ದೇವೇಗೌಡರನ್ನು ಪ್ರಧಾನಿ, ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ಕಾಂಗ್ರೆಸ್ ಶಾಲು: ಡಿ.ಕೆ.ಶಿವಕುಮಾರ್

Update: 2020-12-28 16:26 GMT
File Photo

ಬೆಂಗಳೂರು, ಡಿ. 28: ದೇಶದಲ್ಲಿ ಬಿಜೆಪಿಗೆ ದೊಡ್ಡ ಬಹುಮತ ಬಂದಿದೆ. ಆದರೆ, ದೇಶದಲ್ಲಿ ರೈತರು, ಕಾರ್ಮಿಕರ ವಿಚಾರದಲ್ಲಿ ಎಷ್ಟು ಅಶಾಂತಿ ಮೂಡಿದೆ. ನನ್ನ ಜಿಲ್ಲೆಯಲ್ಲಿ ಟೊಯೋಟಾ ಕಂಪೆನಿ ಇದೆ. ಸಾವಿರಾರು ಕಾರ್ಮಿಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಆದರೆ, ಸರಕಾರ ಅವರ ಸಮಸ್ಯೆ ಏನು ಅಂತಾ ಕೇಳಲು ತಯಾರಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಸೋಮವಾರ ಇಲ್ಲಿನ ಆನಂದ್‍ರಾವ್ ವೃತ್ತದಲ್ಲಿ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಪಕ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟೊಯೋಟಾ ಕಂಪೆನಿಯವರು ಕಾರ್ಮಿಕರ ಜತೆ ಮಾತನಾಡಲು ತಯಾರಿಲ್ಲ ಅಂತಿದ್ದಾರೆ. ಈ ಪರಿಸ್ಥಿತಿ ಯಾಕೆ ಬಂತು? ಈ ದೇಶದಲ್ಲಿ ಬಿಜೆಪಿ ಸರಕಾರ ಕಾರ್ಮಿಕ ಕಾಯ್ದೆ ಸಡಿಲ ಮಾಡಿದ್ದರ ಪರಿಣಾಮ ಇದು ಎಂದು ಟೀಕಿಸಿದರು.

ನಾವು ಕಾಂಗ್ರೆಸ್ ಪಕ್ಷದಲ್ಲಿ ಇದ್ದೇವೆ ಎಂಬುದೇ ಒಂದು ಶಕ್ತಿ. ನಾನು ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ ನಾವೊಂದಷ್ಟು ಮಂದಿ ದಿಲ್ಲಿಗೆ ಹೋಗಿದ್ದೆವು. ಆಗ ಬಾಬು ಜಗಜೀವನ್ ರಾಮ್ ಅವರು ರಾಜೀವ್ ಗಾಂಧಿ ಅವರ ಬಳಿ ಬಂದು ನಾನು ಸಾಯುವ ಮುನ್ನ ಕಾಂಗ್ರೆಸಿಗನಾಗಬೇಕು. ಕಾಂಗ್ರೆಸಿಗನಾಗಿಯೇ ಸಾಯಬೇಕು ಎಂದು ಹೇಳಿಕೊಂಡಿದ್ದರು ಎಂದು ಸ್ಮರಿಸಿದರು.

ಪಕ್ಷದ ಬಗ್ಗೆ ಮಾತನಾಡಿದರೆ ಸಹಿಸಲಾರೆ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾನು ರೈತರ ಹೋರಾಟದಲ್ಲಿ ಭಾಗವಹಿಸುವಾಗ ಹಸಿರು ಶಾಲು ಹಾಕಿಕೊಂಡಿದ್ದನ್ನು ಉಲ್ಲೇಖಿಸಿ ಕಾಂಗ್ರೆಸ್ ಶಾಲಿಗೆ ಶಕ್ತಿ ಇಲ್ಲ, ಹೀಗಾಗಿ ಹಸಿರು ಶಾಲು ಹಾಕಿಕೊಂಡಿದ್ದಾರೆ ಎಂದು ಟೀಕಿಸಿದರು. ಆಗ ನಾನು ಸಾಕಷ್ಟು ತಾಳ್ಮೆಯಿಂದ ಮಾತನಾಡಿದೆ. ನಿಮ್ಮ ತಂದೆಯವರನ್ನು ಈ ದೇಶದ ಪ್ರಧಾನಿಯನ್ನಾಗಿ ಮಾಡಿದ್ದು ಇದೇ ಕಾಂಗ್ರೆಸ್ ಶಾಲು. ನಾವೇ ಬಲವಂತ ಮಾಡಿಯೋ ಏನೋ ಅಂತೂ ಕುಮಾರಸ್ವಾಮಿ ಅವರನ್ನೂ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಇದೇ ಕಾಂಗ್ರೆಸ್ ಶಾಲು ಎಂದು ಹೇಳಿದ್ದೆ. ಅವರು ನನ್ನನ್ನು ವೈಯಕ್ತಿಕವಾಗಿ ನಿಂದಿಸಲಿ, ಸಹಿಸಿಕೊಳ್ಳುತ್ತೇನೆ. ಆದರೆ ಈ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿದರೆ ಈ ಡಿ.ಕೆ.ಶಿವಕುಮಾರ್ ಎಂದಿಗೂ ಸ್ವಾಭಿಮಾನ ಬಿಟ್ಟುಕೊಡುವುದಿಲ್ಲ ಎಂದು ತಿರುಗೇಟು ನೀಡಿದರು.

