ಹೊಸ ಕೊರೋನ ವೈರಾಣು ಬಗ್ಗೆ ಆತಂಕ ಬೇಡ: ಆರೋಗ್ಯ ಸಚಿವ ಡಾ.ಸುಧಾಕರ್

Update: 2020-12-21 16:02 GMT

ಬೆಂಗಳೂರು, ಡಿ.21: ಯುನೈಟೆಡ್ ಕಿಂಗ್‍ಡಮ್‍ನಲ್ಲಿ ರೂಪಾಂತರಗೊಂಡಿರುವ ಹೊಸ ಬಗೆಯ ಕೊರೋನ ವೈರಾಣು ಕಂಡುಬಂದಿದೆ. ಇದರ ಗುಣ ಕಳೆದ 10 ತಿಂಗಳುಗಳಿಂದ ನಾವು ನೋಡಿರುವ ಕೊರೋನ ವೈರಾಣುಗಿಂತ ವೇಗವಾಗಿ ಹರಡುವ ಲಕ್ಷಣವನ್ನು ಹೊಂದಿದ್ದರೂ, ರೋಗದ ತೀವ್ರತೆ ಹೆಚ್ಚಿಸುವುದಿಲ್ಲ. ಆದುದರಿಂದ, ಯಾರು ಆತಂಕ ಪಡುವ ಅಗತ್ಯವಿಲ್ಲ. ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಸೋಮವಾರ ವಿಧಾನಸೌಧದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯು.ಕೆ., ಡೆನ್ಮಾರ್ಕ್, ನೆದರ್ ಲ್ಯಾಂಡ್ ಮೊದಲಾದ ಐರೋಪ್ಯ ರಾಷ್ಟ್ರಗಳಲ್ಲಿ ಹೊಸ ಬಗೆಯ ವೈರಾಣು ಕಾಣಿಸಿಕೊಂಡಿದೆ. ಈ ಬಗ್ಗೆ ಕೇಂದ್ರ ಸರಕಾರದಿಂದ ನಮ್ಮ ರಾಜ್ಯದ ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬಂದಿದೆ ಎಂದರು.

ನಾಳೆ(ಮಂಗಳವಾರ) ರಾತ್ರಿಯಿಂದ ಯು.ಕೆ.ಯಿಂದ ಭಾರತಕ್ಕೆ ಆಗಮಿಸುವ ಎಲ್ಲ ವಿಮಾನಗಳ ಸಂಚಾರವನ್ನು ಕೇಂದ್ರ ಸರಕಾರ ನಿರ್ಬಂಧಿಸಿದೆ. ಕಳೆದೆರಡು ದಿನಗಳಿಂದ ಯು.ಕೆ.ಯಿಂದ ನಮ್ಮ ರಾಜ್ಯಕ್ಕೆ ಏರ್ ಇಂಡಿಯಾ ಮೂಲಕ 246 ಹಾಗೂ ಬ್ರಿಟಿಷ್ ಏರ್‍ವೇಸ್ ಮೂಲಕ 291 ಮಂದಿ ಬಂದಿದ್ದಾರೆ. ಈ ಪೈಕಿ ಏರ್ ಇಂಡಿಯಾ ವಿಮಾನದ ಮೂಲಕ ಬಂದಿರುವವರ ಪೈಕಿ 89 ಹಾಗೂ ಬ್ರಿಟಿಷ್ ಏರ್‍ವೇಸ್ ಮೂಲಕ ಬಂದಿರುವವರ ಪೈಕಿ 49 ಮಂದಿ ಸೇರಿ ಒಟ್ಟು 138 ಪ್ರಯಾಣಿಕರ ಬಳಿ ಕೋವಿಡ್ ನೆಗೆಟಿವ್ ವರದಿ ಇರಲಿಲ್ಲ ಎಂದು ಸುಧಾಕರ್ ಹೇಳಿದರು.

