ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಮಸೂದೆ ಜಾರಿ: ಸಚಿವ ಪ್ರಭು ಚೌಹಾಣ್

Update: 2020-12-28 11:08 GMT

ಬೆಂಗಳೂರು, ಡಿ. 28: ಪ್ರತಿಪಕ್ಷ ಕಾಂಗ್ರೆಸ್ ಕುತಂತ್ರದಿಂದ ಕಳೆದ ಅಧಿವೇಶನದಲ್ಲಿ 'ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ' ವಿಧಾನಪರಿಷತ್ತಿನಲ್ಲಿ ಅಂಗೀಕಾರವಾಗಲಿಲ್ಲ. ಆದರೆ, ಗೋವುಗಳ ಸಂರಕ್ಷಣೆಗೆ ಬಿಜೆಪಿ ಬದ್ಧವಾಗಿದೆ. ಹೀಗಾಗಿ ಅಧ್ಯಾದೇಶ(ಸುಗ್ರೀವಾಜ್ಞೆ)ದ ಮೂಲಕ ಮಸೂದೆ ಜಾರಿಗೊಳಿಸಲು ಸರಕಾರ ನಿರ್ಧರಿಸಿದೆ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಮಸೂದೆಗೆ ಅಧ್ಯಾದೇಶ ಮೂಲಕ ಗೋಹತ್ಯೆ ಕರ್ನಾಟಕದಲ್ಲೂ ಯಶಸ್ವಿ ಆಗಲಿದೆ. ಗೋವು ನಮ್ಮ ಭಾರತೀಯ ಸಂಸ್ಕೃತಿಯ, ಶ್ರದ್ದೆಯ ಹಾಗೂ ರೈತರ ಜೀವನಾಧಾರದ ಮೂಲವಾಗಿದೆ. ವರ್ಷದಿಂದ ವರ್ಷಕ್ಕೆ ಗೋವುಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಪಕ್ಷಭೇದವನ್ನು ಮರೆತು ಗೋವುಗಳ ಸಂರಕ್ಷಣೆಗೆ ಎಲ್ಲರೂ ಮುಂದಾದರೆ ನಾಡಿನ ಪಶುಸಂಪತ್ತು ವೃದ್ಧಿಸುತ್ತದೆ. ಕೇವಲ ರಾಜಕೀಯ ದುರುದ್ದೇಶಕ್ಕೆ ಮಸೂದೆಯನ್ನು ವಿರೋಧಿಸಿ ಸಮಾಜದಲ್ಲಿ ಜನಸಾಮಾನ್ಯರ ನಡುವೆ ತಪ್ಪು ಕಲ್ಪನೆ ಮೂಡಿಸುವುದು ಅಸಹನೀಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಜೆಪಿ ಸರಕಾರದ ಅವಧಿಯಲ್ಲಿ 2010ರಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆ ಮಾಡಿದಾಗ ಕೇಂದ್ರ ಸರಕಾರಕ್ಕೆ ಇದ್ದ ಆಕ್ಷೇಪಣೆಗಳನ್ನು ಈಗಿನ ಮಸೂದೆಯಲ್ಲಿ ಸರಿಪಡಿಸಲಾಗಿದೆ. ಹಳೆಯ ಮಸೂದೆಯಲ್ಲಿ ಎಮ್ಮೆ/ಕೋಣಗಳ ಹತ್ಯೆಗೂ ನಿಷೇಧವಿತ್ತು. ಆದರೆ, 2020ರ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕದಲ್ಲಿ 13 ವರ್ಷದೊಳಗಿನ ಎಮ್ಮೆ/ಕೋಣಗಳ ವಧೆಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಕಾಂಗ್ರೆಸ್ ಸರಕಾರದ ಸಮಯದಲ್ಲಿ ಇದ್ದ ಆಕ್ಷೇಪಣೆ ಇಲ್ಲಿ ಪರಿಗಣನೆಗೆ ತೆಗೆದುಕೊಂಡು ಮಸೂದೆ ರೂಪಿಸಲಾಗಿದೆ. ಹೀಗಿದ್ದಾಗಲೂ ಇದನ್ನು ಕಾಂಗ್ರೆಸ್ ವಿರೊಧಿಸುತ್ತಿರುವುದು ನಾಚಿಕೆಗೇಡು ಎಂದು ಟೀಕಿಸಿದರು.

2019ರ ಜಾನುವಾರು ಗಣತಿ ಪ್ರಕಾರ ರಾಜ್ಯದಲ್ಲಿ 2,38,296 ಗೋವುಗಳನ್ನು ಪ್ರತಿವರ್ಷ ವಧೆ ಮಾಡಲಾಗುತ್ತಿದೆ. ಒಂದು ದಿನದ ವಿಳಂಬವು 662 ಗೋವುಗಳ ವಧೆಗೆ ಕಾರಣವಾಗುತ್ತದೆ. ಇದು ಎಚ್ಚರಿಕೆಯ ಗಂಟೆ. ಇದೇ ವೇಗದಲ್ಲಿ ಗೋವುಗಳ ವಧೆ ನಡೆಯುತ್ತ ಹೋದರೆ ಮುಂದಿನ ದಿನಗಳಲ್ಲಿ ಗೋವುಗಳನ್ನು ಪುಸ್ತಕಗಳಲ್ಲಿ ನೋಡುವ ಸಮಯ ದೂರವಿಲ್ಲ. ಅಕ್ರಮ ಗೋವುಗಳ ಸಾಗಣೆ ಮತ್ತು ವಧೆ ತಡೆಯುವುದು ನಮ್ಮ ಆದ್ಯತೆಯಾಗಿದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ ಜಾರಿಗೆ ಬಂದರೆ ಈ ಅಕ್ರಮಗಳಿಗೆ ಕಡಿವಾಣ ಬೀಳಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಗೋವುಗಳ ಸಂರಕ್ಷಣೆಗೆ ಉತ್ತರಪ್ರದೇಶ ಮತ್ತು ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಿಭಿನ್ನವಾದ ಪ್ರಯೋಗಗಳು ನಡೆಯುತ್ತಿದ್ದು ಗೋವುಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಬಂದಿದೆ. ಉದ್ಯೋಗ ಸೃಷ್ಟಿ, ಗೋವಿನ ದೇಶಿ ಉತ್ಪನ್ನಗಳ ಮಾರಾಟ ಮತ್ತು ಬಳಕೆಯೂ ಹೆಚ್ಚುತ್ತಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ನನ್ನ ಎಲ್ಲ ಸಚಿವ ಸಂಪುಟ ಸಹೋದ್ಯೋಗಿಗಳಿಗೆ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ರಾಜ್ಯದ ಎಲ್ಲ ಗೋವುಗಳ ಸಂರಕ್ಷಣೆಯಲ್ಲಿ ತೊಡಗಿರುವುವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News