ಚಿಕ್ಕಮಗಳೂರು: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

Update: 2020-12-15 14:52 GMT

ಚಿಕ್ಕಮಗಳೂರು, ಡಿ.15: ಕಸ್ತೂರಿ ರಂಗನ್ ವರದಿ ಜಾರಿ ತಡೆಯುವ ನಿಟ್ಟಿನಲ್ಲಿ ಚರ್ಚೆ ನಡೆಸಲು ರಾಜ್ಯದ 10 ಜಿಲ್ಲೆಗಳ ವ್ಯಾಪ್ತಿಯ ಜನಪ್ರತಿನಿಧಿಗಳು ವಿಶೇಷ ಅಧಿವೇಶನ ಕರೆಯುವಂತೆ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಬೇಕು. ವರದಿಯನ್ನು ಜಾರಿ ಮಾಡುವುದೇ ಆದಲ್ಲಿ ಕೇರಳ ಮಾದರಿಯಲ್ಲೇ ವರದಿ ಜಾರಿಗೆ ಸರಕಾರವನ್ನು ಒಕ್ಕೊರಲಿನಿಂದ ಆಗ್ರಹಿಸಬೇಕಿದೆ ಎಂದು ವಕೀಲ ಹಾಗೂ ಚಿಂತಕ ಸುಧೀರ್ ಕುಮಾರ್ ಮುರೋಳಿ ಅಭಿಪ್ರಾಯಿಸಿದ್ದಾರೆ.

ಮಂಗಳವಾರ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಹಾಗೂ ವಿವಿಧ ರಾಜಕೀಯ ಪಕ್ಷಗಳು ಮತ್ತು ದಲಿತ, ರೈತ, ಕಾರ್ಮಿಕ, ಕನ್ನಡಪರ ಸಂಘಟನೆಗಳು ನಗರದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಮಲೆನಾಡಿಗರೆಂದರೆ ಅರಣ್ಯ ನಾಶ ಮಾಡುವವರೆಂದು ಕೆಲ ಪರಿಸರವಾದಿಗಳು, ಎಂಎನ್‍ಸಿ ಕಂಪೆನಿಗಳು ಬಿಂಬಿಸುತ್ತಿದ್ದಾರೆ. ಇದನ್ನೇ ಬಯಲು ಭಾಗದ ಶಾಸಕರು, ಸಂಸದರೂ ಸೇರಿದಂತೆ ಅಧಿಕಾರಿಶಾಹಿ ವ್ಯವಸ್ಥೆ ನಂಬಿದೆ. ಪರಿಣಾಮ ಮಲೆನಾಡಿನಲ್ಲಿ ಪರಿಸರ ಸಂರಕ್ಷಣೆ ನೆಪದಲ್ಲಿ ವಿವಿಧ ಅರಣ್ಯ ಯೋಜನೆಗಳ ಜಾರಿಗೆ ಸರಕಾರ ಮುಂದಾಗುತ್ತಿದ್ದು, ಇಲ್ಲಿನ ವೈವಿಧ್ಯಮಯ ಸಾಂಸ್ಕೃತಿಕ ಹಿನ್ನೆಲೆಯ ಜನಜೀವನ ಹಾಗೂ ಕೃಷಿ ಪದ್ಧತಿಯನ್ನು ನಾಶ ಮಾಡಲು ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ದೇಶದ 6 ರಾಜ್ಯಗಳ ವ್ಯಾಪ್ತಿಯಲ್ಲಿರುವ ಪಶ್ಚಿಮಘಟ್ಟ ಪ್ರದೇಶ ರಾಜ್ಯದ 10 ಜಿಲ್ಲೆಗಳಲ್ಲಿ ಹರಡಿಕೊಂಡಿದ್ದು, ಈ ಪರಿಸರ ಸಂರಕ್ಷಣೆಗೆ ಪರಿಸರವಾದಿಗಳು 10 ವರ್ಷಗಳ ಹಿಂದೆ ಗೋವಾದಲ್ಲಿ ಸಭೆಯೊಂದನ್ನು ನಡೆಸಿದ್ದರು. ಈ ಸಭೆಯ ಬಳಿಕ ನ್ಯಾಯಾಲಯದ ಆದೇಶದ ಮೇರೆಗೆ ಸರಕಾರ ಮಾಧವ್ ಗಾಡ್ಗಿಳ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಪಶ್ಚಿಮಘಟ್ಟ ಸಂರಕ್ಷಣೆ ಸಂಬಂಧ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಈ ಸಮಿತಿಯಲ್ಲಿದ್ದ ಸದಸ್ಯರು ನಗರ ಪ್ರದೇಶದ ಏಸಿ ಕಚೇರಿಯಲ್ಲಿ ಕುಳಿತು ಸ್ಯಾಟ್‍ಲೈಟ್ ಚಿತ್ರಗಳ ಆಧಾರದ ಮೇಲೆ ತಯಾರಿಸಿದ ವರದಿಯನು ಸರಕಾರಕ್ಕೆ ಸಲ್ಲಿಸಿದ್ದು, ಈ ವರದಿಯಲ್ಲಿ ಜನವಸತಿ ಪ್ರದೇಶ, ಕೃಷಿ ಭೂಮಿ ಹಾಗೂ ಇತರ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಟ್ಟ ಪ್ರದೇಶವನ್ನೆಲ್ಲ ಸೇರಿಸಲಾಗಿತ್ತು ಎಂದರು.