ಇನ್ನೆರೆಡು ದಿನಗಳಲ್ಲಿ 138 ಮಂದಿಯನ್ನು ಸಂಪರ್ಕಿಸಿ, ಅವರ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಲಾಗುವುದು. ಯು.ಕೆ.ಯಿಂದ ಬಂದಿರುವವರು ಒಂದು ವಾರಗಳ ಕಾಲ ತಮ್ಮ ಮನೆಯಲ್ಲಿಯೆ ಕ್ವಾರಂಟೈನ್‍ನಲ್ಲಿ ಇರಬೇಕು. ಆಪ್ತಮಿತ್ರ ಮೂಲಕ ಅವರ ಮೇಲೆ ನಿಗಾ ಇರಿಸುತ್ತೇವೆ. ನಾಳೆಯಿಂದ ವಿಮಾನ ನಿಲ್ದಾಣಗಳಲ್ಲಿ ವಿಶೇಷವಾದ ಕಿಯೋಸ್ಕ್ ಅಳವಡಿಸಿ, ವಿದೇಶಗಳಿಂದ ಬರುವ ಎಲ್ಲ ಪ್ರಯಾಣಿಕರ ಮೇಲೂ ನಿಗಾ ಇರಿಸಿ ಪರೀಕ್ಷೆ ಮಾಡಲಾಗುವುದು ಎಂದು ಅವರು ಹೇಳಿದರು.

ಮಾಸ್ಕ್ ಧರಿಸುವುದರ ಬಗ್ಗೆ ಸಾರ್ವಜನಿಕರು ನಿರ್ಲಕ್ಷ್ಯ ವಹಿಸುವುದು ಬೇಡ. ವೈರಾಣು ವಿರುದ್ಧ ಹೋರಾಡಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕಿದೆ. ಕ್ರಿಸ್ಮಸ್, ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಣೆ ಮಾಡುವುದನ್ನು ಕೈ ಬಿಡಬೇಕಿದೆ. ಕೆಲ ಹೋಟೆಲ್‍ಗಳಲ್ಲಿ ಮುಂಗಡ ಬುಕಿಂಗ್ ಮಾಡಿ ಆಚರಣೆ ಮಾಡಲು ಸಿದ್ಧತೆ ನಡೆಸಿರುವುದು ಕಂಡುಬಂದಿದೆ. ಹೀಗೆ ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಸರಕಾರಕ್ಕೆ ಜನರ ಆರೋಗ್ಯ ಮುಖ್ಯವಾಗಿದ್ದು, ಹೊಸ ಬಗೆಯ ವೈರಾಣು ಬರುವ ಸಂದರ್ಭದಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಸುಧಾಕರ್ ಹೇಳಿದರು.

ಕಳೆದ 14 ದಿನಗಳಲ್ಲಿ ಬೇರೆ ದೇಶಗಳಿಂದ ರಾಜ್ಯಕ್ಕೆ ಬಂದವರು ಆರ್ ಟಿಪಿಸಿಆರ್ ಪರೀಕ್ಷೆ ಮಾಡಿಸಬೇಕು. ಯುನೈಟೆಡ್ ಕಿಂಗ್‍ಡಮ್‍ನಿಂದ ಬಂದವರು ಹಾಗೂ ಬೇರೆ ದೇಶಗಳಿಂದ ಬಂದವರಿಗೂ 7 ದಿನಗಳ ಕ್ವಾರಂಟೈನ್‍ಗೆ ಒಳಪಡಿಸಬೇಕು ಎಂದು ನಿರ್ಧರಿಸಲಾಗಿದೆ. ಯು.ಕೆ.ಯಿಂದ ಬಂದವರನ್ನು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ ಎಂದು ಅವರು ತಿಳಿಸಿದರು.

ವೈದ್ಯರು ಸೇರಿದಂತೆ ಯಾರೊಬ್ಬರೂ ಭಯಭೀತವಾಗುವ ಅಗತ್ಯವಿಲ್ಲ. ಕೇಂದ್ರ ಸರಕಾರದ ಜೊತೆ ಸತತ ಸಂಪರ್ಕದಲ್ಲಿದ್ದು, ವೈರಾಣು ಹರಡುವುದನ್ನು ನಿಯಂತ್ರಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಶೈಕ್ಷಣಿಕ ಚಟುವಟಿಕೆಗೆ ಸಂಬಂಧಿಸಿದಂತೆ ವಹಿಸಬೇಕಾದ ಎಚ್ಚರಿಕೆ ಕುರಿತು ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದು ಸುಧಾಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News