ತನ್ನ ಜೊತೆ ಯುದ್ಧಕ್ಕೆ ‘ನೆಪ ಹುಡುಕುತ್ತಿರುವ’ ಟ್ರಂಪ್: ಇರಾನ್ ಆರೋಪ

Update: 2021-01-01 16:35 GMT

ಟೆಹರಾನ್ (ಇರಾನ್), ಜ. 1: ಇರಾನ್ ಜೊತೆಗೆ ಯುದ್ಧ ಮಾಡುವುದಕ್ಕೆ ಅಮೆರಿಕದ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ನೆಪ’ವೊಂದನ್ನು ಸೃಷ್ಟಿಸುತ್ತಿದ್ದಾರೆ ಎಂದು ಇರಾನ್ ವಿದೇಶ ಸಚಿವ ಮುಹಮ್ಮದ್ ಜವಾದ್ ಝಾರಿಫ್ ಗುರುವಾರ ಆರೋಪಿಸಿದ್ದಾರೆ.

ಇರಾನ್‌ನ ಉನ್ನತ ಸೇನಾಧಿಕಾರಿ ಖಾಸಿಮ್ ಸುಲೈಮಾನಿ ಅಮೆರಿಕದ ಡ್ರೋನ್ ದಾಳಿಯಲ್ಲಿ ಹತರಾದ ಮೊದಲ ವಾರ್ಷಿಕ ದಿನಕ್ಕೆ ಪೂರ್ವಭಾವಿಯಾಗಿ ಇರಾನ್ ವಿದೇಶ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿರುವ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಸುಲೈಮಾನಿಯ ವಾಹನಗಳ ಸಾಲಿನ ಮೇಲೆ ಜನವರಿ 3ರಂದು ನಿಖರ ದಾಳಿ ನಡೆದಿತ್ತು.

ನವೆಂಬರ್ ಬಳಿಕ ಅಮೆರಿಕದ ವಿಮಾನವಾಹಕ ಯುದ್ಧನೌಕೆ ಯುಎಸ್‌ಎಸ್ ನಿಮಿಟ್ಝ್ ಕೊಲ್ಲಿ ಸಮುದ್ರದಲ್ಲಿ ಗಸ್ತು ತಿರುಗುತ್ತಿದೆ ಹಾಗೂ ಈ ವಲಯದ ಮೇಲೆ ಅಮೆರಿಕದ ಎರಡು ಬಿ-52 ಬಾಂಬರ್ ವಿಮಾನಗಳು ಇತ್ತೀಚೆಗೆ ಹಾರಾಟ ನಡೆಸಿವೆ.

‘‘ಅಮೆರಿಕದಲ್ಲಿ ಕೊರೋನ ವೈರಸ್ ವಿರುದ್ಧ ಹೋರಾಡುವ ಬದಲು, ಡೊನಾಲ್ಡ್ ಟ್ರಂಪ್ ಮತ್ತು ಅವರ ಸಂಗಡಿಗರು ಬಿ-52 ವಿಮಾನಗಳನ್ನು ಹಾರಿಸಲು ಹಾಗೂ ನಮ್ಮ ವಲಯಕ್ಕೆ ಯುದ್ಧನೌಕೆಗಳನ್ನು ಕಳುಹಿಸಲು ಬಿಲಿಯಗಟ್ಟಳೆ ಡಾಲರ್ ವ್ಯರ್ಥಗೊಳಿಸುತ್ತಿದ್ದಾರೆ’’ ಎಂದು ಝಾರಿಫ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News