ಮುಖ್ಯಮಂತ್ರಿ ಬಿಎಸ್‌ವೈಗೆ ಸಿಗಂದೂರು ದೇವಿ ಶಾಪ ತಟ್ಟಿದೆ: ಬೇಳೂರು ಗೋಪಾಲಕೃಷ್ಣ

Update: 2020-12-28 17:20 GMT

ಶಿವಮೊಗ್ಗ, ಡಿ.28: ಸಿಗಂದೂರು ಶ್ರೀ ಚೌಡೇಶ್ವರಿ ದೇವಿಯ ಶಾಪದಿಂದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಡಿನೋಟಿಫಿಕೇಷನ್ ಕಂಟಕವಾಗಿ ಪರಿಣಮಿಸಿದ್ದು, ಸಂಕ್ರಾತಿ ನಂತರ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಮಾಜಿ ಶಾಸಕ, ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಯಾರದ್ದೋ ಮಾತು ಕೇಳಿಕೊಂಡು ಸಿಗಂದೂರು ದೇವಾಲಯದ ವಿರುದ್ಧ ಇಲ್ಲದ ತಗಾದೆ ತೆಗೆದು ಸಲಹಾ ಸಮಿತಿ ರಚನೆ ಮಾಡಿದ್ದರು. ಸಿಗಂದರೂ ವಿಚಾರವಾಗಿ ಕೈ ಹಾಕಿದರೆ ಯಡಿಯೂರಪ್ಪನವರು ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದ್ದೆ. ಅದು ಈಗ ನಿಜವಾಗುತ್ತಿದೆ. ಶಾಪ ಈಗ ಆರಂಭಗೊಂಡಿದೆ ಎಂದರು.

ಡಿನೋಟಿಫಿಕೇಷನ್ ವಿಚಾರದಲ್ಲಿ ಯಡಿಯೂರಪ್ಪನವರಿಗೆ ಸಂಕಷ್ಟ ಆರಂಭವಾಗಿದೆ. ಸಂಕ್ರಾಂತಿಯ ನಂತರ ಯಡಿಯೂರಪ್ಪನವರು ಅಧಿಕಾರ ಕಳೆದುಕೊಳ್ಳಲಿದ್ದಾರೆ. ಆರೋಪ ಇದ್ದವರನ್ನು ಅಧಿಕಾರದಲ್ಲಿರಲು ಬಿಡುವುದಿಲ್ಲ ಎಂದು  ಹೇಳುವ ಪ್ರಧಾನಿ ಮೋದಿಯವರು ಯಡಿಯೂರಪ್ಪನವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಹೋದರೂ ಕೂಡ ಮೋದಿ- ಅಮಿತ್ ಶಾ ಅವರು ಗಮನಿಸುತ್ತಾರೆ. ಹಾಗಾಗಿ ಸುಪ್ರೀಂಗೆ ಹೋಗುವುದು ಕಷ್ಟ ಎಂದ ಅವರು, ಬಿಜೆಪಿ ಸರ್ಕಾರ ಅಧಿಕಾರದಲ್ಲಿರುತ್ತದೆ. ಆದರೆ ಯಡಿಯೂರಪ್ಪ ಅಧಿಕಾರವಧಿ ಪೂರ್ಣಗೊಳಿಸುವುದಿಲ್ಲ ಎಂದರು.

ಬಿಜೆಪಿ ಉತ್ತರ ಕರ್ನಾಟಕದ ಮುಖಂಡರು ಪ್ರಾದೇಶಿಕ ಪಕ್ಷ ಸ್ಥಾಪನೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಪಕ್ಷದ ಕೆಲ ಶಾಸಕರು ಸಂಕ್ರಾತಿಗೆ ಸಿಹಿ ಸುದ್ದಿ ಎಂದು ಹೇಳುತ್ತಿದ್ದಾರೆ. ಅವರ ಪಕ್ಷದವರಿಗೆ ಯಡಿಯೂರಪ್ಪ ಅವರ ಕುರ್ಚಿ ಕಳೆದುಕೊಳ್ಳುವುದು ಸಿಹಿ ಸುದ್ದಿ ಎನ್ನುತ್ತಿರುವುದು ಇವರ ದುರಾಡಳಿತಕ್ಕೆ ಸಾಕ್ಷಿ ಎಂದರು.

