ಹಂಪಿ ವಿವಿಗೆ ಅನುದಾನ ನೀಡದಿರುವುದು ಕನ್ನಡ ವಿರೋಧಿ ಧೋರಣೆಗೆ ಸಾಕ್ಷಿ: ಟಿ.ಎಸ್.ನಾಗಾಭರಣ

Update: 2020-12-28 17:35 GMT

ಬೆಂಗಳೂರು, ಡಿ.28: ಜಾಗತೀಕರಣ ಮತ್ತು ಖಾಸಗೀಕರಣದ ಪ್ರಬಲ ಹೊಡೆತಕ್ಕೆ ಸಿಕ್ಕು ಸಾವಿರಾರು ಸಣ್ಣ  ಭಾಷೆಗಳು ಅವಸಾನದ ಅಂಚಿಗೆ ತಲುಪಿವೆ. ಈ ಸಂಬಂಧ ಯೂನೆಸ್ಕೋ ನೀಡಿದ ಎಚ್ಚರ ಕೂಡ ಯಾರ ಕಿವಿಯನ್ನೂ ತಲುಪುತ್ತಿಲ್ಲ. ಇಂತಹ ದುರ್ಭರ ಸಂದರ್ಭದಲ್ಲಿ ಕನ್ನಡ  ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅತ್ಯಮೂಲ್ಯ ಕೊಡುಗೆ ನೀಡುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸೂಕ್ತ ಅನುದಾನ ನೀಡದಿರುವುದು ರಾಜ್ಯ ಸರಕಾರದ ಕನ್ನಡ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣರಿಗೆ ಪತ್ರ ಬರೆದಿರುವ ಅವರು, ಹಂಪಿ ವಿಶ್ವವಿದ್ಯಾಲಯವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕೂಡಲೇ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿ ವಿಶ್ವವಿದ್ಯಾಲಯದ ಪ್ರಗತಿಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

ವಿಶ್ವದಲ್ಲಿಯೆ ಭಾಷೆಗಾಗಿಯೆ ಇರುವ ಏಕೈಕ ವಿಶ್ವವಿದ್ಯಾಲಯವೆಂಬ ಹೆಗ್ಗಳಿಕೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕನ್ನಡದ ಬದುಕಿನ ವಿವೇಕದಂತೆ ಕೆಲಸ ಮಾಡಿದೆ. ಮರೆತು ಹೋಗಬಹುದಾಗಿದ್ದ ನಮ್ಮ ದೇಸಿ ಮಾರ್ಗದ ಹೆಸರುಗಳನ್ನು ಕಟ್ಟಡಗಳಿಗೆ ಇಟ್ಟು, ಯುವಕರ ಭಾವಕೋಶದಲ್ಲಿ ಉಳಿಯುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ.

ಕನ್ನಡ ವಿಶ್ವವಿದ್ಯಾಲಯ ಕೇವಲ ವಿದ್ಯೆಯನ್ನು ನೀಡುವುದಕ್ಕೆ ಸೀಮಿತವಾಗಿರದೆ, ಕನ್ನಡ ನಾಡಿನ ಪ್ರಗತಿಗೆ ಸಂಬಂಧಿಸಿದ ಹಲವು ಆಶಯಗಳ ಬುನಾದಿಯಾಗಿ ಕೆಲಸ ನಿರ್ವಹಿಸುತ್ತಿರುವ ವಿವಿಯ ಉಳಿವಿಗೆ ಮತ್ತು ಕನ್ನಡದ ಅಸ್ಮಿತೆಗೆಗಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳುವ ಸಲುವಾಗಿ ಈಗಾಗಲೇ ನಾಡಿನ ಸಾಹಿತಿಗಳು, ಪ್ರಗತಿಪರ ಚಿಂತಕರಿಂದ “ಹಂಪಿ ಕನ್ನಡ ವಿಶ್ವವಿದ್ಯಾಲಯ ಉಳಿಸಿ’’ ಎಂಬ ಜಾಲತಾಣ ಆಂದೋಲನವು ಪ್ರಾರಂಭವಾಗಿದ್ದು, ಪರಿಸ್ಥಿತಿ ಕೈಮೀರುವ ಮೊದಲೇ ಕನ್ನಡ ವಿವಿಗೆ ಅನುದಾನ ಬಿಡುಗಡೆಗೆ ಶೀಘ್ರ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ನಾಗಾಭರಣ ಪ್ರಸ್ತಾಪಿಸಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ ರಾಜ್ಯ ಸರಕಾರ ಒದಗಿಸುವ ಅನುದಾನ ಮತ್ತು ಕೆಲ ಸಂಘ ಸಂಸ್ಥೆಗಳು ಒದಗಿಸುವ ಸಹಕಾರದಿಂದ ಮುನ್ನಡೆಯುತ್ತಿರುವ ರಾಜ್ಯದ ಮಹತ್ವದ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಹೊಸ ತಲೆಮಾರಿನ ವಿದ್ವಾಂಸರು ವಿಭಿನ್ನ ದೃಷ್ಠಿಕೋನದಲ್ಲಿ ನಾಡು-ನುಡಿಗಳ ಕುರಿತು ಅಧ್ಯಯನ ನಡೆಸಲು ಪ್ರಸ್ತುತ ವಿಶ್ವವಿದ್ಯಾಲಯವು ಅವರಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News