ಪ್ರವಾಹ: ಸಿಎಂ ಭೇಟಿ ಮಾಡಿದ ಕೇಂದ್ರ ಅಧ್ಯಯನ ತಂಡ; ಹೆಚ್ಚಿನ ಅನುದಾನ ಬಿಡುಗಡೆಗೆ ಬಿಎಸ್‌ವೈ ಮನವಿ

Update: 2020-12-13 18:01 GMT

ಬೆಂಗಳೂರು, ಡಿ.13: ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿಯ ಅಧ್ಯಯನ ನಡೆಸಲು ಆಗಮಿಸಿರುವ ರಮೇಶ್ ಕುಮಾರ್ ಘಂಟ ಅವರ ನೇತೃತ್ವದ ಕೇಂದ್ರ ಇಂಟರ್ ಮಿನಿಸ್ಟೀರಿಯಲ್ ತಂಡವು ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಚರ್ಚಿಸಿತು.

ರಾಜ್ಯದಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಖುದ್ದು, ಎರಡು ಬಾರಿ ವೀಡಿಯೋ ಸಂವಾದ ನಡೆಸಿ ಪರಿಸ್ಥಿತಿಯನ್ನು ಪರಿಶೀಲಿಸಿ ಪ್ರವಾಹ ಪರಿಸ್ಥಿತಿಯ ನಿರ್ವಹಣೆಗೆ ಎಲ್ಲ ನೆರವು ನೀಡಿದ್ದಕ್ಕಾಗಿ ಆಭಾರಿಯಾಗಿರುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಎನ್.ಡಿ.ಆರ್ ಎಫ್ ನಿಂದ ಕೇಂದ್ರವು 577.84 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಎರಡನೇ ಇಂಟರ್ ಮಿನಿಸ್ಟೀರಿಯಲ್ ತಂಡವನ್ನು ರಾಜ್ಯಕ್ಕೆ ಕಳುಹಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಅರ್ಪಿಸಿದರು.

ಆಗಸ್ಟ್ ನಲ್ಲಿ ಉಂಟಾದ ಪ್ರವಾಹದ ನಂತರ ರಾಜ್ಯದಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ 2 ಮತ್ತು 3ನೇ ವಾರದಲ್ಲಿ ಭಾರಿ ಮಳೆ ಉಂಟಾಯಿತು. ಇದರೊಂದಿಗೆ ಮಹಾರಾಷ್ಟ್ರದ ಜಲಾಶಯಗಳಿಂದ ಹೆಚ್ಚಿನ ನೀರು ಬಿಡುಗಡೆಯಾಗಿ ಒಂದೇ ವರ್ಷದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಭೀಮಾ ಮತ್ತು ಕೃಷ್ಣಾ ಜಲಾಶಯಗಳಲ್ಲಿ ಪ್ರವಾಹ ಉಂಟಾಯಿತು ಎಂದರು.

ಪ್ರವಾಹ ಮತ್ತು ಭೂ ಕುಸಿತದಿಂದಾಗಿ 16 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಮೂಲಭೂತ ಸೌಲಭ್ಯಗಳಿಗೆ ತೀವ್ರ ಹಾನಿಯುಂಟಾಗಿರುವುದಲ್ಲದೆ, 34,794 ಮನೆಗಳಿಗೆ ಹಾನಿಯುಂಟಾಗಿದ್ದು, ಒಟ್ಟಾರೆ 15,410 ಕೋಟಿ ರೂ.ಗಳ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. 

ತಕ್ಷಣದ ಪರಿಹಾರವಾಗಿ ರಾಜ್ಯ ಸರ್ಕಾರವು 7.12 ಲಕ್ಷ ರೈತರಿಗೆ 551.14 ಕೋಟಿ ರೂ.ಗಳ ಇನ್‍ಪುಟ್ ಸಹಾಯಧನವನ್ನು ಹಂಚಿಕೆ ಮಾಡಿದೆ ಎಂದು ವಿವರಿಸಿದ ಮುಖ್ಯಮಂತ್ರಿ, ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ 5 ಲಕ್ಷ ರೂ, ತೀವ್ರ ಹಾನಿಗೊಳಗಾದ ಮನೆಗಳಿಗೆ 3 ಲಕ್ಷ ರೂ.ಗಳು ಹಾಗೂ ಭಾಗಶ: ಹಾನಿಗೊಳಗಾದ ಮನೆಗಳಿಗೆ ರೂ.50 ಸಾವಿರಗಳ ಆರ್ಥಿಕ ನೆರವನ್ನು ರಾಜ್ಯ ಸರ್ಕಾರ ಒದಗಿಸುತ್ತಿದೆ. ಈ ಮೊತ್ತವು ಎಸ್.ಡಿ.ಆರ್.ಎಫ್ ಮಾರ್ಗಸೂಚಿಗಿಂತಲೂ ಹೆಚ್ಚುವರಿಯಾಗಿ ರಾಜ್ಯದ ಅನುದಾನದಿಂದ ಭರಿಸಿದೆ. ಈ ಸಾಲಿನಲ್ಲಿ 465 ಕೋಟಿ.ರೂ.ಗಳನ್ನು ಗೃಹ ನಿರ್ಮಾಣ ನೆರವಿಗಾಗಿ ಭರಿಸಲಿದೆ ಎಂದರು.  

ರಾಜ್ಯದಲ್ಲಿ ಪ್ರವಾಹದಿಂದ ಅಂದಾಜು 15,410 ಕೋಟಿ ರೂ.ಗಳ ಹಾನಿ ಉಂಟಾಗಿರುವ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಹಾಗೂ ಹಾನಿಗೊಳಗಾಗಿರುವ ಮೂಲಭೂತ ಸೌಕರ್ಯಗಳ ದುರಸ್ತಿಗೆ ಐ.ಎಂ.ಸಿ.ಟಿ ತಂಡವು ಕೇಂದ್ರ ನೆರವನ್ನು ಒದಗಿಸಲು ಶಿಫಾರಸ್ಸು ಮಾಡಬೇಕೆಂದು ಮುಖ್ಯಮಂತ್ರಿ ತಿಳಿಸಿದರು. 

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಾನೂನು ಹಾಗೂ‌‌ ಸಂಸದೀಯ ವ್ಯವಹಾರಗಳ ಮತ್ತು ಸಣ್ಣ ‌ನೀರಾವರಿ‌ ಸಚಿವರಾದ  ಜೆ.ಸಿ.‌ಮಾಧುಸ್ವಾಮಿ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ರಾಜ್ಯ ಸರ್ಕಾರದ ವಿಶೇಷ ಕಾರ್ಯದರ್ಶಿ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News