ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿಗೆ ವಿರಾಟ್ ಕೊಹ್ಲಿ ಆಯ್ಕೆ

Update: 2020-12-28 13:42 GMT

ದುಬೈ: ಕಳೆದ 10 ವರ್ಷಗಳಲ್ಲಿ ಶ್ರೇಷ್ಠ ಪುರುಷ ಕ್ರಿಕೆಟಿಗರಿಗೆ ನೀಡುವ ಸರ್ ಗ್ಯಾರಿ ಫೀಲ್ಡ್ ಸೋಬರ್ಸ್ ಪ್ರಶಸ್ತಿಯನ್ನು ಜಯಿಸಿರುವ ಭಾರತದ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಸೋಮವಾರ ಐಸಿಸಿಯ ಉನ್ನತ ಗೌರವಕ್ಕೆ ಪಾತ್ರರಾದರು. ಕೊಹ್ಲಿಗೆ ದಶಕದ ಏಕದಿನ ಕ್ರಿಕೆಟಿಗ ಪ್ರಶಸ್ತಿಯೂ ಲಭಿಸಿದೆ.

ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ  ಐಸಿಸಿ ದಶಕದ 'ಕ್ರಿಕೆಟ್ ಸ್ಫೂರ್ತಿ' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 2011ರಲ್ಲಿ ನಾಟಿಂಗ್ ಹ್ಯಾಮ್ ನಲ್ಲಿ ವಿಲಕ್ಷಣವಾಗಿ ರನೌಟ್ ಆಗಿದ್ದ ಇಂಗ್ಲೆಂಡ್ ಬ್ಯಾಟ್ಸ್ ಮನ್ ಇಯಾನ್ ಬೆಲ್ ಗೆ ಬ್ಯಾಟಿಂಗ್ ಮುಂದುವರಿಸಲು ಸೂಚನೆ ನೀಡಿದ್ದಕ್ಕೆ ಅಭಿಮಾನಿಗಳಿಂದ ಧೋನಿ ಈ ಗೌರವಕ್ಕೆ ಆಯ್ಕೆಯಾದರು.

ಅಂತರ್ ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಟ್ವಿಟ್ಟರ್ ಮೂಲಕ ಪ್ರಶಸ್ತಿ ಪ್ರಕಟಿಸಿದೆ. 10 ವರ್ಷಗಳಲ್ಲಿ 66 ಅಂತರ್ ರಾಷ್ಟ್ರೀಯ ಶತಕಗಳನ್ನು ಸಿಡಿಸಿರುವ ಕೊಹ್ಲಿ, ಇದೇ ಅವಧಿಯಲ್ಲಿ ಅತ್ಯಂತ ಹೆಚ್ಚು ಅರ್ಧಶತಕಗಳು(94), ಅತ್ಯಂತ ಹೆಚ್ಚು ರನ್(20,396), 70 ಪ್ಲಸ್ ಇನಿಂಗ್ಸ್ ಆಡಿರುವ ಆಟಗಾರರ ಪೈಕಿ ಗರಿಷ್ಠ ಸರಾಸರಿ ಕಾಯ್ದಕೊಂಡಿರುವುದಕ್ಕೆ  ಈ ಗೌರವ ಲಭಿಸಿದೆ ಎಂದು ಐಸಿಸಿ ತಿಳಿಸಿದೆ.

ಐಸಿಸಿ ದಶಕದ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆಯಾಗಿರುವ ಕೊಹ್ಲಿ 10 ವರ್ಷಗಳಲ್ಲಿ 10 ಸಾವಿರಕ್ಕೂ ಅಧಿಕ ರನ್ ಗಳಿಸಿರುವ ಏಕೈಕ ಆಟಗಾರನಾಗಿದ್ದಾರೆ. 61.83ರ ಸರಾಸರಿಯಲ್ಲಿ 39 ಶತಕಗಳು ಹಾಗೂ 48 ಅರ್ಧಶತಕಗಳನ್ನು ಗಳಿಸಿದ್ದಾರೆ.

ಆಸ್ಟ್ರೇಲಿಯದ ಬ್ಯಾಟಿಂಗ್ ಶಕ್ತಿಯಾಗಿರುವ ಸ್ಟೀವನ್ ಸ್ಮಿತ್ ದಶಕದ ಟೆಸ್ಟ್ ಕ್ರಿಕೆಟಿಗ ಹಾಗೂ ಅಫ್ಗಾನಿಸ್ತಾನದ ಸ್ಟಾರ್ ರಶೀದ್ ಖಾನ್ ದಶಕದ ಟ್ವೆಂಟಿ-20 ಕ್ರಿಕೆಟಿಗ ಪ್ರಶಸ್ತಿಗೆ ಐಸಿಸಿ ಆಯ್ಕೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News