ಗ್ರಾ.ಪಂ ಮೊದಲನೇ ಹಂತದ ಚುನಾವಣೆ: ಮಂಡ್ಯದಲ್ಲಿ ಶೇ.85.95ರಷ್ಟು ಮತದಾನ

Update: 2020-12-22 18:30 GMT

ಮಂಡ್ಯ, ಡಿ.22: ಎರಡು ಗುಂಪುಗಳ ನಡುವೆ ಗದ್ದಲ, ತಳ್ಳಾಟ ಹೊರತುಪಡಿಸಿ ಜಿಲ್ಲೆಯ ಮಂಡ್ಯ, ಮಳವಳ್ಳಿ ಮತ್ತು ಮದ್ದೂರು ತಾಲೂಕುಗಳ ಗ್ರಾಮ ಪಂಚಾಯತ್‍ಗೆ ಮಂಗಳವಾರ ನಡೆದ ಮೊದಲನೇ ಹಂತದ ಮತದಾನ ಶಾಂತಿಯುತವಾಗಿತ್ತು.

ಮಂಡ್ಯ ತಾಲೂಕಿನಲ್ಲಿ ಶೇ.86.29, ಮದ್ದೂರು ತಾಲೂಕಿನಲ್ಲಿ ಶೇ.86.90 ಹಾಗೂ ಮಳವಳ್ಳಿ ತಾಲೂಕಿನಲ್ಲಿ ಶೇ.84.55ರಷ್ಟು, ಒಟ್ಟಾರೆ ಮೂರು ತಾಲೂಕಿನಲ್ಲಿ ಶೇ.85.95ರಷ್ಟು ಮತದಾನವಾಗಿದೆ.  

ವಯಸ್ಸಾದವರ ಪರವಾಗಿ ಮತ ಚಲಾಯಿಸುವ ಸಂಬಂಧ ಮದ್ದೂರು ತಾಲೂಕು ಪಣ್ಣೇದೊಡ್ಡಿ ಸೇರಿದಂತೆ ಜಿಲ್ಲೆಯ ಹಲವೆಡೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದ ಬಗ್ಗೆ ವರದಿಯಾಗಿದೆ. 

ಪಣ್ಣೆದೊಡ್ಡಿ ಗ್ರಾಮದಲ್ಲಿ ವೃದ್ಧೆಯ ಜತೆ ಮತಚಲಾಯಿಸಲು ಮಗಗಟ್ಟೆಗೆ ಆಗಮಿಸಿದ ಮೊಮ್ಮಗನನ್ನು ಒಂದು ಗುಂಪು ತಡೆದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ, ತಳ್ಳಾಟ ನಡೆಯಿತು. ಮಧ್ಯೆಪ್ರವೇಶ ಮಾಡಿದ ಗ್ರಾಮದ ಹಿರಿಯರು ಹಾಗೂ ಪೊಲೀಸರು ಎರಡು ಗುಂಪುಗಳನ್ನು ಸಮಾಧಾನಪಡಿಸಿ ಗುಂಪನ್ನು ಚದುರಿಸಿದರು. ನಂತರ, ವೃದ್ದೆಯ ಮತದಾನಕ್ಕೆ ಮೊಮ್ಮಗನಿಗೆ ಅವಕಾಶ ನೀಡಲಾಯಿತು.

ಬೆಳಗ್ಗೆಯಿಂದಲೇ ಬಿರುಸಿನ ಮತದಾನ ಆರಂಭವಾಯಿತು. ಭತ್ತ ಕಟಾವು ಸಂದರ್ಭವಾದ್ದರಿಂದ ಮತದಾರರು ಬೆಳಗ್ಗೆಯೇ ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿ ಕೃಷಿ ಕಾರ್ಯಗಳಿಗೆ ತೆರಳುತ್ತಿರುವುದು ಕಂಡುಬಂದಿತು.

ಸಂಸದೆ ಸುಮಲತಾ ಅಂಬರೀಶ್ ಮತ್ತು ಶಾಸಕ ಡಿ.ಸಿ.ತಮ್ಮಣ್ಣ ಮದ್ದೂರು ತಾಲೂಕು ದೊಡ್ಡರಸಿನಕೆರೆಯ ಮತಗಟ್ಟೆಯಲ್ಲಿ, ಶಾಸಕ ಎಂ.ಶ್ರೀನಿವಾಸ್ ಮಂಡ್ಯ ತಾಲೂಕು ಹನಕೆರೆ, ಮಾಜಿ ಶಾಸಕರಾದ ಎಚ್.ಡಿ.ಚೌಡಯ್ಯ, ಎಚ್.ಬಿ.ರಾಮು ಹೊಳಲು ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು.

ಮತದಾರರ ಸಂಖ್ಯೆ ಹೆಚ್ಚಳದಿಂದಾಗಿ ಮತದಾರರು ಸರದಿಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಹೆಚ್ಚಿನ ಸಂಖ್ಯೆಯ ಮಹಿಳಾ ಮತದಾರರು ಉತ್ಸುಕರಾಗಿ ತಮ್ಮ ಹಕ್ಕು ಚಲಾಯಿಸಿದರು. ಅಂತಿಮ ಕ್ಷಣದಲ್ಲೂ ಅಭ್ಯರ್ಥಿ ಮತ್ತು ಮತ್ತವರ ಬೆಂಬಲಿಗರು ಮತಭಿಕ್ಷೆ ಬೇಡಿದರು.

ಮೂರು ತಾಲೂಕುಗಳ 124 ಗ್ರಾಮ ಪಂಚಾಯತ್‍ಗಳಿಗೆ ಸ್ಪರ್ಧಿಸಿರುವ 4,010 ಅಭ್ಯರ್ಥಿಗಳ ಭವಿಷ್ಯಕ್ಕೆ ಮತದಾರರು ತಮ್ಮ ಮುದ್ರೆ ಒತ್ತಿದರು. ಈಗಾಗಲೇ 364 ಸದಸ್ಯ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 1,646 ಸ್ಥಾನಗಳಿಗೆ ಮತದಾನ ನಡೆಯಿತು.

921 ಪಿ.ಆರ್.ಓ ಗಳು, 921 ಎ.ಪಿ.ಆರ್.ಓ, 921 ಒಂದನೇ ಪೋಲಿಂಗ್ ಅಧಿಕಾರಿ, 921 ಎರಡನೇ ಪೋಲಿಂಗ್ ಅಧಿಕಾರಿಗಳು, 921 ಗ್ರೂಪ್ ಡಿ ನೌಕರರು, 372 ಮೀಸಲು ಪಡೆ ಸೇರಿ ಒಟ್ಟು 4,977 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು. ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News