ವಿಳಂಬ ನ್ಯಾಯವೆಂಬ ಅನ್ಯಾಯ

Update: 2020-12-24 06:21 GMT

ಈ ದೇಶದಲ್ಲಿ ಸಂತ್ರಸ್ತನಿಗೆ ಸಿಗುವ ವಿಳಂಬ ನ್ಯಾಯ ಪರೋಕ್ಷವಾಗಿ ಅವನ ಮೇಲೆ ನಡೆಯುವ ಇನ್ನೊಂದು ಅನ್ಯಾಯವಾಗಿದೆ. ಆದುದರಿಂದಲೇ ನ್ಯಾಯಾಲಯದಲ್ಲಿ ನ್ಯಾಯ ದೊರಕಿದರೂ ಸಂತ್ರಸ್ತ ಅದರ ಪೂರ್ಣ ಫಲಾನುಭವಿ ಎನ್ನುವಂತಿಲ್ಲ. ‘ಗೆದ್ದವ ಸೋತ, ಸೋತವ ಸತ್ತ’ ಎನ್ನುವ ಗಾದೆ ಹುಟ್ಟಿದ್ದೇ ವಿಳಂಬ ನ್ಯಾಯದ ಹಿನ್ನೆಲೆಯಲ್ಲಿ. ವಿಳಂಬ ನ್ಯಾಯ ಚರ್ಚೆಗೆ ಬಂದಾಕ್ಷಣ ಈ ದೇಶದಲ್ಲಿರುವ ನ್ಯಾಯಾಲಯಗಳ ಕೊರತೆ, ನ್ಯಾಯಾಧೀಶರ ಕೊರತೆ, ಸಿಬ್ಬಂದಿಯ ಕೊರತೆಗಳು ಚರ್ಚೆಗೆ ಬರುತ್ತವೆ. ಸರಕಾರ ಹೆಚ್ಚು ಹೆಚ್ಚು ಸರ್ವಾಧಿಕಾರಿಯಾಗುತ್ತಿರುವ ಇಂದಿನ ದಿನಗಳಲ್ಲಿ, ಜನಸಾಮಾನ್ಯರಿಗೆ ನ್ಯಾಯಾಲಯವೇ ಅಂತಿಮ ಭರವಸೆ. ಸರಕಾರದ ಸಂವಿಧಾನ ವಿರೋಧಿ ನೀತಿಗಳ ವಿರುದ್ಧ ಪ್ರತಿದಿನವೂ ಪ್ರಕರಣಗಳು ದಾಖಲಾಗುತ್ತಲೇ ಇವೆ. ಹೀಗಿರುವಾಗ, ನ್ಯಾಯಾಲಯ ವಿಚಾರಣೆಯನ್ನು ವಿಳಂಬ ಮಾಡಿದಂತೆಲ್ಲ, ಅದರ ಲಾಭವನ್ನು ಸರಕಾರ ತನ್ನದಾಗಿಸಿಕೊಳ್ಳುತ್ತದೆ.

ಇತ್ತೀಚೆಗೆ ಆಂಗ್ಲ ಸುದ್ದಿಜಾಲತಾಣವೊಂದು, ಅತ್ಯಧಿಕ ಸಂಖ್ಯೆಯಲ್ಲಿ ದಾವೆಗಳು ಹೂಡಲ್ಪಡುವ ಜಿಲ್ಲಾ ಮಟ್ಟದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿತು. ಕರ್ನಾಟಕದ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಹೊಸ ನ್ಯಾಯಾಲಯಗಳ ಸ್ಥಾಪನೆಯ ಬಗ್ಗೆ ಅಧ್ಯಯನ ನಡೆಸಲು 3.7 ಲಕ್ಷಕ್ಕೂ ಅಧಿಕ ಕೋರ್ಟ್‌ಗಳ ದಾವೆಗಳ ಕುರಿತಾದ ದತ್ತಾಂಶಗಳನ್ನು ಅದು ಸಂಗ್ರಹಿಸಿದೆ. ನ್ಯಾಯಾಲಯದ ವಿಚಾರಣೆಯಲ್ಲಿ ವಿಳಂಬವಾಗುತ್ತಿರುವುದನ್ನು ಬಗೆಹರಿಸಲು ನ್ಯಾಯಾಲಯಗಳ ಸಂಖ್ಯೆಯನ್ನು ಹಂತಹಂತವಾಗಿ ಹೆಚ್ಚಿಸುವ ಅಗತ್ಯವಿರುವುದನ್ನು ಈ ವರದಿಯು ಬೆಟ್ಟು ಮಾಡಿ ತೋರಿಸಿದೆ. ನೂತನ ನ್ಯಾಯಾಲಯವೊಂದು ಸ್ಥಾಪನೆಯಾದಾಗ, ಇತರ ಎರಡು ನ್ಯಾಯಾಲಯಗಳಿಂದ ಅಲ್ಲಿಗೆ ಪ್ರಕರಣವನ್ನು ವರ್ಗಾಯಿಸಲಾಗುತ್ತಿದ್ದು, ಆ ಮೂಲಕ ಅವುಗಳ ಕೆಲಸದ ಹೊರೆಯನ್ನು ಇಳಿಸಬೇಕೆಂದು ಅದು ಶಿಫಾರಸು ಮಾಡಿತ್ತು. ಇನ್ನೊಂದು ಪರಿಹಾರ ಮಾರ್ಗವೆಂದರೆ ಖಾಲಿ ಬಿದ್ದಿರುವ ನ್ಯಾಯಾಂಗದ ಹುದ್ದೆಗಳನ್ನು ಭರ್ತಿಗೊಳಿಸುವುದು. ಸರ್ವೋಚ್ಚ ನ್ಯಾಯಾಲಯದ ಆನ್‌ಲೈನ್ ಪ್ರಕಟನೆಯಾದ ‘ಕೋರ್ಟ್ ನ್ಯೂಸ್’, 2019ರ ಜೂನ್‌ವರೆಗೆ ಭಾರತಾದ್ಯಂತದ ಜಿಲ್ಲಾ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಶೇ.22ರಷ್ಟು ಹುದ್ದೆಗಳು ಖಾಲಿ ಬಿದ್ದಿರುವುದನ್ನು ಬೆಟ್ಟು ಮಾಡಿ ತೋರಿಸಿದೆ.