ಈ ವರದಿಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೆ ಕಸ್ತೂರಿರಂಗನ್ ನೇತೃತ್ವದಲ್ಲಿ ಮರು ಸಮೀಕ್ಷೆಗೆ ಸಮಿತಿ ನೇಮಕ ಮಾಡಿದ್ದು, ಈ ಸಮಿತಿ ಕೂಡ ಜನಾಭಿಪ್ರಾಯ ಸಂಗ್ರಹ, ಕೃಷಿ ಭೂಮಿ, ಜನವಸತಿ ಪ್ರದೇಶಗಳಿಗೆ ಭೇಟಿ ನೀಡದೇ ಬಾಹ್ಯಾಕಾಶ ಸರ್ವೇ ಆಧಾರದ ಮೇಲೆ ವರದಿಯನ್ನು ಸಿದ್ಧಪಡಿಸಿದ್ದು, ನ್ಯಾಯಾಲಯ ಈ ವರದಿಯ ಅನುಷ್ಠಾನಕ್ಕೆ ಡಿ.31ರ ಗಡುವು ನೀಡಿದೆ. ಆದರೆ ರಾಜ್ಯ, ಕೇಂದ್ರ ಸರಕಾರಗಳು ವರದಿ ಜಾರಿ ವ್ಯಾಪ್ತಿಗೊಳಪಡುವ ಗ್ರಾಮಗಳಲ್ಲಿನ ಜನರ ಬದುಕನ್ನು ನಿರ್ಲಕ್ಷಿಸಿರುವುದರಿಂದ ವರದಿ ವ್ಯಾಪ್ತಿಯ ಗ್ರಾಮಗಳ ಜನರ ಬದುಕು ಮತ್ತು ಕೃಷಿ ಅತಂತ್ರಗೊಂಡಿದೆ ಎಂದ ಅವರು, ಚಿಕ್ಕಮಗಳೂರು, ಕೊಡಗು, ಹಾಸನ ಸೇರಿದಂತೆ ರಾಜ್ಯದ 10 ಜಿಲ್ಲೆಗಳು ಕಸ್ತೂರಿ ರಂಗನ್ ವರದಿ ಜಾರಿ ವ್ಯಾಪ್ತಿಗೆ ಒಳಪಡಲಿದ್ದು, ವರದಿ ಜಾರಿಯಾದಲ್ಲಿ ಕೃಷಿ ಸೇರಿದಂತೆ ಜನರ ಬದುಕು ಬೀದಿಗೆ ಬರಲಿದೆ. ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ 40 ಮಂದಿ ಜನಪ್ರತಿನಿಧಿಗಳು ವರದಿ ಜಾರಿಯಿಂದಾಗುವ ದುಷ್ಪರಿಣಾಮಗಳನ್ನು ಸರಕಾರಕ್ಕೆ ಮನವರಿಕೆ ಮಾಡುವ ನಿಟ್ಟಿನಲ್ಲಿ ವಿಶೇಷ ಅಧಿವೇಶನ ಕರೆಯಲು ಸರಕಾರದ ಮೇಲೆ ಒತ್ತಡ ಹೇರಬೇಕು. ಕೇರಳ ಮಾದರಿಯಲ್ಲಿ ಜನವಸತಿ ಪ್ರದೇಶ, ಸಣ್ಣ ಉದ್ದಿಮೆಗಳು, ಕೃಷಿ ಭೂಮಿ ಹೊರತುಪಡಿಸಿ ಹಾಗೂ ಅಭಿವೃದ್ಧಿ ಯೋಜನೆಗಳ ಜಾರಿಗೆ ಭೂಮಿ ಮೀಸಲಿಟ್ಟು ಯೋಜನೆ ಜಾರಿ ಮಾಡುವಂತೆ ಸರಕಾರವನ್ನು ಆಗ್ರಹಿಸಬೇಕಿದೆ ಎಂದು ಕರೆ ನೀಡಿದರು.

ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಇಡೀ ರಾಜ್ಯಕ್ಕೆ ಮಾರಕವಾಗಿದ್ದು, ಡಿ.31ರೊಳಗೆ ವರದಿ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್ ಸರಕಾರಕ್ಕೆ ಆದೇಶ ನೀಡಿದೆ. ಸರಕಾರ ವರದಿಯಿಂದಾಗುವ ದುಷ್ಪರಿಣಾಮಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಕೂಡಲೇ ಸುಪ್ರೀಂ ಕೋರ್ಟ್‍ನ ಹಸಿರು ಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕು. ಜನಪ್ರತಿನಿಧಿಗಳು ಈ ಸಂಬಂಧ ಸರಕಾರದ ಗಮನ ಸೆಳೆಯಬೇಕು. ಸ್ಯಾಟ್‍ಲೈಟ್ ಸರ್ವೆ ವರದಿಯನ್ನು ಕೈಬಿಟ್ಟು, ಯೋಜನೆ ವ್ಯಾಪ್ತಿಯ ಪ್ರದೇಶಗಳಲ್ಲಿ ಅಧಿಕಾರಿಗಳ ತಂಡ ಖುದ್ದು ಭೇಟಿ ನೀಡಿ ಮರುಸರ್ವೆ ನಡೆಸಬೇಕು ಎಂದು ಆಗ್ರಹಿಸಿದರು.

ವರದಿ ಜಾರಿ ವಿರೋಧಿಸಿ ಜಿಲ್ಲೆಯಲ್ಲಿ 16 ಗ್ರಾಪಂ ಚುನಾವಣೆಯನ್ನು ಜನರು ಬಹಿಷ್ಕರಿಸಿದ್ದು, ಹಾಸನ ಜಿಲ್ಲೆಯಲ್ಲಿ 4 ಗ್ರಾಪಂ ವ್ಯಾಪ್ತಿಯಲ್ಲಿ ಚುನಾವಣೆ ಬಹಿಷ್ಕರಿಸಲಾಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಬಿಎಸ್ಪಿ, ಸಿಪಿಐ ಸೇರಿದಂತೆ ಎಲ್ಲ ಸಂಘ ಸಂಸ್ಥೆಗಳೂ ಚುನಾವಣೆ ಬಹಿಷ್ಕಾರಕ್ಕೆ ಬೆಂಬಲ ನೀಡಿದ್ದು, ಇದರ ಪರಿಣಾಮ ಸರಕಾರ ನಮ್ಮ ಸಮಸ್ಯೆಗಳನ್ನು ಆಲಿಸಲು ಮುಂದಾಗಿದೆ ಎಂದರು.

