ಬುಧವಾರ ಗ್ರಾಮ ಪಂಚಾಯತ್‍ ಚುನಾವಣೆ ಮತ ಎಣಿಕೆ: ಚುನಾವಣಾ ಆಯೋಗದಿಂದ ಸಕಲ ಸಿದ್ಧತೆ

Update: 2020-12-29 17:42 GMT

ಬೆಂಗಳೂರು, ಡಿ. 29: ಚುನಾವಣಾ ಪ್ರಜಾಪ್ರಭುತ್ವ ಮೂಲಕ ಹಳ್ಳಿಗಳನ್ನು ಹಸನು ಮಾಡಿ ಗ್ರಾಮ ಕಟ್ಟುವ ಗ್ರಾಮ ಪಂಚಾಯತ್‍ಗಳ ಚುನಾವಣೆಯು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಡಿ.30ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಈ ಸಂಬಂಧ ಚುನಾವಣಾ ಆಯೋಗವು ಸಕಲ ಸಿದ್ಧತೆ ಕೈಗೊಂಡಿದೆ.

ಕೊರೋನ ಸಂಕಷ್ಟದ ಸಂದರ್ಭದಲ್ಲಿಯೂ ಗ್ರಾ.ಪಂ.ಗಳಿಗೆ ಚುನಾವಣೆ ನಡೆದಿದ್ದು, ಹಲವು ವೈಶಿಷ್ಯತೆಗಳಿಂದ ಕೂಡಿದೆ. ಪಂಚಾಯತ್ ಚುನಾವಣೆ ಪಕ್ಷ ರಹಿತ ಚುನಾವಣೆಯಾದರೂ, ಸಾಕಷ್ಟು ‘ರಾಜಕಾರಣ’ ನಡೆದಿದೆ. ‘ಪಕ್ಷದ ಬೆಂಬಲಿತ ಅಭ್ಯರ್ಥಿ’ ಎನ್ನುವ ಹಣೆಪಟ್ಟಿಯೊಂದಿಗೆ ಕಾರ್ಯಕರ್ತರ ಪಡೆ ಕಟ್ಟಲು ತಾಲೀಮು ಆಗಿರುವ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಸಾಕಷ್ಟು ಬೆವರು ಸುರಿಸಿವೆ. ಮುಂದಿನ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಿಗೆ ರಾಜಕೀಯ ಪಕ್ಷಗಳು ಲೆಕ್ಕಾಚಾರ ಹಾಕಿವೆ.

ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಶೇಷವಾಗಿ ವೈದ್ಯರು, ಇಂಜಿನಿಯರ್ ಗಳು, ಉನ್ನತ ಶಿಕ್ಷಣ ಪಡೆದ ಪದವೀಧರರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕೊರೋನ ಪರಿಣಾಮ ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ಹಿಂದಿರುಗಿದ ಬಳಿಕ ನಡೆದ ಚುನಾವಣೆಯಲ್ಲಿ ಬಹುತೇಕರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿನ ಮತದಾರರು ಹೆಚ್ಚಾಗಿ ಕಾಂಗ್ರೆಸ್ ಪರ ಇರುತ್ತಾರೆ ಎಂಬ ಅಭಿಪ್ರಾಯ ಸಾಮಾನ್ಯವಾಗಿದೆ. ಅಲ್ಲದೆ, ಇದುವರೆಗೂ ವಿಶ್ಲೇಷಣಾಕಾರರು ಅದನ್ನೇ ಪ್ರತಿಪಾದಿಸಿಕೊಂಡು ಬಂದಿದ್ದಾರೆ. ಆದರೆ, ಇದೀಗ ಪಕ್ಷ ರಾಜಕಾರಣ ಹಳ್ಳಿಗಳಿಗೂ ನುಸುಳಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ತಳಪಾಯ ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದ್ದರೆ, ಬಿಜೆಪಿ ತಳಪಾಯ ಗಟ್ಟಿ ಮಾಡಿಕೊಳ್ಳಲು ಮುಂದಾಗಿದೆ. ಇನ್ನು, ಜೆಡಿಎಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ಚುನಾವಣೆಯು ಮಹತ್ವದ್ದಾಗಿದೆ.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳ ಪರವಾಗಿ ನಿಲ್ಲುವ ಉದ್ದೇಶದಿಂದ ವಿಧಾನಮಂಡಲ ಅಧಿವೇಶನವನ್ನೇ ಮೊಟಕುಗೊಳಿಸಲಾಯಿತು. ಅಲ್ಲದೆ, ಸಚಿವರು, ಶಾಸಕರು, ರಾಜಕೀಯ ಪಕ್ಷಗಳ ಮುಖಂಡರು ಆಯಾ ಜಿಲ್ಲೆಗಳಲ್ಲಿಯೇ ಠಿಕಾಣಿ ಹೂಡಿ ಬೆಂಬಲಿತ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದಾರೆ. ಹೀಗಾಗಿ, ಈ ಚುನಾವಣೆಯು ಮೂರು ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ ಎನ್ನಲಾಗುತ್ತಿದೆ.

