ಬ್ರಿಟಿಷ್ ಕಾಲಕ್ಕೆ ಮರಳುತ್ತಿರುವ ಭಾರತ

Update: 2020-12-19 06:21 GMT

ರೈತರ ಪ್ರತಿಭಟನೆ ರಾಷ್ಟ್ರೀಯ ಸಮಸ್ಯೆಯಾಗುವ ಸಾಧ್ಯತೆಯಿದೆ ಎಂದು ಸುಪ್ರೀಂಕೋರ್ಟ್ ಸರಕಾರಕ್ಕೆ ಎಚ್ಚರಿಸಿದೆ. ಹೀಗೆ ಸುಪ್ರೀಂಕೋರ್ಟ್ ಎಚ್ಚರಿಸಿದ ಬಳಿಕವೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ರೈತರ ಪ್ರತಿಭಟನೆಗಳನ್ನು’ ಗಂಭೀರವಾಗಿ ಸ್ವೀಕರಿಸುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಶುಕ್ರವಾರ ಅವರು ನೀಡಿರುವ ಹೇಳಿಕೆಗಳಲ್ಲಿ ‘ರೈತ ವಿರೋಧಿ ಕಾನೂನು’ಗಳನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ ಮಾತ್ರವಲ್ಲ, ಈ ಕಾನೂನುಗಳು ರೈತರಿಗೆ ಲಾಭದಾಯಕ ಎಂದೂ ಹೇಳುತ್ತಿದ್ದಾರೆ ಅಥವಾ ಕಾರ್ಪೊರೇಟ್ ಹಿತಾಸಕ್ತಿಗಳು ಹೇಳಿಕೊಟ್ಟ ಮಾತುಗಳನ್ನು ಜನರ ಮುಂದೆ ಒಪ್ಪಿಸುತ್ತಿದ್ದಾರೆ. ಈ ಹಿಂದೆ, ನೋಟು ನಿಷೇಧದಿಂದ ಕಪ್ಪು ಹಣ ಬೆಳಕಿಗೆ ಬರುತ್ತದೆ ಎಂದು, ಜಿಎಸ್‌ಟಿಯಿಂದ ವ್ಯಾಪಾರ ಇನ್ನಷ್ಟು ಸರಳವಾಗುತ್ತದೆ ಎಂದೂ ಅಂಬಾನಿ-ಅದಾನಿಗಳ ಮಾತುಗಳನ್ನು ಇದೇ ಪ್ರಧಾನಿ ನಂಬಿ ಮೋಸ ಹೋಗಿದ್ದರು. ನೋಟು ನಿಷೇಧದ ವೇಳೆ ‘ನನಗೆ ಐವತ್ತು ದಿನ ಕೊಡಿ...ಎಲ್ಲ ಸರಿಯಾಗದಿದ್ದರೆ ಕೊಂದು ಬಿಡಿ’ ಎಂದು ದೇಶವಾಸಿಗಳಿಗೆ ಪ್ರಧಾನಿ ಕರೆ ನೀಡಿದ್ದರು. ಆದರೆ ವರ್ಷಗಳುರುಳಿದರೂ ಈ ದೇಶದ ಆರ್ಥಿಕತೆ ಹಿಂದಕ್ಕೆ ಚಲಿಸುತ್ತಿದೆಯೇ ಹೊರತು, ಚೇತರಿಸಿಕೊಳ್ಳುತ್ತಿಲ್ಲ.