ಶೃಂಗೇರಿ ಕ್ಷೇತ್ರ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕವಾಗಿದ್ದು, ನಾಲ್ಕು ಗೋಡೆಗಳ ಮಧ್ಯೆ ತಯಾರಿಸಿದ ವರದಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ನಕಲಿ ಪರಿಸರವಾದಿಗಳು ಇಂತಹ ವರದಿಯ ಸೃಷ್ಟಿಕರ್ತರಾಗಿದ್ದಾರೆ. ಮಲೆನಾಡಿನ ಜನರ ಬದುಕು, ಪರಿಸರ ಸಂರಕ್ಷಣೆಯೊಂದಿಗೇ ಮಾಡುತ್ತಿರುವ ಕೃಷಿ ಪದ್ಧತಿಯ ಅರಿವಿರದವರು ಮಲೆನಾಡಿನ ಜನರು ಹೇಗೆ ಬದುಕಬೇಕೆಂದು ಹೇಳುತ್ತಿದ್ದಾರೆ. ಜನರ ಬದುಕನ್ನು ನಾಶ ಮಾಡುವ ಯಾವುದೇ ಯೋಜನೆಗಳು ಜೀವವಿರೋಧಿ ಯೋಜನೆಗಳೇ ಆಗಿವೆ. ಇಂತಹ ವರದಿ ಜಾರಿಯಾಗುವುದರ ವಿರುದ್ಧ ತಾನು ನಿರಂತರವಾಗಿ ಸರಕಾರದ ಗಮನಸೆಳೆದಿದ್ದೇನೆ. ಪಶ್ಚಿಮಘಟ್ಟ ಉಳಿಯಬೇಕು, ಇದಕ್ಕಾಗಿ ಕಸ್ತೂರಿರಂಗನ್ ಅವರ ಅವೈಜ್ಞಾನಿಕ ವರದಿ ಜಾರಿ ಬೇಡ, ವೈಜ್ಞಾನಿಕ ವರದಿ ತಯಾರಿಸಲು ಸರಕಾರ ರಾಷ್ಟ್ರೀಯ ಹಸಿರು ಪೀಠಕ್ಕೆ ಕಾಲಾವಕಾಶ ಕೋರಿ ಪ್ರಮಾಣಪಪತ್ರ ಸಲ್ಲಿಸಬೇಕು, ಇಲ್ಲವೇ ವರದಿ ಜಾರಿಯನ್ನು ಮರುಪರಿಶೀಲನೆಗೆ ಒಳಪಡಿಸಲು ಮನವಿ ಸಲ್ಲಿಸಬೇಕು ಎಂದರು.

ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಜನಪ್ರತಿನಿಧಿಗಳು ಯೋಜನೆಗೆ ಸಂಬಂಧಿಸಿದಂತೆ ಖೋ ಖೋ ಆಟ ಆಡುವುದನ್ನು ನಿಲ್ಲಿಸಬೇಕು. ಕಬಡ್ಡಿ ಆಟವನ್ನು ಪ್ರದರ್ಶಿಸಬೇಕಿದೆ. ಮಲೆನಾಡು ಭಾಗದವರು ಅರಣ್ಯ ಸಚಿವರಾದರೆ ಸಮಸ್ಯೆಗಳ ಅರಿವು ಅವರಿಗಿರುತ್ತದೆ. ಇದರಿಂದ ಜನರಿಗೂ ಉಪಯೋಗವಾಗಲಿದೆ. ಹಿಂದಿನ ಸರಕಾರದಲ್ಲಿ ಯೋಜನೆ ಕುರಿತು ಮುಖ್ಯಮಂತ್ರಿ, ಅರಣ್ಯ ಸಚಿವರ ಗಮನ ಸೆಳೆಯಲಾಗಿತ್ತು. ಮುಂದಿನ ಸಮಸ್ಯೆಯನ್ನು ಆಲೋಚಿಸಿ, ಗ್ರಾಮ ಪಂಚಾಯತ್ ಮೂಲಕ ಯೋಜನೆ ವಿರೋಧಿಸಿ ನಿರ್ಣಯಕೈಗೊಳ್ಳಲಾಗಿತ್ತು. ಯಾರ ಅವಧಿಯಲ್ಲಿ ಏನಾಗಿತ್ತೆಂದು ಪ್ರಸ್ತಾಪಿಸಿವುದಕ್ಕಿಂತ ಸಮಸ್ಯೆಯಿಂದ ಹೊರಬರುವ ದಾರಿ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ವಿವಿಧ ಅರಣ್ಯ ಯೋಜನೆಗಳ ಮೂಲಕ ಅರಣ್ಯ ಇಲಾಖೆ ಮಲೆನಾಡಿನ ಜನರ ಬದುಕಿನ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ. ಇದಕ್ಕೆ ಕಾರಣ ನಕಲಿ ಪರಿಸರವಾದಿಗಳಾಗಿದ್ದಾರೆ. ಪರಿಸರದ ಬಗ್ಗೆ ಮಾತನಾಡುವ ಪರಿಸರವಾದಿಗಳು ಅರಣ್ಯ ಒತ್ತುವರಿ ಮಾಡಿಕೊಂಡು ತೋಟ ಮಾಡಿಕೊಂಡಿದ್ದಾರೆ. ಮೋಜಿಗಾಗಿ ವನ್ಯಜೀವಿಗಳ ಭೇಟೆಯಾಡುತ್ತಿದ್ದಾರೆ. ಇಂತಹ ನಕಲಿ ಪರಿಸರವಾದಿಗಳು ಅರಣ್ಯ ಇಲಾಖೆಯೊಂದಿಗೆ ಸೇರಿಕೊಂಡು ಹುಲಿ ಯೋಜನೆ, ಬಫರ್ ಝೋನ್, ಕಸ್ತೂರಿ ರಂಗನ್ ಯೋಜನೆಯಂತಹ ಬೋಗಸ್ ಯೋಜನೆಗಳನ್ನು ಜಾರಿ ಮಾಡುತ್ತಾ ಸರಕಾರದ ಕೋಟ್ಯಂತರ ರೂ. ಅನುದಾನವನ್ನು ಲೂಟಿ ಮಾಡುತ್ತಿದ್ದಾರೆ. ಗ್ರಾಪಂ ಚುನಾವಣೆ ಬಹಿಷ್ಕಾರದದ ಬಿಸಿ ಸರಕಾರಕ್ಕೆ ಮುಟ್ಟಿದ್ದು, ಮುಂದಿನ ಹಂತದಲ್ಲಿ ಜಿಲ್ಲೆಯ ಎಲ್ಲ ತಾಪಂ, ಜಿಪಂ ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಈ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. 

