ರಾಮಮಂದಿರದ ಅಡಿಪಾಯದಡಿ ಸರಯೂ ನದಿ ಹರಿವು: ಹೊಸ ಮಾದರಿ ರೂಪಿಸಲು ರಾಮಜನ್ಮಭೂಮಿ ಟ್ರಸ್ಟ್ ನಿರ್ಧಾರ

Update: 2020-12-30 17:22 GMT

ಹೊಸದಿಲ್ಲಿ, ಡಿ.30: ರಾಮಮಂದಿರದ ಅಡಿಪಾಯಕ್ಕಾಗಿ ಈಗ ಅಸ್ತಿತ್ವದಲ್ಲಿರುವ ಮಾದರಿಯ ಕೆಳಗೆ ಸರಯೂ ನದಿಯ ಹರಿವು ಕಂಡುಬಂದ ಹಿನ್ನೆಲೆಯಲ್ಲಿ ಉತ್ತಮ ಮಾದರಿಯನ್ನು ರೂಪಿಸಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಶದ ಪ್ರಮುಖ ಐಐಟಿಗಳ ಇಂಜಿನಿಯರ್‌ಗಳನ್ನು ಕೋರಿದೆ ಎಂದು ವರದಿಯಾಗಿದೆ.

ರಾಮಮಂದಿರ ನಿರ್ಮಾಣ ಕಾರ್ಯದ ಮೇಲುಸ್ತುವಾರಿ ವಹಿಸಿರುವ ಸಮಿತಿಯು ಪ್ರಧಾನಿಯವರ ಮಾಜಿ ಮುಖ್ಯ ಕಾರ್ಯದರ್ಶಿ ನೃಪೇಂದ್ರ ಶರ್ಮ ನೇತೃತ್ವದಲ್ಲಿ ಬುಧವಾರ (ಡಿಸೆಂಬರ್ 29ರಂದು) ಸಭೆ ಸೇರಿ ಈ ಕುರಿತು ಚರ್ಚಿಸಿದೆ. ದೇವಾಲಯ ನಿರ್ಮಾಣವಾಗಲಿರುವ ಸ್ಥಳದ ಕೆಳಗಡೆ ಸರಯೂ ನದಿಯ ಹರಿವು ಕಂಡುಬಂದಿರುವುದರಿಂದ ಈ ಅಡಿಪಾಯ ಮಾದರಿ ಕಾರ್ಯಸಾಧ್ಯವಲ್ಲ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಮಾದರಿಯನ್ನು ರೂಪಿಸುವಂತೆ ಐಐಟಿ ಮುಂಬೈ, ಐಐಟಿ ದಿಲ್ಲಿ, ಐಐಟಿ ರೂರ್ಕಿ, ನ್ಯಾಷನಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್, ಟಾಟಾ ಕನ್ಸಲ್ಟೆನ್ಸಿ, ಲಾರ್ಸನ್ ಆ್ಯಂಡ್ ಟೂಬ್ರೋ ಸೇರಿದಂತೆ ಪ್ರಮುಖ ಸಂಸ್ಥೆಗಳ ಇಂಜಿನಿಯರ್‌ಗಳನ್ನು ವಿನಂತಿಸಲಾಗಿದೆ.

 ಸಭೆಯಲ್ಲಿ ಎರಡು ಆಯ್ಕೆಯ ಬಗ್ಗೆ ಚರ್ಚಿಸಲಾಗಿದೆ. ಕಲ್ಲುಗಳನ್ನು ಇಡಬಹುದಾದ ತೇಲುವ ಆಧಾರಗಳನ್ನು ‘ವೈಬ್ರೋ ಸ್ಟೋನ್ ಕಾಲಂ’ ಮೂಲಕ ಗಟ್ಟಿಗೊಳಿಸುವುದು.(ಜಲ್ಲಿ ಅಥವಾ ಕಲ್ಲಿನ ಹುಡಿಯನ್ನು ಕಂಪನದಿಂದ ಸಂಕುಚಿತಗೊಳಿಸಿ ದುರ್ಬಲ ಮಣ್ಣನ್ನು ಗಟ್ಟಿಗೊಳಿಸುವ ತಂತ್ರಜ್ಞಾನ). ಎರಡನೆಯ ಆಯ್ಕೆ- ವಿಶೇಷ ತಂತ್ರಜ್ಞಾನದಿಂದ ತಯಾರಿಸಿದ ಎರಕವನ್ನು ಮಿಶ್ರ ಮಾಡುವ ಮೂಲಕ ಮಣ್ಣಿನ ಹಿಡಿತ ಮತ್ತು ಗುಣಮಟ್ಟವನ್ನು ಸುಧಾರಿಸುವುದು. ಅಯೋಧ್ಯೆಯ ರಾಮಮಂದಿರದ ರಚನಾತ್ಮಕ ಸ್ಥಿರತೆಯನ್ನು ಖಾತರಿಪಡಿಸುವ ಮಾದರಿಯನ್ನು ರೂಪಿಸಲು ದೇಶದ ಉನ್ನತ ಐಐಟಿಗಳ ಇಂಜಿನಿಯರ್‌ಗಳು ಕಾರ್ಯ ನಿರ್ವಹಿಸಲಿದ್ದಾರೆ .

