​ಶೌರ್ಯ ಪ್ರಶಸ್ತಿ ಹಿಂದಿರುಗಿಸಿದ ಮಹಿಳಾ ಪೊಲೀಸ್ ಅಧಿಕಾರಿ ಸಿಎಂಗೆ ನೀಡಿದ ಸಂದೇಶವೇನು ಗೊತ್ತೇ ?

Update: 2020-12-19 03:44 GMT

ಗುವಾಹತಿ : ಮಣಿಪುರದ ಪೊಲೀಸ್ ಅಧಿಕಾರಿ ತೊನುಜಮ್ ಬೃಂದಾ 2018ರಲ್ಲಿ ತಮಗೆ ದೊರಕಿದ್ದ ಮುಖ್ಯಮಂತ್ರಿಗಳ ಪೊಲೀಸ್ ಶೌರ್ಯ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ.

ರಾಜ್ಯದಲ್ಲಿ ಕಳ್ಳಸಾಗಾಣಿಕೆ ಚಟುವಟಿಕೆ ನಿಯಂತ್ರಣಕ್ಕೆ ನೀಡಿದ ಗಣನೀಯ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಈ ಗೌರವ ನೀಡಲಾಗಿತ್ತು. ಮುಖ್ಯಮಂತ್ರಿಗಳ ’ಡ್ರಗ್ಸ್ ವಿರುದ್ಧದ ಸಮರ’ದ ಭಾಗವಾಗಿ ಈ ಪ್ರಶಸ್ತಿ ನೀಡಲಾಗಿತ್ತು.

ಮಾದಕ ವಸ್ತು ಕಳ್ಳಸಾಗಾಣಿಕೆ ಆರೋಪ ಎದುರಿಸುತ್ತಿದ್ದ ಸ್ವಾಯತ್ತ ಜಿಲ್ಲಾ ಮಂಡಳಿ (ಎಡಿಸಿ) ಮಾಜಿ ಅಧ್ಯಕ್ಷ ಲೂಕೋಸಿ ಜೋವು ಮತ್ತು ಚಾಂಡೇಲ್ ಮತ್ತು ಇತರರನ್ನು ಆರೋಪಮುಕ್ತಗೊಳಿಸಿ ಮಣಿಪುರದ ವಿಶೇಷ ನ್ಯಾಯಾಲಯ (ಎನ್‌ಡಿ ಆ್ಯಂಡ್ ಪಿಎಸ್) ಆದೇಶ ನೀಡಿದ ಬೆನ್ನಲ್ಲೇ ಬೃಂದಾ ತಮ್ಮ ಪ್ರಶಸ್ತಿ ಹಿಂದಿರುಗಿಸಿದ್ದಾರೆ.

2018ರಲ್ಲಿ ಎಎಸ್ಪಿಯಾಗಿದ್ದ ಬೃಂದಾ ಅವರು ಲೂಕೋಸಿ ಜೋವು ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2019ರಲ್ಲಿ ಅವರಿಗೆ ಮುಖ್ಯಮಂತ್ರಿಗಳ ಶ್ಲಾಘನಾ ಪ್ರಮಾಣಪತ್ರ ನೀಡಲಾಗಿತ್ತು. "ವ್ಯವಸ್ಥೆಯ ವಿರುದ್ಧ ನಾನು ಮಾಡುತ್ತಿದ್ದ ಆರೋಪ ಇದೀಗ ಸಾಬೀತಾಗಿದೆ" ಎಂದು ನ್ಯಾಯಾಲಯದ ತೀರ್ಪಿನ ಬಳಿಕ ಬೃಂದಾ ಪ್ರತಿಕ್ರಿಯಿಸಿದ್ದರು. ಜೋವು ಬಿಡುಗಡೆಗಾಗಿ ಮುಖ್ಯಮಂತ್ರಿ ನೇರವಾಗಿ ಹಾಗೂ ಹಿರಿಯ ಅಧಿಕಾರಿಗಳ ಮೂಲಕ ಒತ್ತಡ ತರುತ್ತಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಬೃಂದಾ ಸುದ್ದಿಯಾಗಿದ್ದರು.

ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರಿಗೆ ಶುಕ್ರವಾರ ಪತ್ರ ಬರೆದ ಬೃಂದಾ, "ಈ ನೆಲದ ಅಪರಾಧ ನ್ಯಾಯ ವಿತರಣಾ ವ್ಯವಸ್ಥೆಯ ಆಶಯಗಳಿಗೆ ಅನುಗುಣವಾಗಿ ನಾನು ನನ್ನ ಕರ್ತವ್ಯ ನಿರ್ವಹಿಸಿಲ್ಲ ಎಂಬ ನೈತಿಕ ಭಾವನೆ ನನ್ನನ್ನು ಕಾಡುತ್ತಿದೆ. ಈ ಕಾರಣದಿಂದ ನೀವು ನೀಡಿದ ಪ್ರಶಸ್ತಿ ಗೌರವಕ್ಕೆ ಯೋಗ್ಯ ವ್ಯಕ್ತಿ ನಾನಲ್ಲ ಎಂದು ಭಾವಿಸಿದ್ದೇನೆ. ಈ ಕಾರಣದಿಂದ ರಾಜ್ಯ ಗೃಹ ಇಲಾಖೆಗೆ ಇದನ್ನು ಮರಳಿಸುತ್ತಿದ್ದೇನೆ. ಹೆಚ್ಚು ಅರ್ಹ ಮತ್ತು ನಿಷ್ಠ ಪೊಲೀಸ್ ಅಧಿಕಾರಿಗಳಿಗೆ ಇದನ್ನು ನೀಡಿ" ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News