ಗ್ರಾಮ ಪಂಚಾಯತ್ ಗೆ ಡಿ. 22 ಮತ್ತು 27 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿದೆ. ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದ್ದು, ನಾಳೆ(ಡಿ.30) ಬೆಳಗ್ಗೆ 8 ರಿಂದ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಡಿ.22 ರಂದು ನಡೆದ ಮೊದಲ ಹಂತದಲ್ಲಿ ರಾಜ್ಯದ 3,019 ಗ್ರಾಮ ಪಂಚಾಯತ್ ಗಳ 43,238 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು 1,17,383 ಅಭ್ಯರ್ಥಿಗಳು ಕಣದಲ್ಲಿದ್ದರು. 4,377 ಕ್ಷೇತ್ರಗಳಿಗೆ ಅವಿರೋಧ ಆಯ್ಕೆಯಾಗಿದ್ದರು. ಡಿ. 27 ರಂದು 2,709 ಗ್ರಾಮ ಪಂಚಾಯತ್ ನ 39,378 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಚುನಾವಣೆಯಲ್ಲಿ 1,05,431 ಅಭ್ಯರ್ಥಿಗಳು ಕಣದಲ್ಲಿದ್ದರು. 3,697 ಕ್ಷೇತ್ರಗಳಿಗೆ ಅವಿರೋಧ ಆಯ್ಕೆಯಾಗಿದೆ. 216 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ.

ಮೊದಲ ಹಂತದ ಚುನಾವಣೆಯಲ್ಲಿ ಶೇ. 82.04 ರಷ್ಟು ಹಾಗೂ ಎರಡನೇ ಹಂತದ ಚುನಾವಣೆಯಲ್ಲಿ ಶೇ. 80.71 ರಷ್ಟು ಮತದಾನ ಆಗಿದೆ. ಮತ ಎಣಿಕೆ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಅದಕ್ಕಾಗಿ ರಾಜ್ಯ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮತ ಎಣಿಕೆ ನಡೆಯುವ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪ್ರತಿ ಮತ ಎಣಿಕೆ ಕೇಂದ್ರದಲ್ಲೂ ಮತ ಎಣಿಕೆಗಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪ್ರತಿ ಗ್ರಾಮ ಪಂಚಾಯತ್ ನ ಮತ ಎಣಿಕೆಗೆ ಟೇಬಲ್‍ಗಳನ್ನು ನಿಗದಿಪಡಿಸಲಾಗಿದೆ. ಕೊರೋನ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರದಲ್ಲೂ ನಿಯಮಗಳನ್ನು ಪಾಲಿಸಲಾಗುತ್ತಿದ್ದು, ಮತ ಎಣಿಕೆ ಕೇಂದ್ರದ ಬಳಿ ಜನ ಗುಂಪುಗೂಡದಂತೆ, ಎಚ್ಚರಿಕೆ ವಹಿಸಲಾಗಿದೆ. ಗೆದ್ದ ಅಭ್ಯರ್ಥಿಯ ವಿಜಯೋತ್ಸವ ಆಚರಣೆಗೂ ನಿರ್ಬಂಧ ಹೇರಲಾಗಿದೆ.

ಬೆಟ್ಟಿಂಗ್ ಲೆಕ್ಕಾಚಾರ: ಗ್ರಾಮ ಪಂಚಾಯತ್ ಚುನಾವಣೆಗಳಿಗೆ ಮತದಾನ ಮುಗಿಯುತ್ತಿದ್ದಂತೆ, ಹಳ್ಳಿಗಳಲ್ಲಿ ಚಲಾವಣೆಯಾಗಿರುವ ಮತಗಳನ್ನು ಆಧರಿಸಿ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ ನಡೆದಿದ್ದು, ಹಲವೆಡೆ ಬೆಟ್ಟಿಂಗ್ ಸಹ ಜೋರಾಗಿದೆ. ಚುನಾವಣೆಯಲ್ಲಿ ಇಂತಹವರೇ ಗೆಲ್ಲುತ್ತಾರೆ ಎಂದು ನೂರು ರೂ.ನಿಂದ ಲಕ್ಷಾಂತರ ರೂ.ಗಳವರೆಗೂ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಕೆಲವರು ಬೆಟ್ಟಿಂಗ್‍ಗಾಗಿ ಹೊಲ, ಮನೆಗಳನ್ನೂ ಪಣಕ್ಕಿಟ್ಟಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News