ಗೋಹತ್ಯೆ ನಿಷೇಧ ಮಸೂದೆ ಅವೈಜ್ಞಾನಿಕ, ರೈತರಿಗೆ ಮಾರಕ: ಬಡಗಲಪುರ ನಾಗೇಂದ್ರ

Update: 2020-12-13 17:19 GMT

ಮೈಸೂರು, ಡಿ.13: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೋಹತ್ಯೆ ನಿಷೇಧ ಕಾಯ್ದೆ ಅವೈಜ್ಞಾನಿಕವಾಗಿದ್ದು, ರೈತರಿಗೆ ಮಾರಕವಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಗೋವುಗಳಿಗೂ ರೈತರಿಗೂ ಹೆಚ್ಚಿನ ಒಡನಾಟವಿದೆ. ಉಪಯುಕ್ತ ಗೋವುಗಳನ್ನು ಯಾವುದೇ ಕಾರಣಕ್ಕೂ ರೈತರು ಮಾರುವುದಿಲ್ಲ. ಅನುಪಯುಕ್ತ ಗೋವುಗಳನ್ನು ಮಾತ್ರ ಸಂತೆಗೆ ಕೊಂಡೊಯ್ದು ಮಾರುತ್ತಾರೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ರೈತರು ತೊಂದರೆಗೆ ಸಿಲುಕಲಿದ್ದಾರೆ. ಈ ಕಾಯ್ದೆ ಗೋರಕ್ಷಕರ ಹೆಸರಿನಲ್ಲಿ ಯಾರು ಏನು ಬೇಕಾದರೂ ಮಾಡಲು ಅನುಕೂಲ ಕಲ್ಪಿಸಿದೆ. ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆಯನ್ನೇ ನಡೆಸದೇ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿರುವುದು ಜನ ವಿರೋಧಿಯಾಗಿದೆ ಎಂದು ಟೀಕಿಸಿದರು.

ನಾನೊಬ್ಬ ವಕೀಲನಾಗಿ ಹೇಳುತ್ತಿದ್ದೇನೆ. ಗೋಹತ್ಯೆ ನಿಷೇಧ ಕಾಯ್ದೆ ವಿಚಾರ ನ್ಯಾಯಾಲಯದಲ್ಲಿ ಬಿದ್ದು ಹೋಗಲಿದೆ ಎಂದು ಹೇಳಿದರು.

ಯಾವುದೇ ಮುನ್ಸೂಚನೆ ನೀಡದೇ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದಿಂದ ಜನ ಸಾಮಾನ್ಯರು ತೊಂದರೆಗೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಸಾರಿಗೆ ನೌಕರರ ಮನವಿಗೆ ಸ್ಪಂದಿಸಬೇಕು. ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ನೌಕರರು ಕೂಡಾ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ನಮ್ಮ ಸ್ವತ್ತುಗಳಿಗೆ ನಾವೇ ಹಾನಿ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News