ಈಗಾಗಲೇ ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಹಂತಹಂತವಾಗಿ ಕಾರ್ಪೊರೇಟ್‌ಗಳಿಗೆ ಮಾರಿರುವ ಪ್ರಧಾನಿ, ಅಂತಿಮವಾಗಿ ಕೃಷಿಯ ಬುಡಕ್ಕೆ ಕೈ ಹಾಕಿದ್ದಾರೆ. ರೈತರ ಪಾಲಿಗಂತೂ ಇದು ‘ಮಾಡು ಇಲ್ಲವೇ ಮಡಿ’ ಹೋರಾಟವಾಗಿದೆ. ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ಸಹಸ್ರಾರು ರೈತರು ದಿಲ್ಲಿಯಲ್ಲಿ ನೆರೆದಿದ್ದಾರೆ. ಒಂದೆಡೆ ಪಂಜಾಬ್‌ನಲ್ಲಿ ಕೃಷಿ ಸ್ತಬ್ಧವಾಗಿದೆ. ಮಗದೊಂದೆಡೆ ರೈತ ಪ್ರತಿಭಟನೆಯಿಂದ ಏರ್ಪಟ್ಟಿರುವ ದಿಗ್ಬಂಧನದಿಂದ ದೇಶಕ್ಕೆ ಪ್ರತಿ ದಿನ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಇಷ್ಟಾದರೂ, ಪ್ರಕರಣದ ಗಂಭೀರತೆಯನ್ನು ತಿಳಿದುಕೊಳ್ಳದ ಮೋದಿ ತಮ್ಮ ಎಂದಿನ ಗಿಣಿ ಪಾಠಗಳನ್ನು ರೈತರ ಮುಂದಿಡುತ್ತಿದ್ದಾರೆ. ರೈತ ಪ್ರತಿಭಟನೆಯ ಕುರಿತಂತೆ ಸುಪ್ರೀಂಕೋರ್ಟ್‌ನ ಆತಂಕಕ್ಕೂ ಕಾರಣವಿದೆ. ಈ ಪ್ರತಿಭಟನೆಗಳಿಗೆ ಮಣಿದು ಸರಕಾರ ರೈತಪರವಾದ ನಿಲುವುಗಳನ್ನು ತೆಗೆದುಕೊಳ್ಳದೇ ಇದ್ದರೆ ರೈತರು ಬಂಡೇಳುವ ಸಾಧ್ಯತೆಗಳಿವೆ. ಹಾಗೇನಾದರೂ ನಡೆದಲ್ಲಿ ಅದು ಹಿಂಸಾರೂಪವನ್ನು ತಾಳಬಹುದು. ಈಗಾಗಲೇ ದೇಶ ಆರ್ಥಿಕವಾಗಿ ಜರ್ಝರಿತವಾಗಿ ಕೂತಿದೆ. ಇಂತಹ ಸಂದರ್ಭದಲ್ಲಿ ದಿಲ್ಲಿಯ ಪ್ರತಿಭಟನೆ ಹಿಂಸೆಗೆ ತಿರುಗಿದರೆ ಅದು ಬೀರುವ ದುಷ್ಪರಿಣಾಮ ಅತ್ಯಂತ ಭೀಕರವಾದುದು. ಕೊರೆಯುವ ಚಳಿಯಲ್ಲಿ ರೈತರು ಸರಕಾರದ ವಿರುದ್ಧ ಹಗಲು ರಾತ್ರಿ ಧರಣಿ ನಡೆಸುತ್ತಿದ್ದಾರೆ.

ಚಳಿಗೆ ದಿನಕ್ಕೊಬ್ಬ ರೈತ ಪ್ರಾಣ ಬಿಡುತ್ತಿದ್ದಾನೆ. ಹಲವರು ಕಾಯಿಲೆ ಬಿದ್ದರೂ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿಲ್ಲ. ರೈತರ ಪರವಾಗಿ ಸಿಖ್ ಸಂತನೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದಿದ್ದಾನೆ. ದೇಶಾದ್ಯಂತ ಕ್ರೀಡಾಪಟುಗಳು, ಯೋಧರು ತಮ್ಮ ಪ್ರಶಸ್ತಿಗಳನ್ನು ಸರಕಾರಕ್ಕೆ ಮರಳಿಸುತ್ತಿದ್ದಾರೆ. ಆರ್ಥಿಕ ಚಿಂತಕರು, ಸರಕಾರದ ಕಾನೂನುಗಳಿಂದ ರೈತರ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಸ್ಪಷ್ಟ ಧ್ವನಿಯಲ್ಲಿ ನುಡಿದಿದ್ದಾರೆ. ಇಷ್ಟಾದರೂ ಸರಕಾರ ತನ್ನ ನಿಲುವಿನಿಂದ ಹಿಂದೆ ಸರಿಯುತ್ತಿಲ್ಲ. ಈ ದೇಶದ ರೈತರು ಒಕ್ಕೊರಲಿನಲ್ಲಿ ‘ಕಾನೂನು ರೈತ ವಿರೋಧಿಯಾಗಿದೆ’ ಎಂದು ಹೇಳುತ್ತಿರುವಾಗ, ಈ ಕಾನೂನಿಂದ ಹಿಂದೆ ಸರಿಯಲು ಸರಕಾರಕ್ಕೆ ಇರುವ ಕಷ್ಟವಾದರೂ ಏನು? ರೈತರಿಗೆ ಬೇಡವಾದ ಕಾನೂನನ್ನು ರೈತರ ಮೇಲೆ ಹೇರುವುದಕ್ಕೆ ಪ್ರಧಾನಿಯನ್ನು ಒತ್ತಾಯಿಸುತ್ತಿರುವವರು ಯಾರು? ಈ ಕಾನೂನಿಂದ ತಮಗೆ ನಿಜಕ್ಕೂ ಲಾಭವಾಗುತ್ತದೆ ಎಂದು ರೈತರಿಗೆ ಅನ್ನಿಸಿದ್ದರೆ, ಹಗಲು ರಾತ್ರಿ ದಿಲ್ಲಿಯ ರಸ್ತೆಯಲ್ಲಿ ಧರಣಿ ನಡೆಸುವ ಅಗತ್ಯವಿದೆಯೇ? ಹಸಿರು ಕ್ರಾಂತಿಯಲ್ಲಿ ದೊಡ್ಡ ಪಾತ್ರವಹಿಸಿದ್ದ ಪಂಜಾಬಿನ ರೈತರಿಗೆ ಪ್ರಧಾನಿ ಮೋದಿ ಕೃಷಿಯನ್ನು ಕಲಿಸುವ ಅಗತ್ಯವಿದೆಯೇ?

