3ನೇ ದಿನವೂ ಕೆಎಸ್ಆರ್‌ಟಿಸಿ ನೌಕರರ ಮುಷ್ಕರ: ಪ್ರಯಾಣಿಕರ ಪರದಾಟ, ನೌಕರರ ಕುಟುಂಬಸ್ಥರಿಂದಲೂ ಧರಣಿ

Update: 2020-12-13 17:28 GMT

ಚಿಕ್ಕಮಗಳೂರು, ಡಿ.13: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನೌಕರರು ನಡೆಸುತ್ತಿರುವ ಧರಣಿಗೆ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿರುವ ಹಿನ್ನೆಲೆಯಲ್ಲಿ ಮೂರನೇ ದಿನವೂ ನೌಕರರ ಧರಣಿ ಮುಂದುವರಿದಿದೆ. ಮೂರನೇ ದಿನದ ಮುಷ್ಕರದ ಅಂಗವಾಗಿ ನೌಕರರು ಹಾಗೂ ಅವರ ಕುಟುಂಬಸ್ಥರು ಸಾರಿಗೆ ವಿಭಾಗದ ಕಚೇರಿ ಎದುರು ಧರಣಿ ನಡೆಸಿದರು.

ನಗರದ ಕೆಎಸ್ಆರ್‌ಟಿಸಿ ಬಸ್‍ನಿಲ್ದಾಣ ಮತ್ತು ಡಿಪೋದಲ್ಲಿ ಬಸ್‍ಗಳನ್ನು ನಿಲ್ಲಿಸಿದ ಚಾಲಕರು ಮತ್ತು ನಿರ್ವಾಹಕರು ನಗರದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದರೆ, ನೌಕರರ ಕುಟುಂಬಸ್ಥರು ಸಾರಿಗೆ ಇಲಾಖೆ ಕಚೇರಿ ಎದುರು ಧರಣಿ ನಡೆಸಿದರು. ಮುಷ್ಕರದ ಹಿನ್ನೆಲೆಯಲ್ಲಿ ಬಸ್‍ಗಳು ರಸ್ತೆಗಳಿಯದಿರುವುದರಿಂದ ಪ್ರಯಾಣಿಕರು ಬಸ್‍ ನಿಲ್ದಾಣದ ಕಡೆ ಮುಖ ಮಾಡಲಿಲ್ಲ. ಪರಿಣಾಮ ಇಡೀ ಬಸ್‍ ನಿಲ್ದಾಣ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿತ್ತು. ಬಸ್‍ ನಿಲ್ದಾಣದಲ್ಲಿ ವ್ಯಾಪಾರ ವಹಿವಾಟು ಸ್ತಬ್ಧಗೊಂಡಿತ್ತು.

ಕೆಎಸ್ಆರ್‌ಟಿಸಿ ಸಿಬ್ಬಂದಿ ಧರಣಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿಕರ ಘಟನೆ ನಡೆಯದಂತೆ ತಡೆಗಟ್ಟಲು ಪೊಲೀಸ್ ಇಲಾಖೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ತುರ್ತು ಕೆಲಸದ ಮೇಲೆ ಬೇರೆ ಊರುಗಳಿಗೆ ತೆರಳಲು ಬಂದಿದ್ದ ಪ್ರಯಾಣಿಕರು ಬಸ್ ಇಲ್ಲದ ಹಿನ್ನೆಲೆಯಲ್ಲಿ ಖಾಸಗಿ ಬಸ್, ಆಟೊ ಟ್ಯಾಕ್ಸಿ ಮೊರೆ ಹೋದರು. ಖಾಸಗಿ ವಾಹನ ಮಾಲಕರು ದುಪಟ್ಟು ಹಣ ವಸೂಲಿ ಮಾಡುತ್ತಿರುವ ಆರೋಪ ಈಗಾಗಲೇ ಕೇಳಿ ಬಂದಿದ್ದು, ಅನಿವಾರ್ಯವಾಗಿ ಜಿಲ್ಲೆಯಿಂದ ಮಂಗಳೂರು, ಬೆಂಗಳೂರು, ಹಾಸನ, ಶಿವಮೊಗ್ಗ, ದಾವಣಗೆರೆ, ಮೈಸೂರು, ಸೇರಿದಂತೆ ವಿವಿಧ ಊರುಗಳಿಗೆ ಪ್ರಯಾಣಿಕರು ದುಬಾರಿ ಹಣ ತೆತ್ತು ತೆರಳಬೇಕಾಯಿತು. ಜಿಲ್ಲೆಯ ಜೀವನಾಡಿ ಕೆಎಸ್ಆರ್‌ಟಿಸಿ ಬಸ್ ಸಂಚಾರವಿಲ್ಲದೇ ಪ್ರಯಾಣಿಕರ ಗೋಳು ಹೇಳ ತೀರದಂತಾಗಿದೆ.

ಬಸ್‍ನಲ್ಲೇ ಚಾಲಕರು-ನಿರ್ವಹಕರ ವಾಸ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಳಿಟ್ಟಿದ್ದು, ಕಳೆದ ಮೂರು ದಿನಗಳಿಂದ ಚಾಲಕರು ಮತ್ತು ನಿರ್ವಹಕರು ಮೈಕೊರೆಯುವ ಚಳಿಯ ನಡುವೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿರುವ ಬಸ್‍ಗಳಲ್ಲೇ ಮಲಗಿ ಕಾಲ ಕಳೆಯುತ್ತಿದ್ದಾರೆ. ಬೆಳಿಗ್ಗೆ ಎದ್ದ ಕೂಡಲೇ ಗುಂಪುಗಟ್ಟಿ ಬಿಸಿಲು ಕಾಯಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇನ್ನೂ ಮೂರು ದಿನಗಳಿಂದ ಮನೆಕಡೆ ಮುಖ ಮಾಡದೆ ಸಿಬ್ಬಂದಿಗಳು ಊಟ ತಿಂಡಿಯನ್ನು ಬಸ್ಸಿನಲ್ಲೇ ಮಾಡುತ್ತಿದ್ದಾರೆ.

ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ: ಎರಡು ದಿನಗಳಿಂದ ಜಿಲ್ಲೆಯಲ್ಲಿ ಬಸ್‍ಸಂಚಾರ ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು. ಪ್ರಯಾಣಿಕರು ಬಸ್ ಸಂಚಾರವಿಲ್ಲದೇ ಸಂಕಷ್ಟ ಅನುಭವಿಸಿದ್ದರು. ಶನಿವಾರ ಚಿಕ್ಕಮಗಳೂರು ವಿಭಾಗದಿಂದ ಮೂರು ಬಸ್‍ಗಳು ಸಂಚಾರ ನಡೆಸಿದ್ದು. ಬೇಲೂರು, ಸಕಲೇಶಪುರ, ಅರಸೀಕೆರೆ ಹಾಗೂ ಬಾಣಾವರ ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಡಿಸಿ ವಿರೇಶ್ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ಭದ್ರತೆಯಲ್ಲಿ ಬಸ್‍ ಸಂಚಾರ ನಡೆಸಿದವು. ಆದರೆ ಬಸ್‍ಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News