ಬಿಜೆಪಿ ಒಂದು ವರ್ಗದವರನ್ನು ಗುರಿಯಾಗಿಸಿ ಈಗ ಹೊಸದಾಗಿ ಗೋಹತ್ಯೆ ನಿಷೇಧ ಕಾಯ್ದೆ ತರುತ್ತಿದೆ. ಆದರೆ, ಕಾಂಗ್ರೆಸ್ ಒಂದು ವರ್ಗದ ಬಗ್ಗೆ ಚಿಂತಿಸುತ್ತಿಲ್ಲ. ಒಬ್ಬ ರೈತ ಯಾವುದೇ ಜಾತಿ, ಧರ್ಮದವನಾಗಿರಲಿ ಆತ ಹಸು, ದನಗಳನ್ನು ಸಾಕಿ ಜೀವನ ನಡೆಸುತ್ತಿದ್ದಾನೆ. ಅವನ ರಕ್ಷಣೆಗಾಗಿ ನಾವು ಇಂದು ಹೋರಾಟ ಮಾಡುತ್ತಿದ್ದೇವೆ. ನೀವು ವಯಸ್ಸಾದ ತಂದೆ-ತಾಯಿಯನ್ನು ಬೀದಿಗೆ ಬಿಡುತ್ತೀರಾ ಅಂತಾ ಕೇಳುತ್ತೀರಲ್ಲಾ, ಹಾಗಾದರೆ ವಯಸ್ಸಾದ ಗೋವುಗಳನ್ನು ಸಾಕಲು ರೈತನಿಗೆ ಪ್ರೋತ್ಸಾಹಧನ ನೀಡಿ. ಇದು ಕೇವಲ ಒಂದು ವರ್ಗದ ವಿಚಾರವಲ್ಲ. ಇದು ಒಂದು ಉದ್ಯಮದ ಪ್ರಶ್ನೆ. ಇದು ಒಂದಕ್ಕೊಂದು ಬೆಸೆದುಕೊಂಡಿರುವ ವಿಚಾರ ಎಂದು ಟೀಕಿಸಿದರು.

2021 ಹೋರಾಟ ಹಾಗೂ ಸಂಘಟನೆ ವರ್ಷ: ಹೊಸ ವರ್ಷ ಹೋರಾಟ ಹಾಗೂ ಪಕ್ಷ ಸಂಘಟನೆ ವರ್ಷವಾಗಬೇಕು. ನೀವು ಹಳ್ಳಿ, ಹಳ್ಳಿಯಲ್ಲೂ ಹೋರಾಟ ಪ್ರಾರಂಭ ಮಾಡಬೇಕು. ಜ. 6 ರಿಂದ 18ರವರೆಗೂ ಎಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಚುನಾವಣೆಯಲ್ಲಿ ಸೋತವರು, ಸಂಘ ಸಂಸ್ಥೆಗಳ ಮುಖ್ಯಸ್ಥರ ಸಭೆಯನ್ನು ಮಂಗಳೂರು, ಬಿಡದಿ, ಕಲಬುರಗಿ ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಸಲು ನಿರ್ಧರಿಸಿದ್ದೇನೆ ಎಂದರು.

ಪಕ್ಷ ಕಟ್ಟಲು ಜನರ ಮನಸ್ಸು ಗೆಲ್ಲಬೇಕು. ಇದಕ್ಕಾಗಿ ನೀವೆಲ್ಲರೂ ಹಗಲು-ರಾತ್ರಿ ಒಗ್ಗಟ್ಟಾಗಿ ದುಡಿಯಬೇಕು. ಕೇವಲ ಡಿ.ಕೆ ಶಿವಕುಮಾರ್ ಹಾಗೂ ಮುಂದೆ ಕೂರುವ ನಾಯಕರಿಂದ ಪಕ್ಷ ಕಟ್ಟಲು ಸಾಧ್ಯವಿಲ್ಲ. ನೀವು ನಮಗೆ ಶಕ್ತಿ ನೀಡಬೇಕು ಎಂದ ಅವರು, ಪಕ್ಷ ಬಿಟ್ಟು ಹೋದವರು ಮತ್ತೆ ವಾಪಸ್ಸಾಗಲು ಇಚ್ಚಿಸಿದರೆ ಸ್ವಾಗತಿಸುತ್ತೇನೆ. ಪಕ್ಷಕ್ಕೆ ಯಾವುದೇ ಷರತ್ತು ಇಲ್ಲದೆ ತತ್ವ ಹಾಗೂ ನಾಯಕತ್ವ ನಂಬಿ ಬರುವವರಿಗೆ ಸ್ವಾಗತ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News