ಮಂದಿರದ ಸ್ತಂಭಗಳು ಸಾವಿರಾರು ವರ್ಷ ಬಾಳಿಕೆ ಬರಬೇಕೆಂಬ ಉದ್ದೇಶವಿದೆ. ಸರಯೂ ನದಿಯ ಹರಿವು ಕಂಡುಬಂದ ಬಳಿಕ ಅಡಿಪಾಯ ಸ್ತಂಭಗಳ ವಿನ್ಯಾಸ ಕಾರ್ಯವನ್ನು ಮುಂದೂಡಲಾಗಿದೆ ಎಂದು ವಿಶ್ವಹಿಂದು ಪರಿಷದ್ ಮುಖ್ಯಸ್ಥ ಅಲೋಕ್ ಕುಮಾರ್ ಹೇಳಿದ್ದಾರೆ. ಆಧಾರ ಸ್ತಂಭಗಳ ಪರೀಕ್ಷೆ ನಡೆಸುವ ಸಂದರ್ಭ, ನೀರಿನ ಒತ್ತಡ ಗಮನಕ್ಕೆ ಬಂದಿದೆ. ಅಡಿಪಾಯ ಸ್ತಂಭಗಳ ಮೇಲೆ ಸುಮಾರು 700 ಟನ್‌ಗಳಷ್ಟು ಭಾರ ಇಟ್ಟಾಗ ಸ್ತಂಭ ಸುಮಾರು 4 ಇಂಚಿನಷ್ಟು ಕುಸಿದಿವೆ. ಅಲ್ಲದೆ ಸ್ತಂಭಗಳಲ್ಲಿ ಬಿರುಕು ಬಿಟ್ಟ ಸೂಚನೆ ಕಂಡುಬಂದಿದೆ. ಈ ಪ್ರದೇಶ ಭೂಕಂಪ ವಲಯದಲ್ಲಿರುವುದರಿಂದ ರಚನಾತ್ಮಕವಾಗಿ ಸುರಕ್ಷಿತ ಮಾದರಿಯನ್ನು ರೂಪಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಅಲೋಕ್ ಕುಮಾರ್ ಹೇಳಿರುವುದಾಗಿ ‘ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ. ಈಗ 70 ಎಕರೆ ಪ್ರದೇಶ ನಿಗದಿಯಾಗಿರುವ ರಾಮಮಂದಿರ ಸಂಕೀರ್ಣಕ್ಕೆ ಹೆಚ್ಚುವರಿ ಜಮೀನಿನ ಅಗತ್ಯವಿದ್ದು 108 ಎಕರೆ ಪ್ರದೇಶಕ್ಕೆ ವಿಸ್ತರಿಸುವ ಯೋಜನೆಯಿದೆ. ಇದಕ್ಕೆ ಅಗತ್ಯವಿರುವ ಜಮೀನನ್ನು ಪಡೆದ ಬಳಿಕ ಅಲ್ಲಿ ಮ್ಯೂಸಿಯಂ, ಸಭಾಂಗಣ, ಪ್ರಾರ್ಥನಾ ಸಭಾಂಗಣವನ್ನು ನಿರ್ಮಿಸಲಾಗುವುದು. ಮಂದಿರದ ಸುತ್ತಮುತ್ತಲಿನ ಭೂಮಿಯ ಮಾಲಿಕರನ್ನು ಸಂಪರ್ಕಿಸಲಾಗಿದೆ. ಅವರು ಭೂಮಿ ನೀಡಲು ಒಪ್ಪಿದರೆ ಪರಿಹಾರ ನೀಡಲಾಗುವುದು ಎಂದು ಕುಮಾರ್ ಹೇಳಿರುವುದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News