ಹರಾಜು ಪ್ರಕ್ರಿಯೆಯಲ್ಲಿ ಆಯ್ಕೆಯಾದವರ ಸದಸ್ಯತ್ವ ಅಸಿಂಧು: ಚುನಾವಣಾ ಆಯೋಗ

Update: 2020-12-12 16:17 GMT

ಬೆಂಗಳೂರು, ಡಿ.12: ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಹರಾಜು ಹಾಕುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ಅಂತಹ ಸದಸ್ಯರುಗಳ ಸದಸ್ಯತ್ವವನ್ನು ಅಸಿಂಧುಗೊಳಿಸಲು ಚುನಾವಣಾ ಆಯೋಗ ಮುಂದಾಗಿದೆ.

ಯಾವುದೇ ಗ್ರಾಮ ಪಂಚಾಯತ್ ಸದಸ್ಯರು ನಿಯಮಗಳಿಗೆ ವಿರುದ್ಧವಾಗಿ ಹರಾಜಿನಲ್ಲಿ ಅವಿರೋಧವಾಗಿ ಆಯ್ಕೆಗೊಂಡಿರುವುದು ಸಾಬೀತಾದಾರೆ ಅಂತಹ ಸದಸ್ಯರ ಸದಸ್ಯತ್ವ ಅಸಿಂಧುಗೊಳ್ಳಲಿದೆ ಎಂದು ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪ್ರಜಾಪ್ರತಿನಿಧಿ ಕಾಯ್ದೆ, ಗ್ರಾಮ ಸ್ವರಾಜ್ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆಯೋಗ ಸೂಚಿಸಿದೆ.

ಹರಾಜು ಹಾಕುವುದು 1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಎನ್ನುವ ಮೂಲ ತತ್ವಕ್ಕೆ ವ್ಯತಿರಿಕ್ತವಾಗಿದೆ ಎಂದು ಆಯೋಗ ತಿಳಿಸಿದೆ.

ಈ ಸಂಬಂಧ ಈಗಾಗಲೇ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಯವರು ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದು, ಹರಾಜು ಮೂಲಕ ಆಯ್ಕೆಯಾಗಿರುವ ಸದಸ್ಯರ ಮಾಹಿತಿಯನ್ನು ಕಲೆ ಹಾಕಬೇಕೆಂದು ನಿರ್ದೇಶನ ನೀಡಲಾಗಿದೆ. ಯಾವುದೇ ಗ್ರಾಪಂನಲ್ಲಿ ಚುನಾವಣೆ ನಡೆಸದೆ ಅವಿರೋಧವಾಗಿ ಆಯ್ಕೆಯಾಗಿದ್ದರೆ ಅದು ನಿಯಮಾವಳಿಗೆ ಒಳಪಡುತ್ತದೆ. ಒಂದು ವೇಳೆ ಅಭಿವೃದ್ಧಿ ನೆಪದಲ್ಲಿ ಹರಾಜಿನ ಮೂಲಕ ಆಯ್ಕೆಯಾದರೆ ಅಂಥವರ ಸದಸ್ಯತ್ವವನ್ನು ಅನರ್ಹಗೊಳಿಸಲು ಆಯೋಗ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹರಾಜಿನ ಮೂಲಕ ಸದಸ್ಯರು ಆಯ್ಕೆಯಾಗುವುದು ಕರ್ನಾಟಕ ಪಂಚಾಯತ್‍ರಾಜ್ ಕಾಯ್ದೆಯ ಆಶಯಕ್ಕೆ ವಿರುದ್ಧವಾದುದು. ಚುನಾವಣೆ ನಡೆಸದೆ ಅವಿರೋಧವಾಗಿ ಆಯ್ಕೆಯಾದರೆ ತಕಾರಾರಿಲ್ಲ. ಇದಕ್ಕೆ ವಿರುದ್ಧವಾಗಿ ಆಯ್ಕೆಯಾದರೆ ಸದಸ್ಯತ್ವ ರದ್ದುಪಡಿಸುವಂತೆ ನಿರ್ದೇಶನ ನೀಡಲಾಗಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಯಾವುದೇ ಸ್ಥಾನಗಳನ್ನು ಹರಾಜು ಹಾಕುವುದು ಸರಿಯಲ್ಲ ಎಂದು ಆಯೋಗ ತಿಳಿಸಿದೆ.

ಪ್ರತಿನಿತ್ಯ ಹರಾಜು ಮೂಲಕ ಸದಸ್ಯರುಗಳು ಆಯ್ಕೆಯಾಗುತ್ತಿರುವುದು ಅಧಿಕವಾಗುತ್ತಿದೆ ಎಂದು ಚುನಾವಣಾ ಆಯುಕ್ತ ಬಸವರಾಜು ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ಸಂವಾದ ಸಂದರ್ಭದಲ್ಲಿ ತಿಳಿಸಿದ್ದಾರೆ. ಈ ರೀತಿ ಹರಾಜು ಹಾಕುವ, ಆಮಿಷ ಒಡ್ಡುವ, ಚುನಾವಣಾ ನಿಯಮಗಳನ್ನು ಮೀರಿ ಪಂಚಾಯತ್‍ಗಳಿಗೆ ಆಯ್ಕೆ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಈ ಕುರಿತು ಅರಿವು ಮೂಡಿಸುವ ಕೆಲಸ ಮಾಡುವಂತೆ ಆಯೋಗ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ಕಲಬುರಗಿ, ಯಾದಗಿರಿ, ವಿಜಯಪುರ, ಬೀದರ್, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಅನೇಕ ಕಡೆ ಒಬ್ಬೊಬ್ಬ ಸದಸ್ಯರನ್ನು 5 ಲಕ್ಷದಿಂದ 1 ಕೋಟಿವರೆಗೂ ಹರಾಜು ಹಾಕಲಾಗಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಗಟ್ಟಲು ತಾಲ್ಲೂಕು ಮತ್ತು ಹೊಬಳಿವಾರು ಎಂ.ಸಿ.ಸಿ. ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಿಗೂ ಸಹ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News