ಕಾಂಗ್ರೆಸ್ ತಿರಸ್ಕರಿಸಿದಂತೆ ಕಸ್ತೂರಿ ರಂಗನ್ ವರದಿಯನ್ನು ಬಿಜೆಪಿ ಏಕೆ ತಿರಸ್ಕರಿಸುತ್ತಿಲ್ಲ ?: ಬಿ.ಎಲ್.ಶಂಕರ್

Update: 2020-12-17 18:26 GMT

ಚಿಕ್ಕಮಗಳೂರು, ಡಿ.17: ಪಶ್ಚಿಮಘಟ್ಟ ಸಂರಕ್ಷಣೆ ಉದ್ದೇಶದಿಂದ ಮಾಧವ್ ಗಾಡ್ಗಿಳ್ ನೀಡಿರುವ ವರದಿಯನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹಿಂದಿನ ಕಾಂಗ್ರೆಸ್ ಸರಕಾರ ಸ್ಪಷ್ಟವಾಗಿ ತಿರಸ್ಕರಿಸಿದೆ. ವರದಿಗೆ ವಿರೋಧಗಳು ವ್ಯಕ್ತವಾದಾಗ ಕಸ್ತೂರಿ ರಂಗನ್ ನೇತೃತ್ವದ ಸಮಿತಿ ಮತ್ತೊಂದು ವರದಿ ನೀಡಿದ್ದು, ಈ ವರದಿ ಜಾರಿಗೆ ಪ್ರಧಾನಿ ನರೇಂದ್ರ ಮೋದಿ ಸರಕಾರ ಮೂರು ಬಾರಿ ನೋಟಿಫಿಕೇಶನ್ ಹೊರಡಿಸಿದೆ. ಮಾಧವ್ ಗಾಡ್ಗಿಳ್ ವರದಿಯನ್ನು ಕಾಂಗ್ರೆಸ್ ಸರಕಾರ ತಿರಸ್ಕರಿಸಿದಂತೆ ಕಸ್ತೂರಿ ರಂಗನ್ ವರದಿಯನ್ನು ಬಿಜೆಪಿ ಸರಕಾರ ಏಕೆ ತಿರಸ್ಕರಿಸಿಲ್ಲ ಎಂದು ವಿಧಾನ ಪರಿಷತ್ ಮಾಜೆ ಸಭಾಪತಿ ಹಾಗೂ ಕಾಂಗ್ರೆಸ್ ಮುಖಂಡ ಬಿ.ಎಲ್.ಶಂಕರ್ ಪ್ರಶ್ನಿಸಿದ್ದಾರೆ. 

ಗುರುವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ರಾಜ್ಯದ 10 ಜಿಲ್ಲೆಗಳ ಮಲೆನಾಡು ಭಾಗದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ವರದಿಯ ಅನುಷ್ಠಾನ ಸಾಧ್ಯವಿಲ್ಲ ಎಂದು ತಿರಸ್ಕರಿಸಲು ಅಥವಾ ಮರು ಸಮೀಕ್ಷೆಗೆ ಸೂಚಿಸಲು ಬಿಜೆಪಿ ಸರಕಾರಕ್ಕೆ ಎಲ್ಲ ಅವಕಾಶಗಳಿತ್ತು. ಆದರೆ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರಕಾರ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಜನರ ಬದುಕು ರಕ್ಷಣೆಯ ಉದ್ದೇಶದಿಂದ ವರದಿಯನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿ ವರದಿ ಅನುಷ್ಠಾನವನ್ನು ತಿರಸ್ಕರಿಸಿದೆ. ಸದ್ಯ ನ್ಯಾಯಾಲಯ ಕಸ್ತೂರಿರಂಗನ್ ವರದಿ ಜಾರಿಗೆ ಆದೇಶಿಸಿದ್ದು, ಸದ್ಯ ಅಧಿಕಾರದಲ್ಲಿರುವವರು ಜಾರಿ ಅಸಾಧ್ಯ ಎಂದು ಆದೇಶ ಮಾಡಬೇಕು, ಇಲ್ಲವೇ ಜನಾಭಿಪ್ರಾಯ ಸಂಗ್ರಹಕ್ಕಾದರೂ ಆದೇಶಿಸಬೇಕು. ಸಿಎಂ, ಪಿಎಂ ಆಗಿದ್ದವರಿಗೆ ಆದೇಶ ಮಾಡುವ ಅಧಿಕಾರವಿದೆ. ವಿರೋಧ ಪಕ್ಷದಲ್ಲಿರುವವರಿಗೆ ಕೇವಲ ಮಾತನಾಡುವ ಅಧಿಕಾರವಿದೆ. ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ವಿರೋಧ ಪಕ್ಷಗಳು ಮಾತನಾಡುತ್ತಿವೆ. ಆಡಳಿತ ಪಕ್ಷ ಮೌನಕ್ಕೆ ಶರಣಾಗಿದೆ ಎಂದು ಟೀಕಿಸಿದ ಬಿ.ಎಲ್.ಶಂಕರ್, ಪರಿಸರ ಸಂರಕ್ಷಣೆಯೊಂದಿಗೆ ಜನರ ಬದುಕು ರಕ್ಷಣೆಗೆ ಬಿಜೆಪಿ ಸರಕಾರಗಳು ಮುಂದಾಗಬೇಕೆಂದು ಸಲಹೆ ನೀಡಿದರು.

ಕಸ್ತೂರಿ ರಂಗನ್ ವರದಿಯಿಂದಾಗಿ ಮಲೆನಾಡಿನ ಜನರ ಬದುಕು ಅತಂತ್ರವಾಗಲಿದೆ. ಈ ಕಾರಣಕ್ಕೆ ವರದಿ ಜಾರಿಯಾಗುವ ಪ್ರದೇಶದಲ್ಲಿ ಜನರು ಚುನಾವಣೆಗಳನ್ನು ಬಹಿಷ್ಕರಿಸಿದ್ದಾರೆ. ವರದಿ ವಿರೋಧಿಸಿ ಹೋರಾಟಗಾರರು ಬೀದಿಗಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಾಸಕರು, ಸಂಸದರು ಹಾಗೂ ಸರಕಾರ ಜನರೊಂದಿಗೆ ಸಂವಾದಕ್ಕೆ ಮುಂದಾಗಬೇಕಿತ್ತು. ಆದರೆ ಬಿಜೆಪಿ ಸರಕಾರ ಶಾಸಕರು, ಸಂಸದರು, ಸಚಿವರು, ಮಂತ್ರಿಗಳು ಸಂವಾದಕ್ಕೆ ಮುಂದಾಗದೇ ತಾವು ಹೇಳಿದ್ದೇ ತೀರ್ಪು ಎಂಬಂತೆ ವರ್ತಿಸುತ್ತಿರುವುದು ಸಂವಿಧಾನ ವಿರೋಧಿ ನಿಲುವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಪಕ್ಷಕ್ಕೆ ಸತತ ಸೋಲಾಗುತ್ತಿರುವುದಕ್ಕೆ ಪಕ್ಷದಲ್ಲಿನ ನಾಯಕತ್ವ, ಸಂಘಟನೆಯ ಕೊರತೆ ಕಾರಣವಲ್ಲ. ದೇಶಾದ್ಯಂತ ಕಾಂಗ್ರೆಸ್ ಪಕ್ಷ ತನ್ನದೇಯಾದ ಪ್ರಾಬಲ್ಯ ಹೊಂದಿದೆ. ಆದರೆ ಬಿಜೆಪಿಯ ಉಚ್ಛ್ರಾಯ ಸ್ಥಿತಿಗೆ ರಾಜಕೀಯ ಧ್ರುವೀಕರಣ ಕಾರಣವಾಗಿದೆ. ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಡುತ್ತಿರುವುದರಿಂದ ಬಿಜೆಪಿ ಎಲ್ಲೆಡೆ ಪ್ರಾಬಲ್ಯಗಳಿಸುತ್ತಿದೆ. ಬಿಜೆಪಿ ಪಕ್ಷದವರು ಭಾವನಾತ್ಮಕ ವಿಚಾರಗಳ ಮೇಲೆ ರಾಜಕಾರಣ ಮಾಡುತ್ತಿದ್ದರೆ, ಕಾಂಗ್ರೆಸ್ ಪಕ್ಷ ಸದಾ ಜನರ ಬದುಕಿನ ವಿಷಯಗಳ ಮೇಲೆ ಬದುಕು ಕಟ್ಟುವ ರಾಜಕಾರಣ ಮಾಡುತ್ತಿದೆ. ಬದುಕಿನ ರಾಜಕಾರಣಕ್ಕೆ ಸದ್ಯ ಸೋಲಾಗುತ್ತಿದ್ದು, ಭಾವನಾತ್ಮಕ ರಾಜಕಾರಣಕ್ಕೆ ಗೆಲುವಾಗುತ್ತಿದೆ. ಬಿಜೆಪಿಯ ಈ ಗೆಲುವು ಶಾಶ್ವತವಲ್ಲ, ಜನರ ಬದುಕಿನ ರಾಜಕಾರಣಕ್ಕೆ ನಿಧಾನವಾಗಿಯಾದರೂ ಗೆಲುವು ಸಿಗುತ್ತದೆ ಎಂದ ಅವರು, ಜನರ ಸಮಸ್ಯೆಗಳಿಗೆ ಸ್ಪಂದಿಸದಿರುವುದು, ಜನಪರ, ಕಾರ್ಮಿಕ ಪರ ಕಾಯ್ದೆಗಳ ತಿದ್ದುಪಡಿ, ಕೃಷಿ ಕ್ಷೇತ್ರದ ಖಾಸಗೀಕರಣ, ಸಾರ್ವಜನಿಕರ ಕ್ಷೇತ್ರದ ಉದ್ದಿಮೆಗಳ ಖಾಸಗೀಕರಣದಿಂದಾಗಿ ಜನರು ಭವಿಷ್ಯದಲ್ಲಿ ಭಾರೀ ತೊಂದರೆಗೆ ಸಿಲುಕಲಿದ್ದು, ಇದರ ಪರಿಣಾಮ ಬಿಜೆಪಿಗೆ ಮುಂದೆ ತಿಳಿಯಲಿದೆ ಎಂದರು.

ಪ್ರಸಕ್ತ ಬಿಜೆಪಿ ಪಕ್ಷದ ವರಿಷ್ಠರು ಸರ್ವಾಧಿಕಾರದ ಮನಸ್ಥಿತಿಯಲ್ಲಿದ್ದಾರೆ. ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಅಟಲ್ ಬಿಹಾರಿ ವಾಜಪೇಯಿ, ಲಾಲ್‍ಕೃಷ್ಣ ಅಡ್ವಾಣಿಯಂತಹ ನಾಯಕರನ್ನು ಮೂಲೆಗುಂಪು ಮಾಡಲಾಗಿದೆ. ಪಕ್ಷಕ್ಕಾಗಿ ಏನನ್ನೂ ಮಾಡದವರು ಮಾಡಿದ್ದೇ ಕಾನೂನಂತಾಗಿದೆ. ಇಂತಹ ಪರಿಸ್ಥಿತಿ ಹಿಂದೆ ಇದ್ದ ಬಿಜೆಪಿ ವರಿಷ್ಠರ ಕಾಲದಲ್ಲಿರಲಿಲ್ಲ. ಮಾಜಿ ಪ್ರಧಾನಿ ಅಟಲ್ ಕಾಲದಲ್ಲಿ ವಿರೋಧ ಪಕ್ಷಗಳ ಮುಖಂಡರನ್ನೂ ಗೌರವಿಸುತ್ತಿದ್ದರು. ದೇಶಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆಗಳನ್ನೂ ಸ್ಮರಿಸಿ ಬೆನ್ನು ತಟ್ಟುತ್ತಿದ್ದರು ಎಂದು ಶಂಕರ್ ಇದೇ ವೇಳೆ ಬಿಜೆಪಿ ಪಕ್ಷದ ವರಿಷ್ಠ ಧ್ವೇಷ ರಾಜಕಾರಣವನ್ನು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ಸಗೀರ್ ಅಹ್ಮದ್, ಕೆ.ಜೆ.