2 ಬೇಡಿಕೆ ಕೈಬಿಡುವ ಪ್ರಶ್ನೆಯೇ ಇಲ್ಲ: ರೈತರ ಪಟ್ಟು

Update: 2021-01-01 15:06 GMT

ಹೊಸದಿಲ್ಲಿ, ಜ.1: ಹೊಸ ವರ್ಷದ ಆರಂಭದ ದಿನವಾದ ಶುಕ್ರವಾರ ದಿಲ್ಲಿಯಲ್ಲಿ ಕನಿಷ್ಠ ತಾಪಮಾನ 1.1 ಡಿಗ್ರಿ ಸೆಲ್ಶಿಯಸ್‌ಗೆ ಕುಸಿದು ಮೈಕೊರೆಯುವ ಚಳಿ ದಾಖಲಾಗಿದ್ದರೂ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ತಮ್ಮ 2 ಬೇಡಿಕೆಗಳನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ.

ನವೆಂಬರ್ 26ರಿಂದ ರೈತರ ಪ್ರತಿಭಟನೆ ನಡೆಯುತ್ತಿರುವ ದಿಲ್ಲಿಯ ಸಿಂಘು, ಘಾಜಿಪುರ ಮತ್ತು ಟಿಕ್ರಿ ಗಡಿಭಾಗದಲ್ಲಿ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಕೃಷಿ ಕಾಯ್ದೆಯ ರದ್ದತಿ ಮತ್ತು ಕನಿಷ್ಠ ಬೆಂಬಲ ಬೆಲೆಯ ಕುರಿತು ಕಾನೂನುಬದ್ಧ ಖಾತರಿ- ಈ ಎರಡು ಬೇಡಿಕೆಗಳಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ. ಕೃಷಿ ತ್ಯಾಜ್ಯ ಸುಡುವ ರೈತರಿಗೆ ದಂಡ ವಿಧಿಸುವ ಹಾಗೂ ಪ್ರಸ್ತಾವಿತ ವಿದ್ಯುತ್‌ಶಕ್ತಿ ತಿದ್ದುಪಡಿ ಕಾಯ್ದೆಯನ್ನು ತಡೆಹಿಡಿಯುವ ನಮ್ಮ ಬೇಡಿಕೆಗೆ ಸರಕಾರ ಸ್ಪಂದಿಸಿದೆ. ಆದರೆ ಉಳಿದ ಎರಡು ಬೇಡಿಕೆಗಳ ಬಗ್ಗೆಯೂ ನಮ್ಮ ನಿಲುವು ಸ್ಪಷ್ಟವಾಗಿದೆ ಎಂದು ಹಿರಿಯ ರೈತ ಮುಖಂಡ ಗುರ್ನಾಮ್ ಸಿಂಗ್ ಚಾಡುನಿ ಹೇಳಿದ್ದಾರೆ.

  ಕೃಷಿ ಕಾಯ್ದೆ ರದ್ದತಿ ಬೇಡಿಕೆ ಕೈಬಿಟ್ಟು ಪರ್ಯಾಯ ಬೇಡಿಕೆ ಪ್ರಸ್ತಾವಿಸುವ ಕೇಂದ್ರ ಸರಕಾರದ ಮನವಿ ಸ್ವೀಕಾರಾರ್ಹವಲ್ಲ. ಹೊಸ ಕಾಯ್ದೆಗಳು ಕೃಷಿ ಮಾರುಕಟ್ಟೆ, ಕೃಷಿ ಭೂಮಿ ಮತ್ತು ಆಹಾರ ಪೂರೈಕೆ ಪ್ರಕ್ರಿಯೆಯ ನಿಯಂತ್ರಣವನ್ನು ಸಂಸ್ಥೆಗಳ ಕೈಗೆ ಒಪ್ಪಿಸುತ್ತವೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಹೇಳಿದೆ. ಈ ಮಧ್ಯೆ, ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಿರುವುದಾಗಿ ದಿಲ್ಲಿ ಸಂಚಾರಿ ಪೊಲೀಸರ ಹೇಳಿಕೆ ತಿಳಿಸಿದೆ. ಟಿಕ್ರಿ, ಧನ್ಸ ಗಡಿಯನ್ನು ಮುಚ್ಚಿದ್ದು ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆಯನ್ನು ಬಳಸಬೇಕು. ಜಟಿಕಾರ ಗಡಿಯಲ್ಲಿ ಲಘುವಾಹನಗಳಿಗೆ , ದ್ವಿಚಕ್ರ ವಾಹನ ಮತ್ತು ಪಾದಚಾರಿಗಳಿಗೆ ಮಾತ್ರ ಅವಕಾಶವಿದೆ. ಚಿಲ್ಲ ಮತ್ತು ಘಾಜಿಪುರ ಗಡಿಯನ್ನು ವಾಹನಸಂಚಾರಕ್ಕೆ ಬಂದ್ ಮಾಡಲಾಗಿದೆ. ವಾಹನ ಸವಾರರು ಆನಂದ್‌ವಿಹಾರ, ಡಿಎನ್‌ಡಿ, ಅಪ್ಸರ, ಭೋಪ್ರ ಗಡಿಗಳ ಪರ್ಯಾಯ ರಸ್ತೆಯನ್ನು ಬಳಸಬೇಕು ಎಂದು ಸಂಚಾರಿ ಪೊಲೀಸರ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News