ರೈತರ ಪ್ರತಿಭಟನೆ ಶೀಘ್ರದಲ್ಲೇ ರಾಷ್ಟ್ರೀಯ ಸಮಸ್ಯೆಯಾಗಬಹುದು ಎನ್ನುವ ಕೋರ್ಟ್‌ನ ಆತಂಕವನ್ನು ನಾವು ಎರಡು ರೀತಿಯಲ್ಲಿ ಅರ್ಥೈಸಬಹುದು. ಒಂದು, ಈ ಪ್ರತಿಭಟನೆ ದೇಶದ ಕಾನೂನು ಸುವ್ಯವಸ್ಥೆಯನ್ನೇ ಅಲುಗಾಡಿಸಬಹುದು. ಈಗಾಗಲೇ ರೈತರ ಪರವಾಗಿ ಹಲವು ಸೈನಿಕರೂ ಧ್ವನಿಯೆತ್ತಿದ್ದಾರೆ. ರಾಜೀನಾಮೆ ನೀಡುವ ಬೆದರಿಕೆಗಳನ್ನು ಒಡ್ಡುತ್ತಿದ್ದಾರೆ. ದೇಶದ ಸೇನೆಯ ತಳಸ್ತರದಲ್ಲಿ ರೈತರ ಮಕ್ಕಳೇ ಅಧಿಕ. ಆದುದರಿಂದ ಇಂತಹ ಬೆದರಿಕೆಗಳನ್ನು ಸರಕಾರ ಗಂಭೀರವಾಗಿ ಸ್ವೀಕರಿಸಬೇಕು. ರೈತರ ಬಂಡಾಯ ಅಂತಿಮವಾಗಿ ಸೇನೆಯೊಳಗೂ ಕಲರವ ಎಬ್ಬಿಸಿದರೆ ಆಂತರಿಕ ಭದ್ರತೆ ಅಪಾಯದಲ್ಲಿ ಸಿಲುಕಿಕೊಳ್ಳುತ್ತದೆ. ಈಗಾಗಲೇ ಆರ್ಥಿಕತೆ ಕುಸಿದು ಕೂತಿರುವ ಸಂದರ್ಭದಲ್ಲಿ, ಕೃಷಿಕರೆಲ್ಲ ವ್ಯಯಸಾಯ ಬಿಟ್ಟು ದಿಲ್ಲಿಯಲ್ಲಿ ಕಾಲ ಕಳೆದರೆ ದೇಶದ ಜನರು ಮುಂದಿನ ದಿನಗಳಲ್ಲಿ ಮಣ್ಣನ್ನು ತಿನ್ನುತ್ತಾರೆಯೇ? ಇದೂ ಅರ್ಥವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ? ಈ ಕುರಿತಂತೆ ಸಣ್ಣ ಕಾಳಜಿಯಿದ್ದರೂ ಕೇಂದ್ರ ಸರಕಾರ, ರೈತರ ಬೇಡಿಕೆಗಳಿಗೆ ಕಿವಿಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ‘ರಾಷ್ಟ್ರೀಯ ಸಮಸ್ಯೆ’ ಎಂಬ ಪದವನ್ನು ಬಳಸಿದ್ದಾರೆ.

