''ಮಧುಕರ್ ಶೆಟ್ಟಿಯಂಥ ದಕ್ಷ ಅಧಿಕಾರಿಯಿಂದ ಪೊಲೀಸರ ಘನತೆ ಮತ್ತಷ್ಟು ಹೆಚ್ಚುತ್ತದೆ''

Update: 2020-12-28 13:16 GMT

ಚಿಕ್ಕಮಗಳೂರು, ಡಿ.28: ಮಧುಕರ್ ಶೆಟ್ಟಿಯಂಥ ದಕ್ಷ, ಪ್ರಮಾಣಿಕ ಪೊಲೀಸ್ ಅಧಿಕಾರಿಯಿಂದ ಇಲಾಖೆಯ ಘನತೆ ಮತ್ತಷ್ಟು ಹೆಚ್ಚುತ್ತದೆ. ಅವರು ಇಲಾಖೆಯ ಹೆಮ್ಮೆಯಾಗಿದ್ದಾರೆ. ಜಿಲ್ಲೆಯಲ್ಲಿ ಅವರು ಸೇವೆ ಸಲ್ಲಿಸಿದ ಅವಧಿ ಸ್ಮರಣೀಯವಾಗಿದ್ದು, ಇಂದಿಗೂ ಜನಮಾನಸದಲ್ಲಿ ಹಚ್ಚ ಹಸಿರಾಗಿದೆ. ಅವರ ಕಾರ್ಯವೈಖರಿ ಪೊಲೀಸ್ ಇಲಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಮಾದರಿ ಎಂದು ಪೊಲೀಸ್ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಶಂಕರ್ ಸಿಂಗ್ ಅಭಿಪ್ರಾಯಿಸಿದ್ದಾರೆ.

ದಿವಂಗತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಸ್ಮರಣಾರ್ಥ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಧುಕರ್ ಶೆಟ್ಟಿ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ಸೇವಾ ಅವಧಿ ಜಿಲ್ಲೆಯ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವಂತದ್ದು. ದಕ್ಷತೆ, ಪ್ರಾಮಾಣಿಕತೆಗೆ ಮತ್ತೊಂದು ಹೆಸರಾಗಿದ್ದ ಅವರ ಕಾರ್ಯವೈಖರಿ ಇಂದಿನ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಮಾದರಿಯಾಗಿದೆ ಎಂದರು.

ಜಿಲ್ಲೆಯಲ್ಲಿ ಅವರು ಕೆಲವೇ ಸಮಯ ಎಸ್ಪಿಯಾಗಿ ಕೆಲಸ ಮಾಡಿದ್ದರೂ ಅವರ ಹೆಸರು ಜಿಲ್ಲೆಯಲ್ಲಿ ಪ್ರತಿಯೊಬ್ಬರಿಗೂ ತಿಳಿದಿರುವಂತಾಗಲು ಅವರ ಜನಪರ ಕೆಲಸ ಕಾರಣವಾಗಿದೆ. ಪೊಲೀಸ್ ಇಲಾಖೆಯನ್ನು ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರ ಮಾಡಿದ್ದ ಅವರು, ಜನರ ದೂರು, ದುಮ್ಮಾನಗಳಿಗೆ ಶೀಘ್ರ ಸ್ಪಂದಿಸುತ್ತಿದ್ದರು. ಅವರ ಸೇವಾ ಮನೋಭಾವ ಅವರ ಕಾರ್ಯವೈಖರಿಯನ್ನು ಹತ್ತಿರದಿಂದ ನೋಡಿದ ಜಿಲ್ಲೆಯ ಪೊಲೀಸ್ ಇಲಾಖೆ ಸಿಬ್ಬಂದಿಗೆ ಬೆರಗು ಮೂಡಿಸುವಂತದ್ದಾಗಿತ್ತು ಎಂದ ಅವರು, ನೊಂದ ಜನರ ಬಗ್ಗೆ ಅವರಿಗಿದ್ದ ಕಾಳಜಿ ಅಪಾರ. ಜಿಲ್ಲೆಯಲ್ಲಿ ಅವರ ಕರ್ತವ್ಯದ ಅವಧಿಯಲ್ಲಿ ಯಾವುದಕ್ಕೂ ಅಂಜದೇ ಬಡ ಜನರಿಗಾಗಿ ಕೆಲಸ ಮಾಡಿರುವ ಹೆಜ್ಜೆ ಗುರುತು ಜಿಲ್ಲೆಯಲ್ಲಿ ಇಂದಿಗೂ ಇವೆ. ಇಂತಹ ಅಧಿಕಾರಿಯ ಅಕಾಲಿಕ ನಿಧನದಿಂದಾಗಿ ರಾಜ್ಯದ ಜನರು ಹಾಗೂ ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು

ಮಧುಕರ್ ಶೆಟ್ಟಿ ಅವರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿ ಮಧುಕರ್ ಶೆಟ್ಟಿ ಅವರಿಗೆ ಗನ್‍ಮ್ಯಾನ್ ಆಗಿದ್ದ ಹಾಲಿ ಎಎಸ್ಸೈ ಆಗಿರುವ ಮಂಜುನಾಥ್ ತಮ್ಮ ಅನಿಸಿಕೆ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ದಿವಂಗತ ಪೊಲೀಸ್ ಅಧಿಕಾರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಪೂಜೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಸಂಚಾರಿ ಪೊಲೀಸರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News