ಲಂಚದ ಆರೋಪ ಹೊರಿಸಿದ ಅಧಿಕಾರಿ ವಿರುದ್ಧ ಮಾನನಷ್ಟ ಮೊಕದ್ದಮೆ: ಸಚಿವ ಎಚ್.ನಾಗೇಶ್

Update: 2020-12-22 18:41 GMT

ಬೆಂಗಳೂರು, ಡಿ.22: ಅಬಕಾರಿ ಇಲಾಖೆಯ ಜಂಟಿ ಆಯುಕ್ತರ ವರ್ಗಾವಣೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಳಿ ಬಂದಿರುವ ಒಂದು ಕೋಟಿ ರೂ. ಲಂಚದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೆ, ಈ ಆರೋಪವನ್ನು ಮಾಡಿರುವ ಅಧಿಕಾರಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇನೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.

ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ವಿರುದ್ಧ ಮಾಡಲಾಗಿರುವ ಲಂಚದ ಆರೋಪವು ಸತ್ಯಕ್ಕೆ ದೂರವಾದದ್ದು. ನಾನು ಅತ್ಯಂತ ಪ್ರಾಮಾಣಿಕವಾಗಿ ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ. ಈ ಬಗ್ಗೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದರು.

ದಲಿತ ಸಮುದಾಯಕ್ಕೆ ಸೇರಿದವನು ಎಂಬ ಕಾರಣಕ್ಕೆ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಖಾಸಗಿ ವೆಬ್‍ಸೈಟ್ ಒಂದರಲ್ಲಿ ನನ್ನ ವಿರುದ್ಧ ಪ್ರಕಟವಾಗಿರುವ ವರದಿಗೂ ನನಗೂ ಯಾವುದೇ ಸಂಬಂಧವಿಲ್ಲ. ವರದಿಯಲ್ಲಿ ಉಲ್ಲೇಖಿಸಿರುವಂತೆ ಅಂತಹ ವರ್ಗಾವಣೆಗೆ ಸಂಬಂಧಿಸಿದ ವಿಷಯವಾಗಲಿ, ಪ್ರಕರಣವಾಗಲಿ ನನ್ನ ಮುಂದೆ ಬಂದೆ ಇಲ್ಲ ಎಂದು ನಾಗೇಶ್ ಸ್ಪಷ್ಟನೆ ನೀಡಿದರು.

ಮೋಹನ್ ಕುಮಾರ್ ಅವರ ಕುಟುಂಬಕ್ಕೆ ಇಂತಹ ದೂರುಗಳನ್ನು ಕೊಡುವುದೆ ಕೆಲಸವಾಗಿದೆ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವವರು ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ನಾಗೇಶ್ ಆಕ್ರೋಶ ವ್ಯಕ್ತಪಡಿಸಿದರು.

ಕೊರೋನ ವೈರಸ್‍ನ ರೂಪಾಂತರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜನರ ಆರೋಗ್ಯ ನಮಗೆ ಮುಖ್ಯ. ಒಂದು ವೇಳೆ ಸರಕಾರ ರಾತ್ರಿ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಿದರೆ ನಮ್ಮ ಇಲಾಖೆಯಿಂದ ಯಾವುದೇ ಆಕ್ಷೇಪವಿಲ್ಲ. ಹೊಸ ವರ್ಷಾಚರಣೆ ವೇಳೆ ರಾತ್ರಿ ಕರ್ಫ್ಯೂ ಆದರೆ ನಮ್ಮ ಇಲಾಖೆಗೆ ನೀಡಿರುವ ಗುರಿಯನ್ನು ಸಾಧಿಸಲು ಕಷ್ಟವಾಗಬಹುದು. ಈ ಬಗ್ಗೆ ಆರೋಗ್ಯ ಸಚಿವರ ಜೊತೆ ಚರ್ಚೆ ಮಾಡುತ್ತೇನೆ ಎಂದು ಅವರು ಹೇಳಿದರು.

ಹೊಸಪೇಟೆಯಲ್ಲಿ ಅಬಕಾರಿ ಇಲಾಖೆ ಜಂಟಿ ಆಯುಕ್ತರಾಗಿರುವ ಮೋಹನ್ ಕುಮಾರ್, ಬೆಂಗಳೂರಿನಲ್ಲಿ ಜಂಟಿ ಆಯುಕ್ತರ ಹುದ್ದೆಗೆ ವರ್ಗಾವಣೆ ಕೋರಿದ್ದರು. ಅದಕ್ಕಾಗಿ ಸಚಿವ ಎಚ್.ನಾಗೇಶ್ ಒಂದು ಕೋಟಿ ರೂ.ಲಂಚ ಕೇಳಿದ್ದರು ಎಂದು ಮೋಹನ್ ಕುಮಾರ್ ಅವರ ಪುತ್ರಿಯು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಸರಕಾರದ ಇ-ಜನಸ್ಪಂದನದಲ್ಲಿ ದೂರು ಸಲ್ಲಿಸಿದ್ದರು ಎಂದು ಖಾಸಗಿ ವೆಬ್‍ಸೈಟ್ ಒಂದು ಸುದ್ದಿ ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News