ರಾಜಕೀಯ ಲಾಭಕ್ಕಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ: ಡಾ.ಎಚ್.ಸಿ.ಮಹದೇವಪ್ಪ

Update: 2020-12-13 11:45 GMT

ಬೆಂಗಳೂರು , ಡಿ.13 : ಭಾರತೀಯ ಜನತಾ ಪಕ್ಷವು ರಾಜಕೀಯ ಲಾಭಕ್ಕಾಗಿ ಗೋಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ದೇಶದಲ್ಲಿ ಇಸ್ಲಾಂ ಧರ್ಮ ಪ್ರವೇಶ ಮಾಡುವುದಕ್ಕಿಂತ ಹಿಂದಿನಿಂದಲೂ ಹಿಂದೂಗಳು ದನದ ಮಾಂಸವನ್ನು ಭಕ್ಷಣೆ ಮಾಡುತ್ತಿದ್ದರು. ಈ ಬಗ್ಗೆ ನಮ್ಮ ವೇದ ಪುರಾಣಗಳಲ್ಲೇ ಹಲವಾರು ಉಲ್ಲೇಖಗಳಿದ್ದು, ಈಗಲೂ ಅವುಗಳನ್ನು ನಾವು ಕಾಣಬಹುದು ಮತ್ತು ಅಧ್ಯಯನ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ‘ಹಸಿವು ಮತ್ತು ಶ್ರೇಷ್ಠ ಕತೆ’ ಎಂಬ ಕತೆಯೊಂದರಲ್ಲಿ ವಿಶ್ವಾಮಿತ್ರರು ಮಾತನಾಡುತ್ತಾ ‘ತಿನ್ನುವುದೇ ಶ್ರೇಷ್ಠವಲ್ಲ, ಕನಿಷ್ಠವೂ ಅಲ್ಲ. ತಾಳಲಾರದ ಹಸಿವಾದಾಗ ನಾನೊಮ್ಮೆ ನಾಯಿಯನ್ನೇ ತಿಂದೆ’ ಎಂದು ಹೇಳುತ್ತಾರೆ. ಇನ್ನು ವೇದಗಳ ಕಾಲದಲ್ಲಿ ಹಸುವಿನ ಕರುವನ್ನು, ಕುದುರೆಯನ್ನು ಹೋಮ ಹವನಗಳಿಗೆ ಬಳಸಿ ಸೇವಿಸುತ್ತಿದ್ದರೆಂಬ ವಿವರಗಳು ದಾಖಲಾಗಿವೆ. ಸ್ವಾಮಿ ವಿವೇಕಾನಂದರೇ ತಮ್ಮ ಪತ್ರವೊಂದರಲ್ಲಿ ದನದ ಮಾಂಸ ತಿನ್ನದ ಬ್ರಾಹ್ಮಣ ಬ್ರಾಹ್ಮಣನೇ ಅಲ್ಲವೆಂಬ ರೀತಿ ಹೇಳಿದ್ದಾರೆ. ಇದರ ಅರ್ಥ ದನದ ಮಾಂಸದ ಸೇವನೆಗೆ ಬ್ರಾಹ್ಮಣರಲ್ಲಿ ಎಷ್ಟು ಮಹತ್ವವಿತ್ತು ಎಂಬುದಾಗಿದೆ ಎಂದು ವಿವರಿಸಿದ್ದಾರೆ.

ಸಾಹಿತಿ ಭೈರಪ್ಪರ ಪರ್ವ ಕಾದಂಬರಿಯಲ್ಲಿ ಅರ್ಜುನ, ಭೀಮ ಇವರೆಲ್ಲಾ ಬೇಟೆ ಆಡಿಕೊಂಡು ಬಂದು ಕೋಣದ ಮಾಂಸವನ್ನು ಊಟ ಮಾಡುವಾಗ, ಏನು ಇವತ್ತು ನಮ್ಮ ಅರಮನೆಗಿಂತ ಚೆನ್ನಾಗಿ ಅಡುಗೆ ಮಾಡಿದ್ದಾರೆ, ಯಾರು ಮಾಡಿದ್ದು ಎಂದವರು ಕೇಳುತ್ತಾರೆ. ಇದರ ಅರ್ಥವೇನು ಹಾಗಿದ್ದರೆ? ಎಂದು ಮಾಜಿ ಸಚಿವರು ಮಾಜಿ ಸಚಿವ ಪ್ರಶ್ನಿಸಿದ್ದಾರೆ.

ನಾಲ್ಕನೇ ಶತಮಾನದ ನಂತರ ಭಾರತದಲ್ಲಿ ಬುದ್ಧನ ಪ್ರಭಾವದಿಂದಾಗಿ ಮಾಂಸಹಾರ ನಿಷೇಧವು ಹೆಚ್ಚು ಮುನ್ನಲೆಗೆ ಬಂತು. ಜನರನ್ನು ಹೆಚ್ಚು ಪ್ರೀತಿಯಿಂದ ಕಂಡು ಅವರಿಗಾಗಿಯೇ ಬದುಕನ್ನೇ ಸವೆಸಿ ಸಮಾನತೆಗೆ ತೊಡಕಾಗಿದ್ದ ದುಷ್ಟ ಜನರ ವಿರುದ್ಧ ಹೋರಾಟ ನಡೆಸಿದ್ದ ಬುದ್ಧನ ಮೇಲಿನ ಪ್ರೀತಿಯ ಕಾರಣಕ್ಕೆ ಬಹುತೇಕ ಎಲ್ಲ ಜನರು ಬುದ್ಧನನ್ನು ಬೆಂಬಲಿಸಿದರು. ಆಗ ಅತ್ತ ಗೋಮಾಂಸ ಸೇವನೆಗೆ ಕಡಿವಾಣ ಬಿದ್ದು ಇತ್ತ ಜನರ ಬೆಂಬಲವೂ ಇಲ್ಲದ ಪರಿಸ್ಥಿತಿಗೆ ತಲುಪಿದ ಕೋಮುವಾದಿಗಳು ಕ್ರಮೇಣ ರಾಜಕೀಯ ಲಾಭದ ಉದ್ದೇಶಕ್ಕಾಗಿ ಗೋಮಾಂಸ ಭಕ್ಷಕರಿಂದ ಗೋ ರಕ್ಷಕರಾಗಿ ಬದಲಾದರು ಎಂದು ಟ್ವೀಟ್ ಮೂಲಕ ಸರಕಾರದ ಗೋ ರಕ್ಷಣಾ ಮಸೂದೆ ಕಾಯ್ದೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News