ಆದರೆ ಈ ಕಾನೂನಿಂದಾಗಿ ಮುಂದಿನ ದಿನಗಳಲ್ಲಿ ರೈತರು ತೊಂದರೆ ಅನುಭವಿಸಿ ಕೃಷಿಯಿಂದ ದೂರವಾಗುತ್ತಾ ಹೋದರೆ ಅದು ದೇಶದ ಮೇಲೆ ಬೀರುವ ಪರಿಣಾಮವನ್ನೂ ಗಮನದಲ್ಲಿಟ್ಟುಕೊಂಡು ಆ ಪದವನ್ನು ಅರ್ಥೈಸಬೇಕು. ರೈತರು ನಾಶವಾಗಿ, ಬೃಹತ್ ಕಾರ್ಪೊರೇಟ್ ಸಂಸ್ಥೆಗಳ ಕೈಗೆ ಕೃಷಿ ಹಸ್ತಾಂತರವಾದರೆ ದೇಶವೂ ಪರೋಕ್ಷವಾಗಿ ಈ ಸಂಸ್ಥೆಗಳ ಅಡಿಯಾಳಾಗಬೇಕಾಗುತ್ತದೆ. ರೈತರು ಈ ಸಂಸ್ಥೆಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯಬೇಕಾಗುತ್ತದೆ. ರೈತರ ಪ್ರತಿಭಟನೆಯನ್ನು ನ್ಯಾಯಾಲಯ ಗಂಭೀರವಾಗಿ ಸ್ವೀಕರಿಸಿದೆಯಾದರೂ, ಪ್ರತಿಭಟಿಸುವ ಹಕ್ಕುಗಳನ್ನು ಮಾನ್ಯ ಮಾಡಿದೆಯಾದರೂ, ರಸ್ತೆ ಸಂಚಾರಕ್ಕೆ ಅಡ್ಡಿ ಉಂಟು ಮಾಡಬಾರದು ಎಂದು ಹೇಳಿದೆ. ಕೇಜ್ರಿವಾಲ್ ಹೇಳುವಂತೆ ಸರಕಾರ ಬ್ರಿಟಿಷರಿಗಿಂತಲೂ ಕೆಟ್ಟ ಆಡಳಿತವನ್ನು, ಜನವಿರೋಧಿ ಆಡಳಿತವನ್ನು ನೀಡಲು ಹೊರಟಿದೆ. ಅದನ್ನು ಪ್ರಶ್ನಿಸಿದವರ ವಿರುದ್ಧ ಬ್ರಿಟಿಷರು ವರ್ತಿಸಿದಂತೆಯೇ ಕ್ರೂರವಾಗಿ ನಡೆದುಕೊಳ್ಳುತ್ತಿದೆ.

ಶಾಹೀನ್‌ಬಾಗ್ ಇದಕ್ಕೆ ಉತ್ತಮ ಉದಾಹರಣೆ. ಇಂತಹ ನಿಷ್ಕರುಣಿ ಸರಕಾರದ ಮುಂದೆ ಬರೇ ಉಪವಾಸ ಸತ್ಯಾಗ್ರಹದ ಮೂಲಕ ಪ್ರತಿಭಟನೆ ಮಾಡಲು ಸಾಧ್ಯವಿದೆಯೇ? ಪ್ರತಿಭಟನಾಕಾರರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಆಲಿಸುವ ಬದಲು ಅವರನ್ನು ಉಗ್ರರು, ಖಾಲಿಸ್ತಾನಿಗಳು ಎಂದೆಲ್ಲ ಕರೆದ ಸರಕಾರದ ವಿರುದ್ಧ ರಸ್ತೆ ತಡೆ ಮಾಡದೇ ಬೇರೆ ವಿಧಿಯಿದೆಯೇ? ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ಮಾಡುವವರನ್ನು, ಮಾನವ ಹಕ್ಕುಗಳಿಗಾಗಿ ಹೋರಾಡುವವರನ್ನು ಉಗ್ರರೆಂದು ಕರೆದು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವ ಸರಕಾರ ಪರೋಕ್ಷವಾಗಿ ಈ ದೇಶವನ್ನು ಉಗ್ರರ ದೇಶವನ್ನಾಗಿ ಬದಲಿಸಲು ಹೊರಟಿದೆ. ಕೃಷಿ ಕಾರ್ಯಗಳ ಬಗ್ಗೆ, ಆರ್ಥಿಕತೆಯ ಬಗ್ಗೆ ಸಂಪೂರ್ಣ ಅನಕ್ಷರಸ್ಥರಾಗಿರುವ ಬಿಜೆಪಿಯೊಳಗಿರುವ ನಾಯಕರು ರಾಮಮಂದಿರ, ಲವ್ ಜಿಹಾದ್ ಕಾನೂನು, ಗೋಹತ್ಯೆ ಕಾನೂನು ಮೊದಲಾದ ಅನಗತ್ಯಗಳನ್ನೇ ಜನರ ಅಗತ್ಯವೆಂದು ಬಿಂಬಿಸಿ ‘ಆಡಳಿತ’ ನಡೆಸುತ್ತಿರುವ ಸಂದರ್ಭದಲ್ಲಿ ಈ ದೇಶವನ್ನು ಸರಿಯಾದ ದಾರಿಯ ಕಡೆಗೆ ಮುನ್ನಡೆಸಬೇಕಾದರೆ ರೈತರು ರಸ್ತೆ ತಡೆ ನಡೆಸುವುದು ಅನಿವಾರ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News