ವಿದ್ಯಾರ್ಥಿನಿಯರಿಗೆ ಕಿರುಕುಳ; ಇಬ್ಬರು ಶಿಕ್ಷಕರು ಸೇವೆಯಿಂದ ವಜಾ

Update: 2020-12-12 14:20 GMT

ಜೈಪುರ, ಡಿ.12: ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸರಕಾರಿ ಶಾಲೆಯ ಇಬ್ಬರು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಿರುವುದಾಗಿ ರಾಜಸ್ಥಾನ ಶಿಕ್ಷಣ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.

ಶ್ರೀ ಗಂಗಾನಗರ ಜಿಲ್ಲೆಯ 22 ಪಿಟಿಡಿ ಗ್ರಾಮದ ಸರಕಾರಿ ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿದ್ದ ಬಹದ್ ರಾಮ್ ಮತ್ತು ಗಜಾನಂದ್‌ರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಅಲ್ಲದೆ ಶಾಲೆಯ ಈ ಹಿಂದಿನ ಪ್ರಾಂಶುಪಾಲ ಮತ್ತು ಇತರ ಇಬ್ಬರು ಶಿಕ್ಷಕರ ಬಡ್ತಿಯನ್ನು 1 ವರ್ಷ ತಡೆಹಿಡಿಯಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಶಾಲಾ ಶಿಕ್ಷಕರಾದ ಬಹದ್ ರಾಮ್, ಗಜಾನಂದ್, ಪರಮಾನಂದ್ ಮತ್ತು ಇಂದ್ರಜ ಎಂಬವರು ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಅಶ್ಲೀಲವಾಗಿ ಮತ್ತು ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಪೋಷಕರು ಈ ವರ್ಷದ ಜನವರಿಯಲ್ಲಿ ದೂರಿದ್ದರು. ಜೊತೆಗೆ, ಆರೋಪಿ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಮೊಬೈಲ್ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿರುವುದನ್ನು ರೆಕಾರ್ಡ್ ಮಾಡಿಕೊಂಡ ಪೋಷಕರು, ಆರೋಪಿ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಬಳಿಕ ನಾಲ್ವರು ಶಿಕ್ಷಕರನ್ನು ಅಮಾನತುಗೊಳಿಸಲಾಗಿತ್ತು ಮತ್ತು ವಿದ್ಯಾರ್ಥಿನಿಯರು ದೂರು ನೀಡಿದರೂ ಕ್ರಮ ಕೈಗೊಳ್ಳದ ಆರೋಪದಲ್ಲಿ ಪ್ರಿನ್ಸಿಪಾಲ್‌ಗೆ ‘ಮುಂದಿನ ಸ್ಥಳ ನಿಯುಕ್ತಿಯ ಆದೇಶ’ಕ್ಕೆ ಕಾಯುವಂತೆ ಸೂಚಿಸಲಾಗಿತ್ತು. ವಿಚಾರಣೆ ಬಳಿಕ ಇಬ್ಬರು ಶಿಕ್ಷಕರನ್ನು ವಜಾಗೊಳಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News