ಜಮ್ಮು ಕಾಶ್ಮೀರದ ಗೆಲುವಿನಿಂದ ಬಿಜೆಪಿ ಅಲೆ ಸಾಬೀತು: ನಳಿನ್‍ ಕುಮಾರ್ ಕಟೀಲು

Update: 2020-12-23 17:51 GMT

ಬೆಂಗಳೂರು, ಡಿ.23: ಜಮ್ಮು-ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿಯ(ಡಿಡಿಸಿ) ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಅತಿ ಹೆಚ್ಚು ಸ್ಥಾನ ಗೆದ್ದ ಏಕೈಕ ಪಕ್ಷವಾಗಿ ಹೊರಹೊಮ್ಮಿದೆ. ಈ ಗೆಲುವಿನಿಂದ ದೇಶದಲ್ಲಿ ರೈತಪರ ಮತ್ತು ಅಭಿವೃದ್ಧಿ ಪರ ಇರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಲೆ ಇರುವುದು ಸಾಬೀತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ಸಂವಿಧಾನದ 370ನೇ ವಿಧಿ ರದ್ದು ಮಾಡಿದ ಕ್ರಮವನ್ನು ಅಲ್ಲಿನ ಜನರು ಸಮರ್ಥಿಸಿದ್ದಾರೆ ಎಂಬುದಕ್ಕೆ ಬಿಜೆಪಿ 75 ಸ್ಥಾನ ಗೆದ್ದುಕೊಂಡಿರುವುದೇ ಸಾಕ್ಷಿ. ಪಕ್ಷವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಜನಪ್ರಿಯತೆ ಪಡೆದಿರುವುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ. ಮುಂಬರುವ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲೂ ಅತಿ ಹೆಚ್ಚು ಸ್ಥಾನ ಪಡೆಯಲಿರುವುದರ ಮುನ್ಸೂಚನೆ ಇದಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

370ನೇ ವಿಧಿಯ ಮರುಸ್ಥಾಪನೆಯ ಉದ್ದೇಶದೊಂದಿಗೆ ಗುಪ್ಕಾರ್ ಮೈತ್ರಿಕೂಟ ರಚಿಸಿಕೊಂಡ ಪಕ್ಷಗಳು ಡಿಡಿಸಿ ಚುನಾವಣೆಯಲ್ಲಿ ಗಮನಾರ್ಹ ಸಾಧನೆಯನ್ನೇನೂ ಮಾಡಿಲ್ಲ. ಬಿಜೆಪಿ ಮತ್ತು ಪಕ್ಷೇತರರು ಒಟ್ಟು ಸೇರಿ ಶೇ.52 ಮತ ಪ್ರಮಾಣವನ್ನು ಪಡೆದಿದ್ದಾರೆ. ಕಾಂಗ್ರೆಸ್ ಮತ್ತು ಮೆಹಬೂಬಾ ಮುಫ್ತಿ ಅವರ ಪಿಡಿಪಿ ಪಕ್ಷಗಳು ಪಕ್ಷೇತರರಿಗಿಂತ ಕಡಿಮೆ ಸ್ಥಾನ ಪಡೆದಿದ್ದು, ಈ ಪಕ್ಷಗಳನ್ನು ಜನರು ತಿರಸ್ಕರಿಸಿದ್ದಾರೆ ಎಂದು ನಳಿನ್‍ ಕುಮಾರ್ ಕಟೀಲು ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News