ಕಾಂಗ್ರೆಸ್ 70 ವರ್ಷದಲ್ಲಿ ಕಟ್ಟಿದ್ದನ್ನು, 7 ವರ್ಷದಲ್ಲಿ ಬಿಜೆಪಿ ಮಾರುತ್ತಿದೆ: ಸತೀಶ್ ಜಾರಕಿಹೊಳಿ

Update: 2020-12-28 18:11 GMT

ಬೆಳಗಾವಿ, ಡಿ.28: ಕಾಂಗ್ರೆಸ್ ಪಕ್ಷ 70 ವರ್ಷಗಳ ಕಾಲ ನಿರಂತರ ಶ್ರಮಪಟ್ಟು ದೇಶವನ್ನು ಕಟ್ಟಿದೆ. ಆದರೆ, ಬಿಜೆಪಿಯವರು ಕೇವಲ 7 ವರ್ಷದಲ್ಲಿ ದೇಶವನ್ನು ಮಾರಾಟ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಹಿಲ್ ಗಾರ್ಡನ್‍ನಲ್ಲಿ ಸೋಮವಾರ ನಡೆದ ಕಾಂಗ್ರೆಸ್‍ನ 136ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರಾಷ್ಟದಲ್ಲಿ ಹಲವು ವಿಮಾನ ನಿಲ್ದಾಣ, ರೈಲು ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಬಿಎಸ್ಸೆನ್ನೆಲ್, ಎಚ್‍ಎಎಲ್, ಕಿಮ್ಸ್ ಅಂತಹ ಮಾದರಿ ಸಂಸ್ಥೆಗಳನ್ನು ನಿರ್ಮಿಸಲಾಗಿದೆ. ಆದರೆ, ಬಿಜೆಪಿ ಇಂದು ಇವನ್ನೆಲ್ಲಾ ಮಾರಾಟ ಮಾಡುತ್ತಿದೆ ಎಂದು ದೂರಿದರು.

ಕಾಂಗ್ರೆಸ್ 70 ವರ್ಷದಲ್ಲಿ ಏನೂ ಮಾಡಿಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ನಾವು ಅಭಿವೃದ್ಧಿ ಮಾಡಿದ ಎಲ್ಲವನ್ನೂ ಅವರಿಂದು ಮಾರಾಟಕ್ಕಿಟ್ಟಿದ್ದಾರೆ ಎಂದ ಅವರು, ಕಾಂಗ್ರೆಸ್‍ನ ಆಡಳಿತಾವಧಿಯು ಸುವರ್ಣ ಯುಗವಾಗಿತ್ತು. ಇವರು (ಬಿಜೆಪಿ) ಒಂದೊಂದೆ ಕ್ಷೇತ್ರವನ್ನು ಟಾರ್ಗೆಟ್ ಮಾಡಿಕೊಂಡು ಉದ್ಯಮಿಗಳ ಪಾಲು ಮಾಡುತ್ತಿದ್ದಾರೆ. ಎಲ್ಲವನ್ನು ಮಾರಾಟ ಮಾಡಿ ನಾವು ದೇಶಭಕ್ತರು ಎನ್ನುವುದನ್ನು ಮಾತ್ರ ಬಿಡುತ್ತಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ರಾತ್ರಿ 8 ಗಂಟೆಗೆ ಟಿವಿಯಲ್ಲಿ ಬರ್ತಾರೆ ಅಂದರೆ ಏನೋ ಕಂಟಕ ಕಾದಿದೆ ಅಂತಲೇ ಅರ್ಥ. ಸದ್ಯ ರೈತರು ಅವರ ಮುಂದಿನ ಗುರಿಯಾಗಿದ್ದಾರೆ. ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದಿರುವ ಅನ್ನದಾತರನ್ನು ದೇಶದ್ರೋಹಿ ಪಟ್ಟ ಕಟ್ಟುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷ ಸಂಘಟನೆಗೆ ಒತ್ತು ನೀಡಿ: ಫೆಬ್ರವರಿ ತಿಂಗಳಿನಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು. ಇರುವ ಭಿನ್ನಾಭಿಪ್ರಾಯವನ್ನು ಬದಿಗೊತ್ತಿ, ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗಬೇಕು ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News