ಕೆಪಿಎಸ್‌ಸಿ: ನೇಮಕಾತಿ ಆದೇಶ ಹೊರಡಿಸಲು ಪ್ರಿಯಾಂಕ್ ಖರ್ಗೆ ಒತ್ತಾಯ

Update: 2020-12-13 11:54 GMT
Photo: Facebook

ಬೆಂಗಳೂರು, ಡಿ. 13: 2019ರ ನವೆಂಬರ್ 13ರಂದು ಕರ್ನಾಟಕ ಲೋಕಸೇವಾ ಆಯೋಗ ಹೊರಡಿಸಿದ್ದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿದ್ದು, ನೇಮಕಾತಿ ಆದೇಶ ಹೊರಡಿಸದ 124 ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶ ಕೊಡುವಂತೆ ಶಾಸಕ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, 2019ರಂದು ನ.13ರಂದು ಲೋಕಸೇವಾ ಆಯೋಗವು ವಿವಿಧ ಇಲಾಖೆಗಳ 661 ಅಭ್ಯರ್ಥಿಗಳ ಪೈಕಿ ಬೇರೆ ಬೇರೆ ಇಲಾಖೆಗಳ 124 ಅಭ್ಯರ್ಥಿಗಳಿಗೆ ಇಲ್ಲಿಯವರೆಗೂ ಆದೇಶಪ್ರತಿ ಪ್ರತಿ ನೀಡಿಲ್ಲ. ಇದು ತಾರತಮ್ಯ ನೀತಿಯಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗ ಶೀಘ್ರ ಲಿಪಿಗಾರರು ಹಾಗೂ ಬೆರಳಚ್ಚುಗಾರರ ಹುದ್ದೆ ನೇಮಕಾತಿಯಲ್ಲಿ ಉತ್ತೀರ್ಣರಾದ 661 ಅಭ್ಯರ್ಥಿಗಳ ಅಂತಿಮ ಪಟ್ಟಿಯಲ್ಲಿ 537 ಅಭ್ಯರ್ಥಿಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಸಾರಿಗೆ, ಅಂಗವಿಕಲ, ಸಹಕಾರ, ಪಶುಸಂಗೋಪಾನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ರೇಷ್ಮೆ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಗಳು ಉಳಿದ 124 ಅಭ್ಯರ್ಥಿಗಳಿಗೆ ಇಲ್ಲಿಯವರೆಗೂ ನೇಮಕಾತಿ ಆದೇಶ ನೀಡಿಲ್ಲ.

ನೇಮಕಾತಿ ಪ್ರಕ್ರಿಯೆ ನಡೆದು 4ವರ್ಷ ಕಳೆದರೂ 124 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಸಿಗದೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸರಕಾರ ಇದನ್ನು ಮನಗೊಂಡು ಕೂಡಲೇ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕೆಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News