ಅವಸಾನದ ಅಂಚಿನಲ್ಲಿರುವ ಐದು ಸರಕಾರಿ ಶಾಲೆಗಳ ದತ್ತು ಪಡೆದ ಸಚಿವ ರಮೇಶ್ ಜಾರಕಿಹೊಳಿ

Update: 2020-12-26 11:44 GMT

ಬೆಳಗಾವಿ, ಡಿ. 26: ಅವಸಾನದ ಅಂಚಿನಲ್ಲಿ ಇರುವ ಜಿಲ್ಲೆಯ ಗೋಕಾಕ್ ಕ್ಷೇತ್ರ ವ್ಯಾಪ್ತಿಯಲ್ಲಿನ ಐದು ಸರಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಅಭಿವೃದ್ಧಿಗೆ ಮುಂದಾಗಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಾನವೀಯತೆ ಮರೆದಿದ್ದಾರೆ.

ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಶಿಕ್ಷಣ ನೀಡಿ ಅವರ ಬದುಕನ್ನು ಹಸನಾಗಿಸಿ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಸರಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಜಾರಕಿಹೊಳಿ ತೀರ್ಮಾನಿಸಿದ್ದಾರೆ.

ರಾಜ್ಯದಲ್ಲಿ 43,447 ಸರಕಾರಿ ಪ್ರಾಥಮಿಕ ಶಾಲೆಗಳು ಮತ್ತು 3,029 ಪ್ರೌಢಶಾಲೆಗಳಿದ್ದು, ಶಿಕ್ಷಣ ಇಲಾಖೆಗೆ ವಾರ್ಷಿಕ ನೀಡಲಾಗುವ ಅನುದಾನದಲ್ಲಿ ಶೇ.90ರಷ್ಟು ಶಿಕ್ಷಕರ ಭತ್ತೆಗೆ ವೆಚ್ಚವಾಗುತ್ತಿದ್ದು, ಇನ್ನುಳಿದ ಶೇ.10ರಷ್ಟು ಅನುದಾನದಲ್ಲಿ ಶಾಲೆಗಳ ಅಭಿವೃದ್ಧಿ ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಅನುವಾಗುವಂತೆ ರಾಜ್ಯ ಸರಕಾರವು `ಶಾಲಾ ದತ್ತು ಯೋಜನೆ'ಯನ್ನು ರೂಪಿಸಿದ್ದು, ಹಲವು ಉದ್ಯಮಿಗಳು ಈಗಾಗಲೇ ಹಲವು ಶಾಲೆಗಳನ್ನು ದತ್ತು ಪಡೆದುಕೊಂಡಿದ್ದಾರೆ.

ಸರಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡವರ ಸಹಾಯದಿಂದ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಜತೆ ಜತೆಗೆ ಗುಣಮಟ್ಟದ ಶಿಕ್ಷಣ ನೀಡುವಂತೆ ಮಾಡುವುದು ಸರಕಾರದ ಆಲೋಚನೆ ಆಗಿದ್ದು, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಹಲವು ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಲಾಗಿದೆ.

ಸರಕಾರದ ಈ ಯೋಜನೆ ಬಗ್ಗೆ ಅರಿತ ಸಚಿವ ರಮೇಶ್ ಜಾರಕಿಹೊಳಿ, ತಮ್ಮ ಕ್ಷೇತ್ರದ ಶಾಲೆಗಳ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿ ಹಿಂದುಳಿದ ಮತ್ತು ಅಭಿವೃದ್ಧಿ ಕುಂಠಿತವಾಗಿರುವ ಶಾಲೆಗಳನ್ನು ಗುರುತಿಸಿ ಅವುಗಳನ್ನು ದತ್ತು ಪಡೆಯುವ ಮೂಲಕ ಮಾದರಿ ರಾಜಕಾರಣಿ ಎನಿಸಿಕೊಂಡಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಗೋಕಾಕ್ ತಾಲ್ಲೂಕಿನಲ್ಲಿರುವ ಖನಗಾಂವ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆ, ಮಮದಾಪೂರದ ಸರಕಾರಿ ಮಾದರಿ ಗಂಡು ಮಕ್ಕಳ ಶಾಲೆ, ಅಂಕಲಗಿಯ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಧುಪಧಾಳದ ಮತ್ತು ಸುಲಧಾಳ ಗ್ರಾಮದಲ್ಲಿರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳನ್ನು ದತ್ತು ಪಡೆದುಕೊಂಡಿರುವ ಸಚಿವರು ಈ ಶಾಲೆಗಳ ಸಮಗ್ರ ಅಭಿವೃದ್ಧಿಗೆ ರೂಪು ರೇಷೆ ಸಿದ್ಧಪಡಿಸುವತ್ತ ಗಮನ ಹರಿಸಿದ್ದಾರೆ.