ಸಿಪಿಐ ಪಕ್ಷದ ರೇಣುಕಾರಾಧ್ಯ, ಪಿ.ವಿ.ಲೋಕೇಶ್, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ರೈತ ಸಂಘದ ದುಗ್ಗಪ್ಪಗೌಡ, ಕನ್ನಡಸೇನೆಯ ರಾಜೇಗೌಡ, ಕರವೇ ತೇಗೂರು ಜಗದೀಶ್, ಕೆಜಿಎಫ್ ಸಂಘದ ಸದಸ್ಯ ಸುರೇಂದ್ರ, ಬಾಲಕೃಷ್ಣ, ಮೋಹನ್‍ಕುಮಾರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಕೇರಳ ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಾಗಿರುವ ಮಾದರಿಯಲ್ಲೇ ವರದಿ ಜಾರಿಯಾಗಬೇಕು. ಇದಕ್ಕಾಗಿ ಮರು ಸಮೀಕ್ಷೆ, ಸರ್ವೇಯಾಗಬೇಕು, ಸ್ಯಾಟ್‍ಲೈಟ್ ಸಮೀಕ್ಷೆ ನಡೆಸದೇ ಪಶ್ಚಿಮಘಟ್ಟ ವ್ಯಾಪ್ತಿಯ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳಬೇಕು. ಸರಕಾರ ಡಿ.31ರೊಳಗೆ ವರದಿ ಜಾರಿಗಿರುವ ಸಮಸ್ಯೆಗಳ ಬಗ್ಗೆ ಹಸಿರು ಪೀಠಕ್ಕೆ ಅಫಿಡವಿಟ್ ಸಲ್ಲಿಸಿ ಕಾಲಾವಕಾಶಕ್ಕೆ ಮನವಿ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸಮಾವೇಶಕ್ಕೂ ಮುನ್ನ ನಗರದ ಹನುಮಂತಪ್ಪ ವೃತ್ತದಿಂದ ಎಂ.ಜಿ.ರಸ್ತೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದ ಹೋರಾಟಗಾರರು ನಂತರ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡರು. ಈ ವೇಳೆ ಸರಕಾರಗಳ ವಿರುದ್ಧ ಧಿಕ್ಕಾರದ ಘೋಷಣೆಗಳು ಕೇಳಿಬಂದವು. ಯೋಜನೆ ವ್ಯಾಪ್ತಿಗೊಳಪಡುವ ಕೊಪ್ಪ, ಮೂಡಿಗೆರೆ, ಚಿಕ್ಕಮಗಳೂರು, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯ ಸುಮಾರು 2 ಸಾವಿರ ಮಂದಿ ಸಮಾವೇಶದಲ್ಲಿ ಭಾಗವಹಿಸಿದರು.

ವಿವಿಧ ಪಕ್ಷ, ಸಂಘಟನೆಗಳ ಮುಖಂಡರಾದ ಶಾಂತಕುಮಾರ್,ಪ್ರವೀಣ್, ಗಾಯತ್ರಿ ಶಾಂತೇಗೌಡ, ಡಾ.ಡಿ.ಎಲ್.ವಿಜಯಕುಮಾರ್, ಮಂಜೇಗೌಡ, ರೇಖಾಹುಲಿಯಪ್ಪಗೌಡ, ಗುರುಶಾಂತಪ್ಪ, ಬಸವರಾಜ್, ಪುಟ್ಟಸ್ವಾಮಿಗೌಡ, ರಾಧಾಸುಂದರೇಶ್, ತೇಗೂರು ಜಗದೀಶ್, ಪಿ.ಸಿ.ರಾಜೇಗೌಡ, ಗಾಯತ್ರಿ ಶಾಂತೇಗೌಡ,ಅನಿಲ್‍ ಕುಮಾರ್, ರಘು, ತೊ.ಚ.ಅನಂತ್‍ ಸುಬ್ಬರಾವ್, ತಮ್ಮಯ್ಯ, ಪ್ರೇಮ್ ಕುಮಾರ್, ಹೊಲದಗದ್ದೆ ಗಿರೀಶ್, ರಂಜನ್‍ ಅಜಿತ್‍ ಕುಮಾರ್, ಎಸ್.ಪೇಟೆ ಸತೀಶ್ ಇದ್ದರು.

ಹಾಸನ, ಚಿಕ್ಕಮಗಳೂರು ಕೊಡಗು ಜಿಲ್ಲೆಗಳ ವಿವಿಧ ಕಾಫಿ ಬೆಳೆಗಾರರ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು. ಸಮಾವೇಶದ ಬಳಿಕ ವರದಿ ಜಾರಿ ತಡೆ ಸಂಬಂಧ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. 

ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಈ ವರದಿ ಸಂಬಂಧ ಚರ್ಚೆ ನಡೆಸಿದಾಗ ಯಾವ ಸಮಸ್ಯೆಯೂ ಆಗಲ್ಲ ಎಂದು ತಿಳಿಸಿದರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆ ಸಂದರ್ಭದಲ್ಲೂ ಅಧಿಕಾರಿಗಳು ಇದನ್ನೇ ಹೇಳಿದ್ದರು. ಆದರೆ ಘೋಷಣೆಯಾದ ಬಳಿಕ ಉದ್ಯಾನವನ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಇಲಾಖಾಧಿಕಾರಿಗಳು ಬಿಡುತ್ತಿಲ್ಲ. ಕಸ್ತೂರಿ ರಂಗನ್ ವರದಿ, ಭದ್ರಾ ಹುಲಿ ಯೋಜನೆಯ ಬಫರ್ ಝೋನ್, ಪರಿಸರ ಸೂಕ್ಷ್ಮ ವಲಯದಂತಹ ಯೋಜನೆಗಳು ಜಾರಿಯಾದಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಲಿದೆ.
- ಟಿ.ಡಿ.ರಾಜೇಗೌಡ, ಶಾಸಕ, ಶೃಂಗೇರಿ ಕ್ಷೇತ್ರ

ವರದಿ ಜಾರಿಯಿಂದ ಮಲೆನಾಡಿನ ಜನರ ಬದುಕು ಅತಂತ್ರವಾಗಲಿದೆ. ಸರಕಾರ ವರದಿ ಜಾರಿ ಆದೇಶವನ್ನು ಪುನರ್ ಪರಿಶೀಲಿಸಲು ಹಾಗೂ ಕೇರಳ ಮಾದರಿಯಲ್ಲಿ ವರದಿ ಜಾರಿ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಲು ಕಾಲಾವಕಾಶ ಕೋರಿ ರಾಷ್ಟ್ರೀಯ ಹಸಿರು ಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು.
- ಬಿ.ಬಿ.ನಿಂಗಯ್ಯ, ಮಾಜಿ ಸಚಿವ

ಕಸ್ತೂರಿ ರಂಗನ್ ವರದಿ ಓದಿಕೊಂಡಿದ್ದರೆ ಮಲೆನಾಡಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ, ವರದಿ ಜಾರಿ ಸಂಬಂಧವಾಗಿ ಮಲೆನಾಡಿಗರು ಬಾಯಲ್ಲಿ ಭಗವದ್ಗೀತೆ ಇಟ್ಟುಕೊಂಡಿರುವಂತೆಯೇ ಬಗಲಲ್ಲಿ ದೊಣ್ಣೆಯನ್ನು ಇಟ್ಟುಕೊಳ್ಳಬೇಕಿದೆ.
-  ಸುರೇಂದ್ರ, ಹಾಸನ ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಸದಸ್ಯ

ಕೇರಳ ಮಾದರಿ ನಮಗೆ ಮುಖ್ಯವಾಗಬೇಕು. ಜನವಸತಿ ಪ್ರದೇಶವನ್ನು ವರದಿಯಿಂದ ಕೈಬಿಡಬೇಕಿದೆ. ನ್ಯಾಯಾಲಯಗಳ ಕೆಲವು ತೀರ್ಪುಗಳು ಚರ್ಚೆ ಮತ್ತು ವಿಮರ್ಶೆಗೆ ಒಳಪಡಬೇಕಿದೆ. ನೆಲವಾಸಿಗಳ ನಿಜವಾದ ಸ್ಥಿತಿಗಳು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ.
- ಸುಧೀರ್ ಕುಮಾರ್ ಮುರೋಳಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News