ವಿಲೀನಕ್ಕೆ ಅಪಸ್ವರ ಎತ್ತಿದ ಜೆಡಿಎಸ್ ಶಾಸಕನಿಗೆ ಎಚ್‍ಡಿಕೆ ತಿರುಗೇಟು

Update: 2020-12-21 17:44 GMT

ಬೆಂಗಳೂರು, ಡಿ.21: ನಿಜವಾದ ಹೊಟ್ಟೆ ನೋವು ಇದ್ದರೆ ಔಷಧಿ ಕೊಡಬಹುದು ಆದರೆ ಕೃತಕ ಹೊಟ್ಟೆ ನೊವು ಇದ್ದರೆ ವೈದ್ಯರಿಗೆ ಔಷಧಿ ಕೊಡಲು ಸಾಧ್ಯನಾ? ಹೀಗಂತ ಪ್ರಶ್ನಿಸಿದ್ದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ. ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ವಿರುದ್ಧ ಕಿಡಿಕಾರಿದ ಅವರು ದೇವೇಗೌಡರ ಸೋಲಿಗೆ ಏನು ಹಾಗೂ ಯಾರು ಕಾರಣ ಎಂಬುವುದು ಚೆನ್ನಾಗಿ ಗೊತ್ತು ಎಂದು ತಿರುಗೇಟು ನೀಡಿದರು.

ಭಾನುವಾರ ಕಾಂಗ್ರೆಸ್ ಮಾಜಿ ಶಾಸಕ ರಾಜಣ್ಣ ಅವರ ಜೊತೆಗೆ ಗುಬ್ಬಿ ಜೆಡಿಎಸ್ ಶಾಸಕ ಎಸ್. ಆರ್. ಶ್ರಿನಿವಾಸ್ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಜೆಡಿಎಸ್ ಬಿಜೆಪಿ ಜೊತೆಗೆ ವಿಲೀನ ಆದರೆ ಪಕ್ಷ ಬಿಡುವುದಾಗಿ ಎಚ್ಚರಿಕೆ ನೀಡಿದ್ದರು.

ಈ ವಿಚಾರವಾಗಿ ಸೋಮವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಎಚ್‍ಡಿ ಕುಮಾರಸ್ವಾಮಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ನೀವೆಲ್ಲಾ ಏನು ಮಾಡಿದ್ದೀರಿ, ಚುನಾವಣೆ ಯಾವ ರೀತಿಯಲ್ಲಿ ನಡೆಸಿದ್ದೀರಿ ಎಂದು ಗೊತ್ತಿದೆ. ನಮ್ಮ ಕುಟಂಬಕ್ಕೆ ಸೋಲು ಹೊಸತೇನು ಅಲ್ಲ ಎಂದರು.

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲಿಸಲು ಜೆಡಿಎಸ್ ಬಿಜೆಪಿ ಜೊತೆಗೆ ಒಳಒಪ್ಪಂದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಒಳಒಪ್ಪಂದ ಮಾಡಿದ್ದು ಸತ್ಯ, ಆದರೆ ಎಸ್.ಆರ್. ಶ್ರೀನಿವಾಸ್ ಅವರು ತುರುವೇಕೆರೆ ಕ್ಷೇತ್ರದಲ್ಲಿ ಒಳಒಪ್ಪಂದ ಮಾಡಿದ್ದಾರೆ. ಅಲ್ಲಿ ನಮ್ಮ ಅಭ್ಯರ್ಥಿ ಸೋಲಲು ಹಾಗೂ ಬಿಜೆಪಿ ಅಭ್ಯರ್ಥಿ ಗೆಲ್ಲಲು ಶ್ರೀನಿವಾಸ್ ಕಾರಣ ಎಂದು ಕಿಡಿಕಾರಿದರು.

ಶ್ರೀನಿವಾಸ್ ಅವರನ್ನು ಸಚಿವರನ್ನಾಗಿ ಮಾಡಿದ್ದೆ, ಅವರಿಗೆ ಸಣ್ಣ ಇಲಾಖೆ ಕೊಟ್ಟಿದ್ದೆ, ಆದ್ರೆ ಅವರು ಹಣಕಾಸಿನಂತಹ ದೊಡ್ಡ ಇಲಾಖೆಯ ನಿರೀಕ್ಷೆಯಲ್ಲಿದ್ದರು. ಅವರು ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ, ನಿಮ್ಮ ಸಂಬಂಧ ಯಾರ ಜೊತೆ ಇದೆ ಎಂದು ಗೊತ್ತು ಎಂದು ಕೆಂಡಾಮಂಡಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News