ಅಗತ್ಯವಿರುವಷ್ಟು ಸಂಖ್ಯೆಯ ನ್ಯಾಯಾಧೀಶರ ನೇಮಕವು, ನ್ಯಾಯವನ್ನು ತ್ವರಿತವಾಗಿ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಒಂದು ಅತ್ಯಗತ್ಯ ಹೆಜ್ಜೆಯಾಗಿದೆ. ತಲಾವಾರು ಜನಸಂಖ್ಯೆಗೆ ಇರುವ ನ್ಯಾಯಾಧೀಶರ ಸಂಖ್ಯೆಯನ್ನು ನಿಗದಿಪಡಿಸುವುದು ಸೇರಿದಂತೆ ವಿವಿಧ ಪ್ರಸ್ತಾವವನ್ನು ಭಾರತದ ಕಾನೂನು ಆಯೋಗವು ಸರಕಾರಕ್ಕೆ ಸಲ್ಲಿಸಿತ್ತು. ಸುಪ್ರೀಂಕೋರ್ಟ್‌ನ ಅಧೀನದಲ್ಲಿರುವ ರಾಷ್ಟ್ರೀಯ ನ್ಯಾಯಾಲಯ ನಿರ್ವಹಣಾ ವ್ಯವಸ್ಥೆಯು, ಈ ನಿಟ್ಟಿನಲ್ಲಿ ಮಧ್ಯಂತರ ಸೂತ್ರವೊಂದನ್ನು ಶಿಫಾರಸು ಮಾಡಿತ್ತು. ನ್ಯಾಯಾಧೀಶರುಗಳ ಕಾರ್ಯನಿರ್ವಹಣೆಯ ‘ವೌಲ್ಯಮಾಪನ’ ನಡೆಸುವ ವಿಶಿಷ್ಟವಾದ ‘ಯೂನಿಟ್ಸ್’ ಎಂಬ ವಿಧಾನವನ್ನು ಅಭಿವೃದ್ಧಿಪಡಿಸಲು ಅದು ಶಿಫಾರಸು ಮಾಡಿತ್ತು. ಪ್ರತಿಯೊಂದು ಉಚ್ಚ ನ್ಯಾಯಾಲಯದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆದರೆ ಈ ಸೂತ್ರದ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಮಾಹಿತಿ ಲಭ್ಯವಿಲ್ಲದೆ ಇರುವುದರಿಂದ ಅದು ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತವೆಯೆಂಬುದು ಅಸ್ಪಷ್ಟವಾಗಿದೆ.

ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಚಾರಣೆಗೆ ಮೀಸಲಿಡುವ ಅವಧಿಯನ್ನು ಹೆಚ್ಚಿಸುವ ಮೂಲಕ ನ್ಯಾಯದಾನದ ತ್ವರಿತ ಲಭ್ಯತೆಯ ಸಾಧ್ಯತೆಯನ್ನು ಅಧಿಕಗೊಳಿಸಬಹುದಾಗಿದೆ. ಉಚ್ಚ ನ್ಯಾಯಾಲಯಗಳು, ವಿಭಿನ್ನ ವಿಧದ ಪ್ರಕರಣಗಳ ವಿಲೇವಾರಿಗೆ ನಿರ್ದಿಷ್ಟ ಕಾಲಮಿತಿಯನ್ನು ನಿಗದಿಪಡಿಸಲು ಪ್ರಕರಣ ಹರಿವು ನಿರ್ವಹಣಾ (ಸಿಎಫ್‌ಎಂ) ಕಾನೂನುಗಳನ್ನು ಅಂಗೀಕರಿಸಿವೆ. ಆದರೆ ಮೂಲಸೌಕರ್ಯ ಹಾಗೂ ಸಿಬ್ಬಂದಿ ಕೊರತೆ ಮತ್ತು ವರ್ತಮಾನಕ್ಕೆ ಹೊಂದದ ವಿಧಿವಿಧಾನಗಳ ಕಾರಣದಿಂದಾಗಿ ಅವುಗಳಿಗೆ ಬದ್ಧವಾಗಿ ನಡೆದುಕೊಳ್ಳಲು ನ್ಯಾಯಾಲಯಗಳಿಗೆ ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ಪ್ರಕರಣಗಳ ವಿಚಾರಣೆಯನ್ನು ಆಗಾಗ ಮುಂದೂಡುವುದು ಪ್ರಕರಣದ ವಿಚಾರಣೆಯನ್ನು ದೀರ್ಘಾವಧಿಯವರೆಗೆ ಎಳೆಯುವಂತೆ ಮಾಡುತ್ತದೆ. ತನ್ನ ಕಕ್ಷಿದಾರನ ಪರವಾಗಿ ನ್ಯಾಯವಿಲ್ಲ ಎನ್ನುವುದು ಗೊತ್ತಾದಾಕ್ಷಣ ನ್ಯಾಯವಾದಿ ವಿಚಾರಣೆಯ ಮುಂದೂಡಲು ಪ್ರಯತ್ನಿಸುತ್ತಾನೆ. ವಿವಿಧ ಕಾರಣಗಳನ್ನು ನೀಡಿ ಪ್ರಕರಣಗಳನ್ನು ಮುಂದೂಡುತ್ತಾ ಹೋಗುವುದರಿಂದ ಆರೋಪಿ ಬೀಸುವ ದೊಣ್ಣೆಯಿಂದ ತಾತ್ಕಾಲಿಕವಾಗಿ ತಪ್ಪಿಸಿಕೊಳ್ಳುತ್ತಾನೆ. ವಿಚಾರಣೆ ಮುಗಿದು ತೀರ್ಪು ಹೊರಬೀಳುವಾಗ ಆರೋಪಿಯೇ ಸತ್ತಿರುವ ಸಾಧ್ಯತೆಯಿರುತ್ತದೆ. ಆದುದರಿಂದ ಪ್ರಕರಣದ ವಿಚಾರಣೆಯ ಮುಂದೂಡುವಿಕೆಯನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕಾನೂನುಗಳನ್ನು ರೂಪಿಸಬೇಕಾಗಿದೆ. ಎಲ್ಲಾ ಪ್ರಕರಣಗಳ ವಿಚಾರಣೆಯು ನಿಗದಿತ ದಿನದಲ್ಲಿಯೇ ನಡೆಯುವುದನ್ನು ಖಾತರಿಪಡಿಸುವ ವ್ಯವಸ್ಥಿತವಾದ ಪದ್ಧತಿಗಳನ್ನು ನ್ಯಾಯಾಲಯಗಳು ರೂಪಿಸಿಕೊಳ್ಳಬೇಕಾಗಿದೆ.