ಹೊಸ ವರ್ಷ ಆಚರಣೆಗೆ ಬ್ರೇಕ್ ಗೆ ಖಂಡನೆ

ಕೊರೋನ ಹರಡುವ ಭೀತಿಯಿಂದ ಹೊಸ ವರ್ಷ ಆಚರಣೆಗೆ ಬ್ರೇಕ್ ಹಾಕಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ದ ಬೇಳೂರು ಆಕ್ರೋಶ ವ್ಯಕ್ತಪಡಿಸಿದರು. ಆರೆಸ್ಸೆಸ್ ನವರ ಮಾತು ಕೇಳಿಕೊಂಡು ರಾಜ್ಯ ಸರ್ಕಾರ ಹೊಸ ವರ್ಷ ಸಂಭ್ರಮಾಚರಣೆಗೆ ನಿಷೇಧ ಹಾಕುವ ಮೂಲಕ ಯುವಕರ ಹಕ್ಕುಗಳನ್ನು ಕಸಿಯಲು ಹೊರಟಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ 15 ರಿಂದ 20 ಸಾವಿರ ಜನ ಸೇರಿಸಿಕೊಂಡು ಸಾಮಾಜಿಕ ಅಂತರವಿಲ್ಲದೇ ಪ್ರಚಾರ ಮಾಡುವಾಗ ರಾಜ್ಯ ಸರ್ಕಾರಕ್ಕೆ ಕೊರೋನ ಇರುವುದು ಗೊತ್ತಿರಲಿಲ್ಲ. ಈಗ ಯುವಕರು ಹೊಸ ವರ್ಷ ಆಚರಣೆ ಮಾಡಿದರೆ ಮಾತ್ರ ಕೊರೋನ ಹರಡುತ್ತಾ ಎಂದು ಪ್ರಶ್ನಿಸಿದ ಅವರು, ಕರ್ಪ್ಯೂ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಕಣ್ಣು, ಕಿವಿ ಎರಡು ಇಲ್ಲ. ರಾತ್ರಿ ಕರ್ಪ್ಯೂ ಜಾರಿ ಮಾಡುತ್ತದೆ, ಬೆಳಗ್ಗೆ ಹಿಂಪಡೆಯುತ್ತದೆ. ಹಾಗಾದರೆ ಸರ್ಕಾರದಲ್ಲಿ ತಜ್ಙರ ಅಭಿಪ್ರಾಯಕ್ಕೆ ಬೆಲೆ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾ.ಪಂ ಚುನಾವಣೆಯಲ್ಲಿ ಹಣ
ಈ ಬಾರಿಯ ಗ್ರಾ.ಪಂ ಚುನಾವಣೆಯಲ್ಲಿ ಭ್ರಷ್ಟಾಚಾರದ ಹಣದ ಸುರಿದಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಶಿಕಾರಿಪುರದಲ್ಲಿ 20 ಸಾವಿರ ರೂ., ಸಾಗರದ ಭಾಗದಲ್ಲಿ 15 ಸಾವಿರ ಹಣ ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇವರಿಗೆ ನಂಬಿಕೆ ಇಲ್ಲ. ಈ ಕಾರಣದಿಂದಾಗಿಯೇ ಹಣ ಸುರಿಯುತ್ತಿದ್ದಾರೆ. ಭ್ರಷ್ಟಾಚಾರದ ಹಣ ಸುರಿಯೋದು ಗೆಲ್ಲೋದು ಇದೇ ಇವರ ಪರಿಪಾಠ. ರಾಜ್ಯದಲ್ಲಿ ಯಾರಿಗೂ ನಿವೇಶನ, ಮನೆ ಕೊಟ್ಟಿಲ್ಲ. ರೈತರಿಗೂ ಒಂದು ಹಕ್ಕುಪತ್ರ ಕೊಟ್ಟಿಲ್ಲ. ಇವರ ಉದ್ದಾರಕ್ಕೆ ಸರ್ಕಾರ ಇಟ್ಟುಕೊಂಡಿದ್ದಾರೆ ಎಂದು ಆರೋಪ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News