ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿ ಅಧಿಕಾರ ಜಿಲ್ಲಾಧಿಕಾರಿಗಳಿಗೆ ನೀಡಬೇಕು: ಎಚ್.ಕೆ.ಕುಮಾರಸ್ವಾಮಿ

Update: 2021-01-01 13:45 GMT

ಬೆಂಗಳೂರು, ಜ. 1: ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿ ಪಡಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಇಂದಿಲ್ಲಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಗ್ರಾ.ಪಂ. ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಶೀಘ್ರದಲ್ಲೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸರಕಾರ ಮೀಸಲಾತಿ ಪ್ರಕಟಿಸಬೇಕು ಎಂದು ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಮರುಕಳಿಸದಂತೆ ನ್ಯಾಯಯುತ ಮತ್ತು ಪಾರದರ್ಶಕವಾಗಿ ಮಾಡಬೇಕು. ಅಲ್ಲದೆ, ಮೀಸಲಾತಿ ನಿಗದಿಪಡಿಸುವಾಗ ಯಾವುದೇ ಕಾರಣಕ್ಕೂ ಪಕ್ಷಪಾತ ಆಗಬಾರದು ಎಂದ ಅವರು, ಅಧಿಕಾರ ವಿಕೇಂದ್ರಿಕರಣದ ಮೂಲವಾಗಿರುವ ಪಂಚಾಯಿತಿ ವ್ಯವಸ್ಥೆಯಲ್ಲಿ ರಾಜಕೀಯ ಸರಿಯಲ್ಲ ಎಂದರು.

ಮುನ್ನೆಚ್ಚರಿಕೆ ಅಗತ್ಯ: ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲಾಗಿದೆ. ಆದರೆ, ರಾಜ್ಯದಲ್ಲಿ ರೂಪಾಂತರಿತ ಕೊರೋನ ವೈರಸ್ ಭೀತಿಯೂ ಇದ್ದು ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ಮುನ್ನಚ್ಚರಿಕೆ ವಹಿಸಬೇಕು ಎಂದ ಅವರು, ಕೆಲ ಶಾಲೆಗಳಲ್ಲಿ ಅಗತ್ಯ ಮೂಲ ಸೌಲಭ್ಯಗಳೇ ಇಲ್ಲ. ಮಕ್ಕಳು ಅನಾರೋಗ್ಯಕ್ಕೀಡಾದರೆ ಅದರ ಹೊಣೆಯನ್ನು ಸರಕಾರವೇ ಹೊರಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News