ನ್ಯಾಯಾಲಯಗಳು ಪ್ರಸಕ್ತ ಸರಕಾರದಿಂದ ಪಡೆಯುತ್ತಿರುವ ಅನುದಾನಗಳಿಂದ ಸಿಬ್ಬಂದಿ ಸಂಖ್ಯೆಯ ಹೆಚ್ಚಳ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ ಸಾಧ್ಯವಾಗದು. ನ್ಯಾಯಾಂಗಕ್ಕೆ ಅನುದಾನದ ಪ್ರಮಾಣ ಹೆಚ್ಚಿದಲ್ಲಿ ಈ ಸಮಸ್ಯೆಗೆ ಸ್ಪಂದಿಸಲು ಸಹಕಾರಿಯಾಗಲಿದೆ. ಜಿಲ್ಲಾ ಮಟ್ಟದ ನ್ಯಾಯಾಂಗಕ್ಕೆ ಹೆಚ್ಚಿನ ಅನುದಾನವು ರಾಜ್ಯ ಸರಕಾರದ ಬಜೆಟ್‌ನಿಂದಲೇ ದೊರೆಯುತ್ತಿದೆ. ಬಹುತೇಕ ಪ್ರಕರಣಗಳ ವಿಚಾರಣೆಗಳನ್ನು ಜಿಲ್ಲಾ ನ್ಯಾಯಾಲಯಗಳು ಮಾಡುತ್ತಿವೆ ಮತ್ತು ಕೇಂದ್ರ ಸರಕಾರದ ಶಾಸನಗಳನ್ನು ಅನುಷ್ಠಾನಕ್ಕೆ ತರುತ್ತಿವೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ಜಿಲ್ಲಾ ನ್ಯಾಯಾಲಯಗಳಿಗೆ ನೀಡುವ ಅನುದಾನವನ್ನು ಹಂಚಿಕೊಳ್ಳುವ ಬಗ್ಗೆ ಅವಲೋಕನ ನಡೆಸುವ ಅಗತ್ಯವಿದೆ. ನ್ಯಾಯಾಂಗಕ್ಕೆ ಸಂಪನ್ಮೂಲಗಳ ವಿತರಣೆಯ ಕುರಿತ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಹುಡುಕುವ ಅಗತ್ಯವಿದೆ. ಸಮಯ ಹಾಗೂ ಸಂಪನ್ಮೂಲವನ್ನು ಸಾಧ್ಯವಿದ್ದಷ್ಟು ಮಟ್ಟಿಗೆ ದಕ್ಷತೆ ಹಾಗೂ ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದನ್ನು ಖಾತರಿಪಡಿಸಲು ನ್ಯಾಯಾಲಯಗಳ ವ್ಯವಸ್ಥೆಯಲ್ಲಿ ಕಾರ್ಯವಿಧಾನಾತ್ಮಕ ಹಾಗೂ ಆಡಳಿತಾತ್ಮಕ ಸುಧಾರಣೆಗಳನ್ನು ಜಾರಿಗೊಳಿಸುವುದು ತುರ್ತು ಆಗತ್ಯವಾಗಿದೆ.

ಸದ್ಯದ ದಿನಗಳಲ್ಲಿ ನ್ಯಾಯವ್ಯವಸ್ಥೆ ನಡೆಸುವ ವಿಚಾರಣೆ, ನೀಡುವ ತೀರ್ಪುಗಳ ಕುರಿತಂತೆ ಜನರು ಅಪನಂಬಿಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ನ್ಯಾಯವ್ಯವಸ್ಥೆಯನ್ನು ಪ್ರಭುತ್ವ ನಿಯಂತ್ರಿಸುತ್ತಿದೆ ಎಂಬ ಆರೋಪಗಳಿವೆ. ಎನ್‌ಆರ್‌ಸಿ, ರೈತ ವಿರೋಧಿ ಕಾನೂನು, ಜಮ್ಮು-ಕಾಶ್ಮೀರ ಪ್ರಕರಣಗಳಲ್ಲಿ ನ್ಯಾಯ ವ್ಯವಸ್ಥೆಯ ಮಂದಗತಿ ಸಾಕಷ್ಟು ಟೀಕೆಗಳಿಗೆ ಕಾರಣವಾಗಿದೆ. ಜಾಮೀನು ನೀಡುವ ವಿಷಯದಲ್ಲಿ ನ್ಯಾಯಾಲಯದ ಪಕ್ಷಪಾತವೂ ಮಾಧ್ಯಮಗಳಲ್ಲಿ ಚರ್ಚೆಗೊಳಗಾಗಿವೆ. ಕಟ್ಟಡಗಳನ್ನು ಹೆಚ್ಚಿಸುವುದರಿಂದ, ಸಿಬ್ಬಂದಿಯನ್ನು ನೇಮಕ ಮಾಡುವುದರಿಂದಷ್ಟೇ ನ್ಯಾಯ ವಿಳಂಬವನ್ನು ತಡೆಯಲಾಗುವುದಿಲ್ಲ. ಅಂತಿಮವಾಗಿ, ನ್ಯಾಯ ಸ್ಥಾನದಲ್ಲಿ ಕುಳಿತವರಿಗೆ, ತನ್ನ ಸ್ಥಾನದ ಘನತೆಯ ಕುರಿತಂತೆ ಅರಿವಿರಬೇಕು. ಸಂವಿಧಾನದ ಅಳಿವು ಉಳಿವು ತನ್ನ ಕೈಯಲ್ಲಿದೆ ಎನ್ನುವ ಪ್ರಜ್ಞೆಯಿದ್ದಾಗ ಮಾತ್ರ ನ್ಯಾಯಾಲಯದಲ್ಲಿ ನ್ಯಾಯ ಅಸ್ತಿತ್ವದಲ್ಲಿರಲು ಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News