಕಾರಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ಮೇಲ್ಮನೆ ವಿಶೇಷ ಅಧಿವೇಶನದಲ್ಲಿ ಮಸೂದೆಗೆ ಅಂಗೀಕಾರ ದೊರೆಯದಿದ್ದರೆ ಅಧ್ಯಾದೇಶ (ಸುಗ್ರೀವಾಜ್ಞೆ) ಹೊರಡಿಸುವ ಮೂಲಕ ಗೋಹತ್ಯೆ ನಿಷೇಧ ವಿಧೇಯಕ ಜಾರಿಗೆ ಬಿಜೆಪಿ ಸರಕಾರ ಮುಂದಾಗಿದೆ ಎಂದು ಗೊತ್ತಾಗಿದೆ. ಅಲ್ಲದೆ, ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿಕೆ ನೀಡಿದ್ದು, `ವಿಧೇಯಕಕ್ಕೆ ಪರಿಷತ್ ಅಂಗೀಕಾರ ದೊರೆಯದಿದ್ದರೆ ಅಧ್ಯಾದೇಶ ಹೊರಡಿಸಲು ತೀರ್ಮಾನಿಸಲಾಗಿದೆ' ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News