ಶಾಲಾ ಆರಂಭಕ್ಕೆ ಜನತೆಯಿಂದ ಅದ್ದೂರಿ ಸ್ವಾಗತ, ಪೋಷಕರಲ್ಲಿ ಸಂಭ್ರಮ: ಶಿಕ್ಷಣ ಸಚಿವ ಸುರೇಶ್‍ ಕುಮಾರ್

Update: 2021-01-01 14:33 GMT

ಬೆಂಗಳೂರು, ಜ.1:  ಶಾಲೆ ಪ್ರಾರಂಭವಾದ ಮೊದಲ ದಿನ ರಾಜ್ಯದೆಲ್ಲೆಡೆ ಶಾಲಾ ಪರಿಸರದಲ್ಲಿ ಮಕ್ಕಳ ಕಲರವ ಕೇಳಿ ಬಂದಿದ್ದು, ಮಕ್ಕಳು ಮತ್ತು ಪೋಷಕರಲ್ಲಿ ಸಂಭ್ರಮ ಮನೆ ಮಾಡಿದೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಶಾಲೆ ಪ್ರಾರಂಭವಾದ ಮೊದಲ ದಿನ ಆನೇಕಲ್ ತಾಲೂಕಿನ ಸುತ್ತಮುತ್ತಲ ಪ್ರದೇಶದಲ್ಲಿರುವ ಶಾಲಾ ಕಾಲೇಜುಗಳಿಗೆ ಭೇಟಿ, ಪರಿಶೀಲಿಸಿ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ ಕೊರೋನ ಓಡಿಸೋಣ... ನಮ್ಮ ಮಕ್ಕಳನ್ನು ಸುರಕ್ಷಿತ ವಾತಾವರಣದಲ್ಲಿ ಓದಿಸೋಣ... ಎಂಬ ಧ್ಯೇಯವಾಕ್ಯದೊಂದಿಗೆ ಶಾಲೆಗಳು ಆರಂಭವಾಗಿರುವುದಕ್ಕೆ ರಾಜ್ಯದೆಲ್ಲೆಡೆಯಿಂದ ಅದ್ದೂರಿ ಸ್ವಾಗತ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿರುವ 5,492 ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾಗಿರುವ 2,41,965 ವಿದ್ಯಾರ್ಥಿಗಳಲ್ಲಿ 78,794(ಶೇ.32.56) ಮಂದಿ ಹಾಜರಾಗಿದ್ದಾರೆ. ಹಾಗೂ 16,850 ಪ್ರೌಢಶಾಲೆಗಳಲ್ಲಿ 10ನೇ ತರಗತಿಗೆ ದಾಖಲಾಗಿರುವ 9,27,472 ವಿದ್ಯಾರ್ಥಿಗಳಲ್ಲಿ 3,80,264(ಶೇ.41) ಹಾಜರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.     

ಎಲ್ಲರ ಸಹಕಾರದಿಂದ ಶಾಲೆಗಳು ಆರಂಭ: ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತಗಳು, ಜನಪ್ರತಿನಿಧಿಗಳು ಎಲ್ಲರೂ ಒಗ್ಗಟ್ಟಾಗಿ ನಮ್ಮ ಮಕ್ಕಳ ಭವಿಷ್ಯಕ್ಕೆ ಒಂದು ರೀತಿಯ ಕಾಯಕಲ್ಪವನ್ನು ದೊರಕಿಸಿಕೊಟ್ಟಿದ್ದಾರೆ. ರಾಜ್ಯದ ಎಲ್ಲ ಜನಪ್ರತಿನಿಧಿಗಳು ಸಹಕರಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

10ನೇ ತರಗತಿ ಮತ್ತು ದ್ವಿತೀಯ ಪಿಯು ತರಗತಿಗಳು ಬೆಳಗ್ಗೆ ಆರಂಭವಾದರೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನದ ಪಾಳಿಗಳಲ್ಲಿ 6ರಿಂದ 9ನೇ ತರಗತಿಗಳ ವಿದ್ಯಾಗಮ ತರಗತಿಗಳು ಶಾಲಾವರಣದಲ್ಲಿ ಪುಟ್ಟಪುಟ್ಟ ತಂಡಗಳಲ್ಲಿ ಆರಂಭಗೊಂಡವು. ಹಲವಾರು ಕಡೆಗಳಲ್ಲಿ ಕೆಲವು ಮಕ್ಕಳು ತಮ್ಮದೇ ಆದ ಸ್ಯಾನಿಟೈಜ್ ಬಾಟಲಿಗಳನ್ನು ಜೊತೆಗಿಟ್ಟುಕೊಂಡಿದ್ದರು. ಮಾಸ್ಕ್ ಮರೆತು ಬಂದ ಮಕ್ಕಳಿಗೆ ಶಾಲೆಯ ಶಿಕ್ಷಕರು ಮಾಸ್ಕ್ ಗಳನ್ನು ನೀಡಿದ್ದಾರೆಂದು ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಶಾಲೆಗೆ ಬರುವುದರಿಂದ ಹಿಡಿದು ಶಾಲೆಯಿಂದ ಹೋಗುವ ತನಕವೂ ಒಬ್ಬರಿಗೊಬ್ಬರು ಸುರಕ್ಷಿತ ಅಂತರ ಕಾಪಾಡಿಕೊಳ್ಳುವಂತೆ ಶಿಕ್ಷಕರು ನೋಡಿಕೊಂಡಿದ್ದಾರೆ. ಮೊದಲ ದಿನವಾದ ಇಂದು ತರಗತಿಗಳಲ್ಲಿ ಕೋವಿಡ್ ಕುರಿತು ಮುಂಜಾಗ್ರತ ಕ್ರಮಗಳು, ಅನುಸರಿಸಬೇಕಾದ ನಿಯಮಗಳು, 10 ಮತ್ತು 12ನೇ ತರಗತಿಗಳ ಶಿಕ್ಷಣದ ಮಹತ್ವವನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News