ಸೋಮವಾರದಿಂದ ಅಮೆರಿಕನ್ನರಿಗೆ ಕೋವಿಡ್-19 ಲಸಿಕೆ ನೀಡಿಕೆ

Update: 2020-12-13 17:38 GMT

 ವಾಶಿಂಗ್ಟನ್,ಡಿ.13: ಅಮೆರಿಕದ ಜನತೆಗೆ ಫೈಝರ್-ಬಯೋಎನ್‌ಟೆಕ್ ಆವಿಷ್ಕರಿಸಿರುವ ಕೋವಿಡ್-19 ಲಸಿಕೆಯನ್ನು ಸೋಮವಾರದಿಂದ ನೀಡಲಾಗುವುದು ಎಂದು ಈ ಅಭಿಯಾನದ ಉಸ್ತುವಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಲಸಿಕೆಯ ಮೊದಲ ಡೋಸ್‌ಗಳನ್ನು ರವಿವಾರ ರವಾನಿಸಲಾಗಿದ್ದು, ಅದನ್ನು ಸೋಮವಾರ ಬೆಳಗ್ಗಿನಿಂದ ನೀಡಲು ಪ್ರಾರಂಭಿಸಲಾಗುವುದು ಎಂದರು. ‘‘ಅಮೆರಿಕನ್ ಜನರಿಗೆ ಲಸಿಕೆಯನ್ನು ಒದಗಿಸುವಲ್ಲಿ ಸಫಲರಾಗುತ್ತೇವೆಯೆಂಬ ಶೇ.100ರಷ್ಟು ಆತ್ಮವಿಶ್ವಾಸವನ್ನು ನಾವು ಹೊಂದಿದ್ದೇವೆ’’ ಎಂದವರು ಹೇಳಿದ್ದಾರೆ.

  ‘‘ಸೋಮವಾರದಂದು ಅಮೆರಿಕದ ಎಲ್ಲಾ ರಾಜ್ಯಗಳ 145 ಸ್ಥಳಗಳಲ್ಲಿ ಲಸಿಕೆಯನ್ನು ವಿತರಿಸುವ ನಿರೀಕ್ಷೆಯಿದೆ. ಮಂಗಳವಾರದಂದು ಇನ್ನೂ 425 ಸ್ಥಳಗಳಲ್ಲಿ ನೀಡಲಾಗುವುದು. ಅಂತಿಮವಾಗಿ ಬುಧವಾರದಂದು 66 ಸ್ಥಳಗಳಲ್ಲಿ ವಿತರಿಸಲಾಗುವುದು. ಇದರೊಂದಿಗೆ ಫೈಝರ್-ಬಯೋಎನ್‌ಟೆಕ್ ಲಸಿಕೆಯ ಆರಂಭಿಕ ಹಂತದ ಪೂರೈಕೆಯು ಪೂರ್ಣವಾಗಲಿದೆ ಎಂದವರು ತಿಳಿಸಿದರು. ಮೊದಲನೆ ಹಂತದಲ್ಲಿ ಮೂವತ್ತು ಲಕ್ಷ ಮಂದಿಗೆ ಲಸಿಕೆಯನ್ನು ನೀಡುವ ಯೋಜನೆಯನ್ನು ಅಮೆರಿಕ ಹೊಂದಿದೆ. ಆರಂಭಿಕವಾಗಿ ಆರೋಗ್ಯಪಾಲನಾ ಕಾರ್ಯಕರ್ತರು ಹಾಗೂ ನರ್ಸಿಂಗ್ ಹೋಂ ಸಿಬ್ಬಂದಿಗೆ ಲಸಿಕೆಯನ್ನು ನೀಡಬೇಕೆಂದು ಫೆಡರಲ್ ಆರೋಗ್ಯ ಇಲಾಖಾಧಿಕಾರಿಗಳು ಶಿಫಾರಸು ಮಾಡಿದ್ದಾರೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರವನ್ನು ಆಯಾ ರಾಜ್ಯಗಳ ಆಯ್ಕೆಗೆ ಬಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News