ಉದ್ದೇಶಿತ ಯೋಜನೆಯಡಿ ತಾವು ದತ್ತು ಪಡೆದುಕೊಂಡಿರುವ ಐದು ಶಾಲೆಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿರುವ ಅವರು, ಶಾಲೆಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆಗೆ ಅನುವಾಗುವಂತೆ ಅಗತ್ಯ ಇರುವೆಡೆ ಶಾಲಾ ಕಟ್ಟಡಗಳ ನವೀಕರಣಕ್ಕೆ ಚಿಂತನೆ ನಡೆಸಿದ್ದಾರೆ. ಇನ್ನುಳಿದಂತೆ ಶಾಲಾ ಕ್ರೀಡಾಂಗಣ, ಕೈತೋಟ ಅಭಿವೃದ್ಧಿ ಮತ್ತು ಶಾಲಾ ಕಾಂಪೌಂಡ್ ಗೋಡೆ ನಿರ್ಮಾಣ, ಸಮರ್ಪಕ ಪೀಠೋಪಕರಣ, ಕಂಪ್ಯೂಟರ್ ಶಿಕ್ಷಣಕ್ಕೆ ಅನುವಾಗುವಂತಹ ಉಪಕರಣ ಮತ್ತು ಬೋಧನೆಗೆ ಸವಲತ್ತು ರೂಪಿಸುವ ಜತೆ ಜತೆಗೆ ಗ್ರಂಥಾಲಯ ಮತ್ತು ಲ್ಯಾಬೊರೇಟರಿಗಳನ್ನು ಅಸ್ತಿತ್ವಕ್ಕೆ ತರಲು ಕಾರ್ಯಕ್ರಮ ರೂಪಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಗ್ರಾಮೀಣ ಪ್ರದೇಶದ ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮಕ್ಕಳನ್ನು ದತ್ತು ಪಡೆದು ಶಿಕ್ಷಣ ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಪೌಷ್ಟಿಕ ಆಹಾರ ಒದಗಿಸುವುದು, ಬೇಸಿಗೆ ಸೇರಿದಂತೆ ವಿವಿಧ ಶಿಬಿರಗಳ ಏರ್ಪಾಡು ಮಾಡುವುದೂ ಸೇರಿದಂತೆ ಸ್ಕೌಟ್ಸ್-ಗೈಡ್ಸ್, ಸೇವಾದಳ, ಕಿರಿಯರ ರೆಡ್‍ಕ್ರಾಸ್, ಎನ್‍ಸಿಸಿ, ವಿಜ್ಞಾನ ಕ್ಲಬ್, ಪರಿಸರ ಜಾಗೃತಿ ಸೇರಿದಂತೆ ಪೋಷಕರ ಸಹಭಾಗಿತ್ವದಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಲು ಈ ದತ್ತು ಯೋಜನೆ ಅನುವಾಗುತ್ತದೆ ಎಂದು ಹೇಳಲಾಗಿದೆ.

`ಉತ್ತಮ ಶಿಕ್ಷಣದಿಂದ ಸುಭದ್ರ ಸಮಾಜ ನಿರ್ಮಾಣ ಸಾಧ್ಯ ಎಂಬುದರಲ್ಲಿ ನಂಬಿಕೆ ಹೊಂದಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ನಾನು ಸಾಗಿ ಬಂದಿದ್ದೇನೆ. ಅವರ ಪ್ರಮುಖ ಆಶಯಗಳಲ್ಲಿ ಒಂದಾಗಿರುವ `ಸರ್ವರಿಗೂ ಶಿಕ್ಷಣ' ನೀಡಬೇಕೆಂಬ ಮಹದಾಸೆಯಿಂದ ಸರಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಈ ಶಾಲೆಗಳನ್ನು ಯಾವುದೇ ಹೈಟೆಕ್ ಶಾಲೆಗಿಂತ ಕಡಿಮೆ ಇಲ್ಲದಂತೆ ಮಾದರಿ ಶಾಲೆಗಳನ್ನಾಗಿ ರೂಪಿಸುವ ಕನಸು ಹೊಂದಿದ್ದೇನೆ'
-ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News