ಜಾರ್ಜ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಮಾಜಿ ಅಧ್ಯಕ್ಷ ವಿಜಯ್‍ಕುಮಾರ್, ಮುಖಂಡರಾದ ಹಿರೇಮಗಳೂರು ಪುಟ್ಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಸಂಸತ್ ಭವನದ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಆದರೆ ಅವರು ಸೌಜನ್ಯಕ್ಕೂ ವಿರೋಧ ಪಕ್ಷಗಳ ಮುಖಂಡರಿಗೆ ಆಹ್ವಾನ ನೀಡಿಲ್ಲ. ತಮ್ಮದೇ ಪಕ್ಷಕ್ಕೆ ಸೇರಿರುವ ರಾಷ್ಟ್ರಪತಿ, ಉಪರಾಷ್ಟ್ರಪತಿ ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ವಿರೋಧ ಪಕ್ಷಗಳ ವರಿಷ್ಠರನ್ನು ಆಹ್ವಾನಿಸದಿದ್ದರೂ ಪರವಾಗಿಲ್ಲ ಆದರೆ ತಮ್ಮದೇ ಪಕ್ಷದ ರಾಷ್ಟ್ರಪತಿ ಅವರನ್ನೂ ಆಹ್ವಾನ ಮಾಡದಿರುವುದು ಬಿಜೆಪಿ ಪಕ್ಷದವರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ರಾಷ್ಟ್ರಪತಿಯವರ ಸಾಮಾಜಿಕ ಹಿನ್ನೆಲೆಯ ದೃಷ್ಟಿಯಿಂದ ಅಥವಾ ಅವರು ಬಂದರೆ ತನಗೆ ಪ್ರಚಾರ ಸಿಗಲ್ಲ ಎಂಬ ಕಾರಣಕ್ಕೆ ಪ್ರಧಾನಿ ಮೋದಿ ರಾಷ್ಟ್ರಪತಿ ಕೋವಿಂದ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇರಬಹುದು ಎಂದು ಬಿ.ಎಲ್.ಶಂಕರ್ ವ್ಯಂಗ್ಯವಾಡಿದರು.

ಕೃಷಿ ಮಸೂದೆಗಳ ತಿದ್ದುಪಡಿ ವಿರೋಧಿಸಿ ದಿಲ್ಲಿ ಸೇರಿದಂತೆ ದೇಶಾದ್ಯಂತ ಚಳವಳಿಗೆ ನಡೆಯುತ್ತಿದ್ದರೂ ಕೇಂದ್ರ ಸರಕಾರ ಮಾತುಕತೆ ಮುಂದಾಗಿಲ್ಲ. ಆದರೆ ಸುಪ್ರೀಂ ಕೋರ್ಟ್ ತಾನೇ ಮಾತುಕತೆಗೆ ಸಮಿತಿ ರಚಿಸುವುದಾಗಿ ಆದೇಶ ನೀಡುವ ಮೂಲಕ ಕಾರ್ಯಾಂಗ ಮಾಡುವ ಕೆಲಸವನ್ನು ಸುಪ್ರೀಂ ಕೋರ್ಟ್ ಮಾಡುತ್ತಿರುವುದು ಕೇಂದ್ರದ ಬಿಜೆಪಿ ಸರಕಾರದ ಸಂವಿಧಾನ ವಿರೋಧಿ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಸುಪ್ರೀಂಕೋರ್ಟ್ ಆಡಳಿತಾತ್ಮಕ ನಿಲುವು ತಳೆಯುವಂತಹ ಪರಿಸ್ಥಿತಿಗೆ ಬಂದಿರುವುದು ಕೇಂದ್ರ ಸರಕಾರದ ಆಡಳಿತ ವೈಫಲ್ಯವಾಗಿದೆ.
-ಬಿ.ಎಲ್.ಶಂಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News